News headlines 08-03-2025 | ಇಸ್ರೇಲಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ; ಇಬ್ಬರ ಬಂಧನ; ರನ್ಯಾ ರಾವ್ ಪ್ರಕರಣದಲ್ಲಿ ಸಿಬಿಐ ಎಂಟ್ರಿ; ವಕ್ಫ್ ಹಗರಣದ ಬಗ್ಗೆ BJP MP ಲಹರ್ ಸಿಂಗ್ ಸ್ಫೋಟಕ ಹೇಳಿಕೆ

News headlines 08-03-2025 | ಇಸ್ರೇಲಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ; ಇಬ್ಬರ ಬಂಧನ; ರನ್ಯಾ ರಾವ್ ಪ್ರಕರಣದಲ್ಲಿ ಸಿಬಿಐ ಎಂಟ್ರಿ; ವಕ್ಫ್ ಹಗರಣದ ಬಗ್ಗೆ BJP MP ಲಹರ್ ಸಿಂಗ್ ಸ್ಫೋಟಕ ಹೇಳಿಕೆ

1. ಇಸ್ರೇಲಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ

ಹಂಪಿ ಬಳಿ 27 ವರ್ಷದ ಇಸ್ರೇಲಿ ಪ್ರವಾಸಿ ಸೇರಿದಂತೆ ಇಬ್ಬರು ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಹಲ್ಲೆ ನಡೆಸಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ. ಮಹಿಳೆಯರೊಂದಿಗೆ ಇದ್ದ ಮೂವರು ಪುರುಷ ಪ್ರವಾಸಿಗರ ಮೇಲೆಯೂ ಹಲ್ಲೆ ನಡೆಸಿ ಕಾಲುವೆಗೆ ತಳ್ಳಲಾಗಿದ್ದು ಅವರಲ್ಲಿ ಒರಿಸ್ಸಾ ಮೂಲದ ಬಿಬಾಶ್‌ ಎಂಬಾತ ಮೃತಪಟ್ಟಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮಲ್ಲೇಶ್ ಅಲಿಯಾಸ್ ಹಂದಿಮಲ್ಲ (22) ಮತ್ತು ಚೇತನ್ ಸಾಯಿ (21) ಎಂಬ ಇಬ್ಬರು ಯುವಕರನ್ನು ಬಂಧಿಸಲಾಗಿದೆ. ಮೂರನೇ ಆರೋಪಿಯನ್ನು ಪತ್ತೆಹಚ್ಚಲು ಪ್ರಯತ್ನಗಳು ನಡೆಯುತ್ತಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಗುರುವಾರ ರಾತ್ರಿ 11 ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದೆ. ಭೋಜನದ ನಂತರ, 29 ವರ್ಷದ ಹೋಂಸ್ಟೇ ಆಪರೇಟರ್, ಇಸ್ರೇಲಿ ಪ್ರವಾಸಿ ಮತ್ತು ಮೂವರು ಪುರುಷ ಪ್ರವಾಸಿಗರೊಂದಿಗೆ ಸನಾಪುರ ಸರೋವರದ ಬಳಿಯ ತುಂಗಭದ್ರಾ ಕಾಲುವೆಯ ಎಡದಂಡೆಯ ಬಳಿ ಕುಳಿತು, ಗಿಟಾರ್ ನುಡಿಸುತ್ತಾ, ಸಂಗೀತವನ್ನು ಆನಂದಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಪುರುಷ ಪ್ರವಾಸಿಗರಲ್ಲಿ ಒಬ್ಬರು ಯುನೈಟೆಡ್ ಸ್ಟೇಟ್‌್ೀನವರಾಗಿದ್ದರೆ, ಇತರರು ಒಡಿಶಾ ಮತ್ತು ಮಹಾರಾಷ್ಟ್ರದವರಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

