ಕರ್ನಾಟಕ ಬಜೆಟ್ ದೇಶಕ್ಕೆ ಮಾದರಿ; ಬೆಂಗಳೂರಿನಲ್ಲಿ ಟನಲ್ ರಸ್ತೆ ಆಗಿಯೇ ಆಗುತ್ತೆ: ಡಿ.ಕೆ ಶಿವಕುಮಾರ್

ಸಿಎಂ ಸಿದ್ದರಾಮಯ್ಯ ಅವರು ಐತಿಹಾಸಿಕ ಹಾಗೂ ದೇಶಕ್ಕೆ ಮಾದರಿ ಬಜೆಟ್ ಕೊಟ್ಟಿದ್ದಾರೆ. ಮುಂದೆ ಬೇರೆ ಬೇರೆ ರಾಜ್ಯಗಳು ನಮ್ಮ ಬಜೆಟ್ ಪಾಲನೆ ಮಾಡಲಿವೆ.
DCM DK Shivakumar
ಡಿಸಿಎಂ ಡಿಕೆ ಶಿವಕುಮಾರ್
Updated on

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರು ದೇಶಕ್ಕೆ ಮಾದರಿ ಬಜೆಟ್ ಮಂಡನೆ ಮಾಡಿದ್ದು, ಬಿಜೆಪಿಯವರು ಇದರ ಬಗ್ಗೆ ಸುಳ್ಳು ಹೇಳದೆ ಇನ್ನೇನು ಮಾಡಲು ಸಾಧ್ಯ?" ಎಂದು ತಿರುಗೇಟು ನೀಡಿದ್ದಾರೆ.

ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಶನಿವಾರ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್, ಬಿಜೆಪಿಯವರು ಈ ಬಜೆಟ್ ಅನ್ನು ಹಲಾಲ್ ಬಜೆಟ್ ಎಂದು ಹೇಳುತ್ತಿದ್ದಾರೆ. ಅವರು ಹೇಳಲಿ. ಪಾಪ ಅವರಾದರೂ ಏನು ಮಾಡುತ್ತಾರೆ. ಈ ರೀತಿ ಹೇಳುವುದು ಬಿಟ್ಟರೆ ಇನ್ನೇನು ಮಾಡಲು ಸಾಧ್ಯ? ನಮ್ಮ ಬಜೆಟ್ ಅನ್ನು ಅವರು ಕಣ್ಣಾರೆ ಓದಿದ್ದು, ಕಿವಿಯಾರೆ ಕೇಳಿದ್ದು, ಬಾಯಲ್ಲಿ ಇನ್ನೇನು ಹೇಳಲು ಸಾಧ್ಯ? ಕಣ್ಣು ಕಿವಿಯಲ್ಲಿ ಸುಳ್ಳು ಹೇಳಲು ಆಗುವುದಿಲ್ಲ. ಕೇವಲ ಬಾಯಲ್ಲಿ ಮಾತ್ರ ಸುಳ್ಳು ಹೇಳಲು ಸಾಧ್ಯ. ಹೀಗಾಗಿ ಹೇಳುತ್ತಿದ್ದಾರೆ" ಎಂದು ವಾಗ್ದಾಳಿ ನಡೆಸಿದರು.

"ಸಿಎಂ ಸಿದ್ದರಾಮಯ್ಯ ಅವರು ಐತಿಹಾಸಿಕ ಹಾಗೂ ದೇಶಕ್ಕೆ ಮಾದರಿ ಬಜೆಟ್ ಕೊಟ್ಟಿದ್ದಾರೆ. ಮುಂದೆ ಬೇರೆ ಬೇರೆ ರಾಜ್ಯಗಳು ನಮ್ಮ ಬಜೆಟ್ ಪಾಲನೆ ಮಾಡಲಿವೆ. ಈ ಬಜೆಟ್ ಸಮಾಜದ ಎಲ್ಲಾ ವರ್ಗದವರಿಗಾಗಿ ಮಾಡಿರುವ ಬಜೆಟ್. ಈ ಬಜೆಟ್ ಮಂಡಿಸಿರುವ ಮುಖ್ಯಮಂತ್ರಿಗಳಿಗೆ ಹಾಗೂ ಇದಕ್ಕೆ ಸಹಕಾರ ಕೊಟ್ಟ ನನ್ನ ಸಹೋದ್ಯೋಗಿಗಳಿಗೆ ಧನ್ಯವಾದ ತಿಳಿಸುತ್ತೇನೆ ಎಂದರು.

