ಡಿ ರೂಪಾ ವಿರುದ್ಧ ದೂರು ನೀಡಿದ್ದ ಐಪಿಎಸ್ ಅಧಿಕಾರಿ ವರ್ತಿಕಾ ಕಟಿಯಾರ್ ವರ್ಗಾವಣೆ
ಬೆಂಗಳೂರು: ಹಿರಿಯ ಐಪಿಎಸ್ ಅಧಿಕಾರಿ ರೂಪಾ ಡಿ ಮೌದ್ಗಿಲ್ ಅವರ ವಿರುದ್ಧ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಲಿಖಿತ ದೂರು ನೀಡಿದ್ದ ಐಪಿಎಸ್ ಅಧಿಕಾರಿ ವರ್ತಿಕಾ ಕಟಿಯಾರ್ ಅವರನ್ನು ಸೋಮವಾರ ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಮಾಡಲಾಗಿದೆ.
2010 ರ ಬ್ಯಾಚ್‌ನ ಐಪಿಎಸ್, ಆಂತರಿಕ ಭದ್ರತಾ ವಿಭಾಗದ ಡಿಐಜಿಯಾಗಿದ್ದ ವರ್ತಿಕಾ ಕಟಿಯಾರ್ ಅವರನ್ನು ಸಿವಿಲ್ ಡಿಫೆನ್ಸ್ ಮತ್ತು ಹೋಮ್ ಗಾರ್ಡ್ ವಿಭಾಗಕ್ಕೆ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಇಂದು ಆದೇಶ ಹೊರಡಿಸಿದೆ.
ರೂಪಾ ಅವರ ವಿರುದ್ಧ ದೂರು ನೀಡಿದ ಬೆನ್ನಲ್ಲೇ ವರ್ತಿಕಾ ಅವರನ್ನು ಗೃಹ ರಕ್ಷಕ ದಳದ ಡಿಐಜಿ ಮತ್ತು ಹೆಚ್ಚುವರಿ ಕಮಾಂಡೆಂಟ್ ಆಗಿ ವರ್ಗಾವಣೆ ಮಾಡಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಆದಾಗ್ಯೂ, ಕರ್ನಾಟಕ ಸರ್ಕಾರ ಹೊರಡಿಸಿದ ಆದೇಶದಲ್ಲಿ ವರ್ಗಾವಣೆಗೆ ಯಾವುದೇ ಕಾರಣವನ್ನು ನೀಡಿಲ್ಲ.
ಕಳೆದ ತಿಂಗಳು, ಕಟಿಯಾರ್ ಅವರು 2000 ಬ್ಯಾಚ್‌ನ ಐಪಿಎಸ್ ಅಧಿಕಾರಿ ರೂಪಾ ಡಿ ಮೌದ್ಗಿಲ್ ವಿರುದ್ಧ ರಾಜ್ಯ ಸರ್ಕಾರ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಲಿಖಿತ ದೂರು ನೀಡಿದ್ದರು. ರೂಪಾ ಅವರು ತಮ್ಮ ಅನುಪಸ್ಥಿತಿಯಲ್ಲಿ ಇಬ್ಬರು ಕಿರಿಯ ಪೊಲೀಸ್ ಅಧಿಕಾರಿಗಳ ಮೂಲಕ ನಿಯಂತ್ರಣ ಕೊಠಡಿಯಿಂದ ಕೀ ತೆಗೆದುಕೊಂಡು ತಮ್ಮ ಕಚೇರಿ ಪ್ರವೇಶಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಸೆಪ್ಟೆಂಬರ್ 6, 2024 ರಂದು ರೂಪಾ ಅವರ ಆದೇಶದ ಮೇರೆಗೆ ಹೆಡ್ ಕಾನ್ಸ್‌ಟೇಬಲ್ ಮಂಜುನಾಥ್ ಮತ್ತು ಗೃಹರಕ್ಷಕ ದಳದ ಮಲ್ಲಿಕಾರ್ಜುನ್ ಅನುಮತಿಯಿಲ್ಲದೆ ನನ್ನ ಕೊಠಡಿಗೆ ಪ್ರವೇಶಿಸಿದ್ದು, ದಾಖಲೆಗಳನ್ನು ಕಳವು ಮಾಡಿದ್ದಾರೆ. ಮಲ್ಲಿಕಾರ್ಜುನ್ ಅವರು ನಿಯಂತ್ರಣ ಕೊಠಡಿಯಿಂದ ಕೀಲಿಯನ್ನು ತೆಗೆದುಕೊಂಡು ಕೊಠಡಿಯನ್ನು ತೆರೆದರೆ, ಮಂಜುನಾಥ್ ಫೈಲ್‌ಗಳ ಛಾಯಾಚಿತ್ರಗಳನ್ನು ತೆಗೆದುಕೊಂಡು ವಾಟ್ಸಾಪ್ ಮೂಲಕ ಐಜಿಪಿಗೆ ಕಳುಹಿಸಿದ್ದಾರೆ ಎಂದು ವರ್ತಿಕಾ ಆರೋಪಿಸಿದ್ದಾರೆ.
ರೂಪಾ ಅವರನ್ನು ಪ್ರಸ್ತುತ ಆಂತರಿಕ ಭದ್ರತಾ ವಿಭಾಗದಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್ ಆಗಿ ನೇಮಿಸಲಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