
ಬೆಂಗಳೂರು: ವಿಜ್ಞಾನ ಮತ್ತು ಸಮಾಜ ವಿಜ್ಞಾನದ ಎಸ್‌ಎಸ್‌ಎಲ್‌ಸಿ ಪೂರ್ವಭಾವಿ ಪರೀಕ್ಷೆಗೆ ಒಂದು ದಿನ ಮೊದಲು, ಪ್ರಶ್ನೆ ಪತ್ರಿಕೆಗಳು ಯೂಟ್ಯೂಬ್‌ನಲ್ಲಿ ಪ್ರಸಾರವಾಗಿದ್ದವು, ಶಿಕ್ಷಣ ಇಲಾಖೆಯಿಂದಲೇ ಸೋರಿಕೆಯಾಗಿರುವ ಸಾಧ್ಯತೆಯ ಬಗ್ಗೆ ಗಂಭೀರ ಕಳವಳ ವ್ಯಕ್ತಪಡಿಸಲಾಗಿದೆ.
ಎಸ್‌ಎಸ್‌ಎಲ್‌ಸಿ ಪೂರ್ವಭಾವಿ ಪರೀಕ್ಷೆಗಳು ಮಾರ್ಚ್ 3 ಮತ್ತು 4 ರಂದು ನಿಗದಿಯಾಗಿದ್ದವು. ಆದರೆ ಮಾರ್ಚ್ 2 ಮತ್ತು 3 ರಂದೇ ಸಂಪೂರ್ಣ ಪ್ರಶ್ನೆ ಪತ್ರಿಕೆಗಳು ಯೂಟ್ಯೂಬ್‌ನಲ್ಲಿ ಕಾಣಿಸಿಕೊಂಡಿವೆ.
ಈ ಬಗ್ಗೆ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಟಿಎನ್‌ಐಇಗೆ ಮಾಹಿತಿ ನೀಡಿದ್ದು, ಪ್ರಶ್ನೆ ಪತ್ರಿಕೆಗಳು ಪರೀಕ್ಷೆಗೆ ಕೇವಲ ಎರಡು ಗಂಟೆಗಳ ಮೊದಲು ಶಾಲೆಗಳು ಅಥವಾ ಪರೀಕ್ಷಾ ಕೇಂದ್ರಗಳನ್ನು ತಲುಪಬೇಕು ಮತ್ತು ಅವುಗಳನ್ನು ಒಂದು ದಿನ ಮುಂಚಿತವಾಗಿ ವಿತರಣಾ ಕೇಂದ್ರಗಳಿಗೆ ಕಳುಹಿಸಲಾಗುತ್ತದೆ. ಆದರೆ ಒಂದು ದಿನ ಮುಂಚಿತವಾಗಿ ಆನ್‌ಲೈನ್‌ನಲ್ಲಿ ಹೇಗೆ ಸೋರಿಕೆ ಮಾಡಲಾಗಿದೆ ಎಂಬ ಪ್ರಶ್ನೆ ಹುಟ್ಟುಕೊಂಡಿದೆ ಎಂದರು.
ಸಮಾಜ ವಿಜ್ಞಾನ ಪರೀಕ್ಷೆಯ ಪೂರ್ವಭಾವಿ ಪ್ರಶ್ನೆ ಪತ್ರಿಕೆಯನ್ನು ಹೊಂದಿರುವ 'ಯೂಟ್ಯೂಬ್ ಶಾರ್ಟ್ಸ್' ಎಂದು ಅಪ್‌ಲೋಡ್ ಮಾಡಲಾದ ವಿಡಿಯೋವನ್ನು ಪರೀಕ್ಷೆಗೆ ಒಂದು ದಿನ ಮೊದಲು ಮಾರ್ಚ್ 3 ರಂದು ಅಪ್‌ಲೋಡ್ ಮಾಡಲಾಗಿದ್ದು, ಇದನ್ನು 24,000 ಬಾರಿ ಹಂಚಿಕೊಳ್ಳಲಾಗಿದೆ ಮತ್ತು ಸುಮಾರು 10,000 ವೀಕ್ಷಣೆಗಳನ್ನು ಪಡೆದಿದೆ. ಈ ವಿಡಿಯೋವನ್ನು 73 ಚಂದಾದಾರರನ್ನು ಹೊಂದಿರುವ 'ಹ್ಯಾಕರ್ ಅನಿ' ಎಂಬ ಯೂಟ್ಯೂಬ್ ಚಾನೆಲ್ ಪೋಸ್ಟ್ ಮಾಡಿದೆ.
