ಕರ್ನಾಟಕ ಬಜೆಟ್ 2025: ಆರೋಗ್ಯ ಕ್ಷೇತ್ರಕ್ಕೆ ಸಿಎಂ ಸಿದ್ದರಾಮಯ್ಯ ಘೋಷಣೆಗಳೇನು?

ಕರ್ನಾಟಕದಲ್ಲಿ ತಾಯಂದಿರ ಮರಣ ಪ್ರಕರಣಗಳನ್ನು ರಾಜ್ಯ ತಾಂತ್ರಿಕ ತಜ್ಞರ ಸಮಿತಿಯು ಲೆಕ್ಕಪರಿಶೋಧನೆಗೆ ಒಳಪಡಿಸುತ್ತದೆ, ನಂತರ ಅದು ಶಿಫಾರಸುಗಳನ್ನು ರಾಜ್ಯ ಸಬಲೀಕರಣ ಸಮಿತಿಗೆ ಸಲ್ಲಿಸುತ್ತದೆ ಎಂದರು.
CM Siddaramaiah presents budget at legislative assembly
ವಿಧಾನಸಭೆಯಲ್ಲಿ ಬಜೆಟ್ ಮಂಡಿಸಿದ ಸಿಎಂ ಸಿದ್ದರಾಮಯ್ಯ
Updated on

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿರುವ ರಾಜ್ಯ ಬಜೆಟ್ 2025-26ರಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಹಲವು ಯೋಜನೆಗಳನ್ನು ಪ್ರಕಟಿಸಲಾಗಿದೆ.

ತಾಯಂದಿರ ಮರಣ ತಡೆಗೆ ಕಾರ್ಯಕ್ರಮ

ಬಾಣಂತಿಯರ ಸಾವು ರಾಜ್ಯದಲ್ಲಿನ ಜ್ವಲಂತ ಸಮಸ್ಯೆಯಾಗಿದೆ. ಈ ನಿಟ್ಟಿನಲ್ಲಿ ಪರಿಹಾರ ಕಂಡುಹಿಡಿಯಲು ಸರ್ಕಾರ ಮುಂದಾಗಿದೆ. ಇಂದು ವಿಧಾನಸಭೆಯಲ್ಲಿ ಬಜೆಟ್ ಮಂಡಿಸುತ್ತಾ ಸಿಎಂ ಸಿದ್ದರಾಮಯ್ಯನವರು, ಸಮಾಜದಲ್ಲಿ ಸಮಾನತೆ ತರಲು ಆರೋಗ್ಯಕರ ಸಮಾಜ ಪ್ರಮುಖ ಅಂಶವಾಗಿದೆ. ಸ್ವಸ್ಥ ಆರೋಗ್ಯ ಸ್ವಸ್ಥ ಸಮಾಜಕ್ಕೆ ಭದ್ರ ಬುನಾದಿಯಾಗಿದೆ. ಶಿಶು ಜನನ ಸಮಯದಲ್ಲಿ ತಾಯಂದಿರ ಮರಣವನ್ನು ತಡೆಗಟ್ಟುವುದು ಅತ್ಯಂತ ಪ್ರಮುಖ ಆರೋಗ್ಯ ಸವಾಲಾಗಿದೆ. ಇದಕ್ಕಾಗಿ ಸರ್ಕಾರ ಮಿಷನ್ ಮೋಡ್ ಕಾರ್ಯಕ್ರಮವನ್ನು ಆರಂಭಿಸಲಾಗುತ್ತಿದ್ದು, 320 ಕೋಟಿ ರೂಪಾಯಿ ಅನುದಾನ ಮೀಸಲಿಡಲಾಗುವುದು ಎಂದು ತಿಳಿಸಿದರು.

ಕರ್ನಾಟಕದಲ್ಲಿ ತಾಯಂದಿರ ಮರಣ ಪ್ರಕರಣಗಳನ್ನು ರಾಜ್ಯ ತಾಂತ್ರಿಕ ತಜ್ಞರ ಸಮಿತಿಯು ಲೆಕ್ಕಪರಿಶೋಧನೆಗೆ ಒಳಪಡಿಸುತ್ತದೆ, ನಂತರ ಅದು ಶಿಫಾರಸುಗಳನ್ನು ರಾಜ್ಯ ಸಬಲೀಕರಣ ಸಮಿತಿಗೆ ಸಲ್ಲಿಸುತ್ತದೆ ಎಂದರು.

