
ಬೆಂಗಳೂರು: ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಯುವನಿಧಿ ಕೂಡ ಒಂದು. ಪದವಿ-ಡಿಪ್ಲೋಮಾ ಹೊಂದಿದ ನಿರುದ್ಯೋಗ ಯುವಕ-ಯುವತಿಯರಿಗೆ ನಿರುದ್ಯೋಗ ಭತ್ಯೆ ನೀಡುವ ಯೋಜನೆಯಾಗಿದೆ. ಇಂತಹ ನಿರುದ್ಯೋಗ ಯುವಕರಿಗೆ ಇಂಡಸ್ಟ್ರಿ ಲಿಂಕೆಜ್ ಸೆಲ್ ಅಡಿ ಭವಿಷ್ಯ ಕೌಶಲ್ಯ ತರಬೇತಿ ನೀಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಅವರು 2025-26ನೇ ಸಾಲಿನ ಬಜೆಟ್‌ನಲ್ಲಿ ತಿಳಿಸಿದ್ದಾರೆ.
ಈ ಬಾರಿ ದಾಖಲೆಯ 16ನೇ ಬಜೆಟ್ ಮಂಡಿಸಿರುವ ಸಿಎಂ, ನಿರುದ್ಯೋಗಿಗಳಾಗಿರುವ ಪದವೀಧರರಿಗೆ ಹಾಗೂ ಡಿಪ್ಲೋಮ ಪಡೆದವರಿಗೆ ನಿರುದ್ಯೋಗ ಭತ್ಯೆಯನ್ನು ನೀಡಲು ನಮ್ಮ ಸರ್ಕಾರವು ‘ಯುವನಿಧಿ’ ಯೋಜನೆಯನ್ನು ಅನುಷ್ಠಾನಗೊಳಿಸಿದೆ. ಈಗಾಗಲೇ ಸುಮಾರು 2.58 ಲಕ್ಷ ಯುವಕರು ಈ ಯೋಜನೆಯಡಿ ನೋಂದಾಯಿಸಿಕೊಂಡಿದ್ದು, 286 ಕೋಟಿ ರೂ. ನೇರ ನಗದು ವರ್ಗಾವಣೆ ಮಾಡಲಾಗಿದೆ ಎಂದರು.
ಯುವನಿಧಿ ಯೋಜನೆ ಮೂಲಕ ನಿರುದ್ಯೋಗಿ ಪದವೀಧರರಿಗೆ ಮಾಸಿಕ 3,000 ರೂಪಾಯಿ ಮತ್ತು ಡಿಪ್ಲೊಮಾ ಪಾಸಾದ ನಿರುದ್ಯೋಗಿಗಳಿಗೆ ಮಾಸಿಕ 1,500 ರೂ. ನೀಡಲಾಗುತ್ತದೆ. ಯುವ ನಿಧಿ ಯೋಜನೆಯಿಂದ ನಿರುದ್ಯೋಗ ಭತ್ಯೆಯನ್ನು 2 ವರ್ಷಗಳ ಅವಧಿಗೆ ಮಾತ್ರ ನೀಡಲಾಗುತ್ತದೆ. ಫಲಾನುಭವಿಗೆ 2 ವರ್ಷಗಳ ನಂತರ ಅಥವಾ 2 ವರ್ಷದೊಳಗೆ ಕೆಲಸ ಸಿಕ್ಕರೆ ತಕ್ಷಣವೇ ನಿರುದ್ಯೋಗ ಭತ್ಯೆ ನಿಲ್ಲಿಸಲಾಗುತ್ತದೆ.
ವಿದೇಶಿ ಭಾಷೆ ತರಬೇತಿ
ರಾಜ್ಯದ ನರ್ಸಿಂಗ್ ವಿದ್ಯಾರ್ಥಿಗಳಿಗೆ ಜರ್ಮನ್, ಇಟಾಲಿಯನ್, ಸ್ಪ್ಯಾನಿಷ್ ಮತ್ತು ಇತರೆ ವಿದೇಶೀ ಭಾಷಾ ಕೌಶಲ್ಯ ತರಬೇತಿ ನೀಡಲಾಗುವುದು. ವಿದೇಶದಲ್ಲಿ ಉದ್ಯೋಗಾವಕಾಶ ಕಲ್ಪಿಸಲು ಅಂತಾರಾಷ್ಟ್ರೀಯ ವಲಸೆ ಕೇಂದ್ರದ ಮೂಲಕ ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಉದ್ಯೋಗ ಮೇಳವನ್ನು ಆಯೋಜಿಸಲಾಗುವುದು. ವಿದ್ಯಾರ್ಥಿಗಳು ಭವಿಷ್ಯದಲ್ಲಿ ಸೂಕ್ತ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳಲು ಮಾರ್ಗದರ್ಶನವನ್ನು ಒದಗಿಸಲು `ನನ್ನ ವೃತ್ತಿ, ನನ್ನ ಆಯ್ಕೆ’ ಕಾರ್ಯಕ್ರಮದಡಿ ಸರ್ಕಾರಿ ಶಾಲಾ/ಕಾಲೇಜುಗಳಲ್ಲಿನ 2.30 ಲಕ್ಷ ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನ ನೀಡಲಾಗುವುದು ಎಂದು ತಿಳಿಸಿದರು.
ವಿಶ್ವ ಕೌಶಲ್ಯ ಸ್ಪರ್ಧೆಯ ಪೂರ್ವಸಿದ್ಧತೆಗಾಗಿ ಆಯೋಜಿಸಲಾಗುವ ರಾಷ್ಟ್ರೀಯ ಮಟ್ಟದ ಇಂಡಿಯಾ ಸ್ಕಿಲ್-2026 ಸ್ಪರ್ಧೆಯನ್ನು ಬೆಂಗಳೂರಿನಲ್ಲಿ ಆಯೋಜಿಸಲು ಉದ್ದೇಶಿಸಲಾಗಿರುತ್ತದೆ. ಅಳಿವಿನಂಚಿನಲ್ಲಿರುವ ಪಾರಂಪರಿಕ ಮತ್ತು ಪ್ರಾದೇಶಿಕ ಕೌಶಲ್ಯಗಳನ್ನು ಮುಂದಿನ ಪೀಳಿಗೆಗೆ ತಲುಪಿಸಲು 2,000 ಅಭ್ಯರ್ಥಿಗಳಿಗೆ ಅಗತ್ಯವಿರುವ ಟೂಲ್‌ಕಿಟ್‌ಗಳೊಂದಿಗೆ ಅಲ್ಪಾವಧಿ ತರಬೇತಿಯನ್ನು ನೀಡಲಾಗುವುದು. ಲಂಬಾಣಿ ಜನಾಂಗದ ಕಸೂತಿ ಕಲೆಯ ಬಗ್ಗೆ ತರಬೇತಿಯನ್ನು 1.000 ಅಭ್ಯರ್ಥಿಗಳಿಗೆ ದಾವಣಗೆರೆ ಮತ್ತು ಬೀದರ್ ಜಿಲ್ಲೆಗಳಲ್ಲಿನ ಕೌಶಲ್ಯ ತರಬೇತಿ ಕೇಂದ್ರಗಳಲ್ಲಿ ನೀಡಲಾಗುವುದು ಎಂದರು.
Advertisement