ಬ್ರ್ಯಾಂಡ್ ಬೆಂಗಳೂರು ಜಾರಿ: "ಬ್ರ್ಯಾಂಡ್ ಬೆಂಗಳೂರಿನ ಮಹತ್ವದ ಯೋಜನೆಗಳಿಗೆ ಅನುದಾನ ನೀಡಲಾಗಿದೆ. ರಾಜಧಾನಿಯಲ್ಲಿರುವ 1.40 ಕೋಟಿ ಜನರಿಗೆ ಅನುಕೂಲವಾಗಲಿದೆ. ಟನಲ್ ರಸ್ತೆ ಆಗಿಯೇ ಆಗುತ್ತೆ. ಮುಂಬರುವ ಎಲ್ಲಾ ಮೆಟ್ರೋ ಮಾರ್ಗಗಳಲ್ಲಿ ಡಬಲ್ ಡೆಕ್ಕರ್ ಮೇಲ್ಸೇತುವೆ ಮಾಡಲಾಗುವುದು ಪಾಲಿಕೆ ಹಾಗೂ ಬಿಎಂಆರ್ ಸಿಎಲ್ ಇದರ ವೆಚ್ಚವನ್ನು 50:50 ಅನುಪಾತದಲ್ಲಿ ಭರಿಸಲಿವೆ. ಇನ್ನು ರಾಜಕಾಲುವೆ ಅಕ್ಕಪಕ್ಕದಲ್ಲಿ 50 ಅಡಿ ಬಫರ್ ವಲಯದಲ್ಲಿ 300 ಕಿ.ಮೀ ಉದ್ದದಷ್ಟು ರಸ್ತೆ ನಿರ್ಮಾಣ ಮಾಡಲಾಗುವುದು. ಈ ಯೋಜನೆಗೆ 3 ಸಾವಿರ ಕೋಟಿ ಮೀಸಲಿಡಲಾಗಿದೆ ಎಂದು ತಿಳಿಸಿದರು.

ಬಫರ್ ರಸ್ತೆ, ಮೇಲ್ಸೇತುವೆ, ಟನಲ್ ರಸ್ತೆ ಗಳ ಮೂಲಕ ಬೆಂಗಳೂರುನಲ್ಲಿ 700-800 ಕಿ.ಮೀ ಉದ್ದದಷ್ಟು ಹೊಸ ರಸ್ತೆ ನಿರ್ಮಾಣ ಮಾಡುತ್ತಿದ್ದೇವೆ. ಬೆಂಗಳೂರಿನ ಅಭಿವೃದ್ಧಿಗೆ ಇನ್ನೇನು ಅಲೋಚನೆ ಮಾಡಲು ಸಾಧ್ಯ? ಜನರ ಸಮಸ್ಯೆಗೆ ಪರಿಹಾರ ನೀಡಲು ಸರ್ಕಾರ ಸಾಲ ಮಾಡಿಯಾದರೂ ಈ ಯೋಜನೆ ಮಾಡುತ್ತೇವೆ. ಇಡೀ ವಿಶ್ವ ಬೆಂಗಳೂರಿನತ್ತ ತಿರುಗಿ ನೋಡುತ್ತಿದ್ದು, ಈ ನಗರಕ್ಕೆ ನಮ್ಮ ಸರ್ಕಾರ ಆದ್ಯತೆ ನೀಡಿದೆ" ಎಂದು ತಿಳಿಸಿದರು.