ಗರ್ಭಿಣಿಯರಲ್ಲಿ ರಕ್ತಹೀನತೆ ತಡೆಗೆ ಹಿಂದುಳಿದ ಜಿಲ್ಲೆಗಳಿಗೆ ಪೌಷ್ಟಿಕಾಂಶ ಕಿಟ್, ತಾಯಂದಿರಿಗೆ ವಾತ್ಯಲ್ಯ ಕಿಟ್ ಮತ್ತು ಪ್ರೋತ್ಸಾಹ ಧನ ವಿತರಣೆ ಮಾಡುವುದಾಗಿ ತಿಳಿಸಿದ್ದಾರೆ.

ಕರ್ನಾಟಕ ಬ್ರೈನ್ ಹೆಲ್ತ್ ಇನಿಶಿಯೇಟಿವ್ (KaBHI) ನ್ನು ಎಲ್ಲಾ ಆರೋಗ್ಯ ಕೇಂದ್ರಗಳಿಗೆ ವಿಸ್ತರಿಸಲು 20 ಕೋಟಿ ರೂಪಾಯಿಗಳನ್ನು ಹಂಚಿಕೆ ಮಾಡಲಾಗುತ್ತಿದ್ದು, ಮಾನಸಿಕ ಆರೋಗ್ಯ ರಕ್ಷಣೆಗಾಗಿ ಸರ್ಕಾರೇತರ ಸಂಸ್ಥೆಗಳ ಬೆಂಬಲದೊಂದಿಗೆ ಜಿಲ್ಲಾಸ್ಪತ್ರೆಗಳಲ್ಲಿ ಸ್ವಾಸ್ಥ್ಯ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದು ಬಜೆಟ್ ನಲ್ಲಿ ಮುಖ್ಯಮಂತ್ರಿಗಳು ಪ್ರಕಟಿಸಿದರು.

ನಗದುರಹಿತ ಚಿಕಿತ್ಸೆ

ಗುತ್ತಿಗೆ, ಹೊರಗುತ್ತಿಗೆ ಮತ್ತು ಗೌರವಧನದ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಸರ್ಕಾರಿ ನೌಕರರಿಗೆ 5 ಲಕ್ಷ ರೂಪಾಯಿವರೆಗೆ ನಗದು ರಹಿತ ಚಿಕಿತ್ಸೆ ಸೌಲಭ್ಯ ಒದಗಿಸಲಾಗುವುದು. 3 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳು ಮಾಸಿಕ 100 ರೂಪಾಯಿ ಇದಕ್ಕೆ ಪಾವತಿ ಮಾಡಿದರೆ ಸರ್ಕಾರ 200 ರೂಪಾಯಿ ನೀಡುತ್ತದೆ.

ಗೃಹ ಆರೋಗ್ಯ ಯೋಜನೆ ವಿಸ್ತರಣೆ

ಆರು ಸಾಂಕ್ರಾಮಿಕವಲ್ಲದ ರೋಗಗಳನ್ನು ಪರೀಕ್ಷಿಸಲು ಮತ್ತು ಚಿಕಿತ್ಸೆ ನೀಡಲು ಕೋಲಾರದಲ್ಲಿ ಪ್ರಾಯೋಗಿಕವಾಗಿ ಪ್ರಾರಂಭಿಸಲಾದ ಗೃಹ ಆರೋಗ್ಯ ಯೋಜನೆಯನ್ನು ಈಗ 100 ಕೋಟಿ ರೂಪಾಯಿ ಹಂಚಿಕೆಯೊಂದಿಗೆ ರಾಜ್ಯಾದ್ಯಂತ ವಿಸ್ತರಿಸಲಾಗುವುದು.

ಕಲ್ಯಾಣ ಕರ್ನಾಟಕ ಮತ್ತು ಗಣಿಗಾರಿಕೆ ಮಾಡುವ ಪ್ರದೇಶಗಳಲ್ಲಿ ಪ್ರಸವಪೂರ್ವ ಮತ್ತು ಶಿಶು ಹಂತಗಳಲ್ಲಿ ಅಪರೂಪದ ಚಯಾಪಚಯ ಅಸ್ವಸ್ಥತೆಗಳನ್ನು ಪತ್ತೆಹಚ್ಚಲು ಪ್ರಾಯೋಗಿಕ ಕಾರ್ಯಕ್ರಮವನ್ನು ಪ್ರಾರಂಭಿಸಲಾಗುವುದು, ಇದಕ್ಕಾಗಿ 10 ಕೋಟಿ ರೂಪಾಯಿ ಹಂಚಿಕೆ ಮಾಡಲಾಗುತ್ತದೆ.

ಬೀದರ್ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಕ್ಯಾನ್ಸರ್ ಪತ್ತೆ ಮತ್ತು ಚಿಕಿತ್ಸೆಯನ್ನು ಹೆಚ್ಚಿಸಲು ಕ್ಯಾನ್ಸರ್ ರೋಗನಿರ್ಣಯ ಘಟಕವನ್ನು ಸ್ಥಾಪಿಸಲಾಗುವುದು.