2. ರನ್ಯ ರಾವ್ ಪ್ರಕರಣದಲ್ಲಿ ಸಿಬಿಐ ಎಂಟ್ರಿ

ನಟಿ ರನ್ಯಾ ರಾವ್ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಇದೀಗ ಸಿಬಿಐ ಪ್ರವೇಶಿಸಿದೆ. ಸಿಬಿಐ ಪ್ರಮುಖ ಅಂತರರಾಷ್ಟ್ರೀಯ ಚಿನ್ನದ ಕಳ್ಳಸಾಗಣೆ ಜಾಲದ ತನಿಖೆಯನ್ನು ಪ್ರಾರಂಭಿಸಿದೆ. ರನ್ಯಾ ರಾವ್ ಅವರನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) 2025ರ ಮಾರ್ಚ್ 4ರಂದು ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಿತ್ತು. ಆಕೆ ದುಬೈನಿಂದ 14.8 ಕೆಜಿ ಚಿನ್ನವನ್ನು ಕಳ್ಳಸಾಗಣೆ ಮಾಡಲು ಪ್ರಯತ್ನಿಸುತ್ತಿದ್ದರು. ಈ ಚಿನ್ನದ ಮೌಲ್ಯ ಸುಮಾರು 12 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಮೂಲಗಳ ಪ್ರಕಾರ, ಈ ಕಳ್ಳಸಾಗಣೆ ಜಾಲವನ್ನು ಆಳವಾಗಿ ತನಿಖೆ ಮಾಡಲು ಮುಂಬೈ ಮತ್ತು ಬೆಂಗಳೂರು ವಿಮಾನ ನಿಲ್ದಾಣಗಳಲ್ಲಿ ಸಿಬಿಐ ತಂಡಗಳನ್ನು ನಿಯೋಜಿಸಲಾಗಿದೆ. ಈ ಸಂದರ್ಭದಲ್ಲಿ, ದೇಶೀಯ ಏಜೆಂಟರು ಮತ್ತು ಅಂತರರಾಷ್ಟ್ರೀಯ ಕಳ್ಳಸಾಗಣೆದಾರರ ನಡುವಿನ ಸಂಪರ್ಕವನ್ನು ಪತ್ತೆಹಚ್ಚಲು ಪ್ರಯತ್ನಗಳು ನಡೆಯುತ್ತಿವೆ.

3. ವಕ್ಫ್ ಹಗರಣದ ಬಗ್ಗೆ BJP MP ಲಹರ್ ಸಿಂಗ್ ಸ್ಫೋಟಕ ಹೇಳಿಕೆ

ವಕ್ಫ್ ಆಸ್ತಿ ಅಕ್ರಮದಲ್ಲಿ ಹಾಲಿ, ಮಾಜಿ ಸಚಿವರೂ ಭಾಗಿಯಾಗಿದ್ದು ಇದಕ್ಕೆ ಸಂಬಂಧಿಸಿದ ದಾಖಲೆಗಳೂ ಇವೆ ಎಂದು ಬಿಜೆಪಿ ರಾಜ್ಯಸಭಾ ಸದಸ್ಯ ಲೇಹರ್ ಸಿಂಗ್ ಸಿರೋಯಾ ಗಂಭೀರ ಆರೋಪ ಮಾಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ತಂದಿರುವ ದಾಖಲೆಗಳು ರಾಜ್ಯ ಸರ್ಕಾರ ಲೋಕಾಯುಕ್ತಕ್ಕೆ ಕೊಟ್ಟಿರುವ ದಾಖಲೆಗಳು. ಒಟ್ಟು 40 ಸಾವಿರ ಪುಟಗಳ ದಾಖಲೆ ಇದೆ. ವಕ್ಫ್ ಆಸ್ತಿಗಳ ತನಿಖೆಗೆ ಸರ್ಕಾರವು ಜಸ್ಟೀಸ್ ಎನ್. ಆನಂದ್ ಸಮಿತಿ ರಚಿಸಿತ್ತು. ಜಸ್ಟೀಸ್ ಆನಂದ್ ಎಲ್ಲಾ ಡಿಸಿಗಳಿಗೆ ಪತ್ರ ಬರೆದಿದ್ದರು. ಡಿಸಿಗಳು ಜಸ್ಟೀಸ್ ಆನಂದ್ ಸಮಿತಿಗೆ ಕೊಟ್ಟಿರುವ ಮಾಹಿತಿ ಇದು ಎಂದು ಹೇಳಿದ್ದಾರೆ.