"ಇದೇ ಚಾನೆಲ್ ಮಾರ್ಚ್ 2 ರಂದು ವಿಜ್ಞಾನ ಪ್ರಶ್ನೆ ಪತ್ರಿಕೆಯ ವಿಡಿಯೋವನ್ನು ಅಪ್‌ಲೋಡ್ ಮಾಡಿತ್ತು. ಆದರೆ ಶಿಕ್ಷಣ ಆಯುಕ್ತ ಕೆ.ವಿ. ತ್ರಿಲೋಕ್ ಚಂದ್ರ ಅವರ ಬಳಿ ಈ ವಿಷಯವನ್ನು ಪ್ರಸ್ತಾಪಿಸಿದ ನಂತರ ವಿಡಿಯೋವನ್ನು ತೆಗೆದುಹಾಕಲಾಗಿದೆ. ಆದಾಗ್ಯೂ, ಸಮಾಜ ವಿಜ್ಞಾನ ಪ್ರಶ್ನೆ ಪತ್ರಿಕೆಯ ವಿಡಿಯೋ ಇನ್ನೂ ಲೈವ್ ಆಗಿದೆ" ಎಂದು ಕರ್ನಾಟಕದ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳ ಅಸೋಸಿಯೇಟೆಡ್ ಮ್ಯಾನೇಜ್‌ಮೆಂಟ್ಸ್ (ಕೆಎಎಂಎಸ್) ನ ಪ್ರಧಾನ ಕಾರ್ಯದರ್ಶಿ ಡಿ. ಶಶಿ ಕುಮಾರ್ ಹೇಳಿದ್ದಾರೆ.
ಘಟನೆಯ ನಂತರ, ಪೊಲೀಸ್ ಆಯುಕ್ತ ಬಿ. ದಯಾನಂದ ಅವರಿಗೆ ಪತ್ರ ಬರೆದು ಕ್ರಮ ಕೈಗೊಳ್ಳುವಂತೆ ಕೆಎಎಂಎಸ್ ಒತ್ತಾಯಿಸಿದೆ. ಆದರೆ ಪೊಲೀಸ್ ಇಲಾಖೆ ಎಸ್‌ಎಸ್‌ಎಲ್‌ಸಿ ಬೋರ್ಡ್ ಗೆ ದೂರು ಸಲ್ಲಿಸುವಂತೆ ಸೂಚಿಸಿದೆ. ಆದರೆ ಮಂಡಳಿಯು ಇನ್ನೂ ಯಾವುದೇ ಕ್ರಮ ಕೈಗೊಂಡಿಲ್ಲ.
ಶಿಕ್ಷಣ ಇಲಾಖೆಯೊಳಗಿನ ಕೆಲವರು, ಖಾಸಗಿ ತರಬೇತಿ ಕೇಂದ್ರಗಳ ಪ್ರಭಾವಿ ವ್ಯಕ್ತಿಗಳು ಈ ಸೋರಿಕೆಯಲ್ಲಿ ಭಾಗಿಯಾಗಿರಬಹುದು. ಪ್ರಶ್ನೆ ಪತ್ರಿಕೆಗಳನ್ನು ಸಿದ್ಧಪಡಿಸುವ ಜವಾಬ್ದಾರಿ ಹೊಂದಿರುವವರು ಈ ತರಬೇತಿ ಕೇಂದ್ರಗಳೊಂದಿಗೆ ಸಂಪರ್ಕ ಹೊಂದಿರಬಹುದು ಮತ್ತು ಅವರ ಸ್ವಂತ ಲಾಭಕ್ಕಾಗಿ ಪತ್ರಿಕೆಗಳನ್ನು ಸೋರಿಕೆ ಮಾಡಿರಬಹುದು" ಎಂದು ಶಶಿ ಕುಮಾರ್ ಹೇಳಿದ್ದಾರೆ.
ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರೊಂದಿಗೆ ಚರ್ಚಿಸಿದ ನಂತರ ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Advertisement