ಸಿಂಗ್ ಅವರಿಗೆ ಇನ್ನಷ್ಟು ಮಾನ್ಯತೆ ನೀಡಬೇಕು: ಬೆಂಗಳೂರು ವಿವಿಗೆ ಮನಮೋಹನ್ ಸಿಂಗ್ ಹೆಸರು ಇಟ್ಟಿರುವ ಬಗ್ಗೆ ಕೇಳಿಬರುತ್ತಿರುವ ವಿವಾದ ಕುರಿತು ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್, "ಅವರು ದೀನದಯಾಳ್ ಹೆಸರು ಇಡುವಾಗ ನಾವು ಮನಮೋಹನ್ ಸಿಂಗ್ ಹೆಸರು ಇಡಬಾರದೆ? ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗುವ ಮೇಲ್ಸೇತುವೆ, ಎಲೆಕ್ಟ್ರಾನಿಕ್ ಸಿಟಿ ಮೇಲ್ಸೇತುವೆ, ನೆಲಮಂಗಲ ಮೇಲ್ಸೇತುವೆ, ಜೆ.ಎನ್ ನರ್ಮ್ ಯೋಜನೆ, ನರೇಗಾ, ಆಹಾರ ಭದ್ರತಾ ಕಾಯ್ದೆ, ಶಿಕ್ಷಣ ಹಕ್ಕು, ಮಾಹಿತಿ ಹಕ್ಕು, ಆಶಾ ಕಾರ್ಯಕರ್ತ ಯೋಜನೆ ಜಾರಿಗೆ ತಂದವರು ಇವರು. ಬಿಜೆಪಿಯವರು ಇಂತಹ ಯಾವುದಾದರೂ ಒಂದು ಯೋಜನೆ ಮಾಡಿದ್ದಾರಾ? ದೇಶ ಹಾಗೂ ಕರ್ನಾಟಕ ರಾಜ್ಯದ ಕೊಡುಗೆಗೆ ಮನಮೋಹನ್ ಸಿಂಗ್ ಅವರು ಕೊಟ್ಟಿರುವ ಕೊಡುಗೆಗೆ ಅವರಿಗೆ ಇನ್ನಷ್ಟು ಮಾನ್ಯತೆ ನೀಡಬೇಕು" ಎಂದು ತಿಳಿಸಿದರು.

DCM DK Shivakumar
ಕರ್ನಾಟಕ ಬಜೆಟ್ 2025: ಸಿದ್ದರಾಮಯ್ಯ ಆಯವ್ಯಯದಲ್ಲಿ ತವರಿಗೆ ಭರಪೂರ ಉಡುಗೊರೆ; ಮೈಸೂರು ಜನರ ಮೊಗದಲ್ಲಿ ಮಂದಹಾಸ

ಕಲ್ಯಾಣ ಕರ್ನಾಟಕಕ್ಕೆ ಲಾಟರಿ: ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ಲಾಟರಿ ಹೊಡೆದಿದೆ. ಖರ್ಗೆ ಅವರು ಆರ್ಟಿಕಲ್ 371ಜೆ ಜಾರಿಗೆ ತಂದರು. ಇನ್ನು ನಮ್ಮ ಸರ್ಕಾರ ಕೊಟ್ಟ ಮಾತಿನಂತೆ ಪ್ರತಿ ವರ್ಷ 5 ಸಾವಿರ ಕೋಟಿ ನೀಡುತ್ತಿದ್ದೇವೆ ಎಂದು ತಿಳಿಸಿದ ಡಿಕೆ ಶಿವಕುಮಾರ್, ನೀರಾವರಿ ಇಲಾಖೆಗೆ ಕಳೆದ ಬಾರಿಗಿಂತ ರೂ. 2 ಸಾವಿರ ಕೋಟಿ ಹೆಚ್ಚಿಗೆ ನೀಡಲಾಗಿದೆ. ನೀರಾವರಿಗೆ ನಾವು ಬೇರೆ ಯೋಜನೆ ರೂಪಿಸಿದ್ದೇವೆ. ಮಧ್ಯದಲ್ಲಿ ಬೇರೆ ಘೋಷಣೆ ಆಗಲಿದೆ, ಮಂಡಳಿಗಳಲ್ಲಿ ಕೆಲವು ತೀರ್ಮಾನ ಮಾಡಿದ್ದೇವೆ ಎಂದು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com