ಮಹಿಳೆಯರಲ್ಲಿ ಸುಟ್ಟ ಗಾಯಗಳನ್ನು ತಡೆಗಟ್ಟಲು ಮತ್ತು ಚಿಕಿತ್ಸೆ ನೀಡಲು ಕರ್ನಾಟಕವು ಭಾರತದ ಮೊದಲ ರೀತಿಯ ನೀತಿಯನ್ನು ಜಾರಿಗೆ ತರಲಿದೆ.

ಮೈಸೂರು ಮತ್ತು ಕಲಬುರಗಿ ವೈದ್ಯಕೀಯ ಕಾಲೇಜುಗಳಲ್ಲಿ ನಿಮ್ಹಾನ್ಸ್ ಮಾದರಿಯ ಸಂಸ್ಥೆಗಳನ್ನು ಸ್ಥಾಪಿಸಲಾಗುವುದು, ಪ್ರತಿಯೊಂದಕ್ಕೂ 100 ಕೋಟಿ ರೂಪಾಯಿ ಹಂಚಿಕೆ ಮಾಡಲಾಗುವುದು, ಇದು ರಾಜ್ಯದಲ್ಲಿ ಮಾನಸಿಕ ಆರೋಗ್ಯ ರಕ್ಷಣೆಯನ್ನು ಹೆಚ್ಚಿಸುತ್ತದೆ ಎಂದು ಸಿಎಂ ಹೇಳಿದರು.

ಆಂಬ್ಯುಲೆನ್ಸ್ ವ್ಯವಸ್ಥೆ

ಸರ್ಕಾರದ 108 ಆಂಬ್ಯುಲೆನ್ಸ್ ಸೇವೆಗಳನ್ನು ಸುಧಾರಿಸಲು, ಕಮಾಂಡ್ ಕಂಟ್ರೋಲ್ ಸೆಂಟರ್ ನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಡಿಯಲ್ಲಿ ತರಲಾಗುವುದು, ಉತ್ತಮ ತುರ್ತು ಪ್ರತಿಕ್ರಿಯೆಗಾಗಿ ಆರೋಗ್ಯ ಕವಚವನ್ನು ಬಲಪಡಿಸಲಾಗುವುದು.

ಇತ್ತೀಚಿನ ದಿನಗಳಲ್ಲಿ ಜನರಲ್ಲಿ ಕ್ಯಾನ್ಸರ್ ರೋಗ ಹೆಚ್ಚಾಗಿ ಕಾಡುತ್ತಿದ್ದು, ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟಲು, ಗಣಿಗಾರಿಕೆ ಪೀಡಿತ ಪ್ರದೇಶಗಳು ಮತ್ತು ಕಲ್ಯಾಣ ಕರ್ನಾಟಕದ 20 ತಾಲ್ಲೂಕುಗಳಲ್ಲಿ 14 ವರ್ಷದ ಬಾಲಕಿಯರಿಗೆ HPV ಲಸಿಕೆ ಕಾರ್ಯಕ್ರಮವನ್ನು ಮೊದಲ ಹಂತದಲ್ಲಿ ಪ್ರಾರಂಭಿಸಲಾಗುವುದು, ಇದಕ್ಕಾಗಿ 9 ಕೋಟಿ ರೂ. ಹಂಚಿಕೆ ಮಾಡಲಾಗುತ್ತದೆ ಎಂದರು.

ಪುತ್ತೂರಿಗೆ ಹೊಸ ವೈದ್ಯಕೀಯ ಕಾಲೇಜು

ಪ್ರತಿ ಆಸ್ಪತ್ರೆಯಲ್ಲಿ ಎಂಸಿಹೆಚ್ ತಜ್ಞರ ನಿಯೋಜನೆ, ಬೆಂಗಳೂರು ಉತ್ತರ ತಾಲ್ಲೂಕಿನಲ್ಲಿ 150 ಕೋಟಿ ವೆಚ್ಚದಲ್ಲಿ 200 ಹಾಸಿಗೆ ಆಸ್ಪತ್ರೆ ನಿರ್ಮಾಣ, ಪುತ್ತೂರಿನಲ್ಲಿ ಹೊಸ ವೈದ್ಯಕೀಯ ಕಾಲೇಜು ಸ್ಥಾಪನೆ, ವಿರಾಜಪೇಟೆಯಲ್ಲಿ 400 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ನಿರ್ಮಾಣ ಹಾಗೂ ಚಿತ್ರದುರ್ಗದ ಮೊಳಕಾಲ್ಮೂರಿನಲ್ಲಿ 200 ಹಾಸಿಗೆ ಆಸ್ಪತ್ರೆ ನಿರ್ಮಿಸುವುದಾಗಿ ಘೋಷಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com