4. ಸಿಎಂ ಬದಲಾವಣೆ ಊಹಾಪೋಹ: ಖರ್ಗೆ ಒಗ್ಗಟ್ಟಿನ ಮಂತ್ರ

ರಾಜ್ಯ ಕಾಂಗ್ರೆಸ್‌ನಲ್ಲಿ ಅಧಿಕಾರ ಹಂಚಿಕೆಯ ಕುರಿತು ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಬೆಂಬಲಿಗರು ದಿನೇ ದಿನೇ ಪರ ವಿರೋಧ ಹೇಳಿಕೆಗಳನ್ನು ನೀಡುತ್ತಿರುವ ಬೆನ್ನಲ್ಲೇ ಕಲಬುರಗಿಯಲ್ಲಿ ಆಯೋಜಿಸಿದ್ದ ಸಮಾವೇಶದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ರಾಜ್ಯ ನಾಯಕರಿಗೆ ಒಗ್ಗಟ್ಟಿನ ಪಾಠ ಮಾಡಿದ್ದಾರೆ. ಡಿಕೆ ಶಿವಕುಮಾರ್, ಸಿಎಂ ಸಿದ್ದರಾಮಯ್ಯ ಇಬ್ಬರು ಸೇರಿದರೇ ನಮ್ಮ ಭಾಗದಲ್ಲಿ ಕೆಲಸ ಆಗುತ್ತೆ‌. ಹೀಗಾಗಿ ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಜೊತೆಗೆ ಹೋಗಬೇಕು. ಬೇರೆ ಬೇರೆ ದಿಕ್ಕಿನಲ್ಲಿ ಹೋಗಬಾರದು ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಇನ್ನು ಇದೇ ವೇಳೆ ಸಿಎಂ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದಾರೆ. ಮುಂದಿನ ವರ್ಷ ಹಾಗೂ 2027-28 ರ ಬಜೆಟ್ ನ್ನೂ ಮಂಡಿಸಲಿದ್ದಾರೆ, ಒಂದು ವೇಳೆ ಬದಲಾವಣೆಯಾದರೆ ಹೈಕಮಾಂಡ್ ನಿರ್ಧಾರದಂತೆ ಆಗಲಿದೆ ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ಹೇಳಿದ್ದಾರೆ.

5. ಕೆಲಸದ ಒತ್ತಡ: KSRTC ಉದ್ಯೋಗಿ ಆತ್ಮಹತ್ಯೆ

ಕೆಲಸದ ಒತ್ತಡದಿಂದಾಗಿ ಬೇಸತ್ತು ಕೆಎಸ್‌ಆರ್‌ಟಿಸಿ ಮೆಕ್ಯಾನಿಕ್ ಬಸ್‌ನಲ್ಲೇ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಬೆಳಗಾವಿಯ ಡಿಪೋ 1 ರಲ್ಲಿ ಘಟನೆ ನಡೆದಿದೆ. ಕೇಶವ ಕಮಡೊಳಿ ಮೃತ ನೌಕರರಾಗಿದ್ದು, ಬಸ್‌ಗಳ ಪಂಚರ್‌ ತೆಗೆಯುವ ಕೆಲಸ‌ ಮಾಡುತ್ತಿದ್ದರು. ಸ್ಥಳಕ್ಕೆ ಮಾರ್ಕೆಟ್ ಪೊಲೀಸ್ ಠಾಣೆಯ ಪೊಲೀಸರು ಭೇಟಿ ‌ನೀಡಿ ಪರಿಶೀಲನೆ ನಡೆಸಿದ್ದಾರೆ. ಕೆಲಸದ ಒತ್ತಡ ತಡೆದಕೊಳ್ಳಲಾಗದೇ ಕೇಶವ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದ್ದು, ಅಧಿಕಾರಿಗಳ ವಿರುದ್ಧ ಮೃತ ಕೇಶವ್ ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com