
ಬೆಂಗಳೂರು: ಅನೇಕ ಸಮಸ್ಯೆಗಳು, ಒತ್ತಡಗಳ ನಡುವೆ ಮಹಾನಗರಿ ಬೆಂಗಳೂರಿನ ನಿವಾಸಿಗಳು ನಿದ್ರಾಹೀನತೆಯಿಂದ ಬಳಲುತ್ತಿದ್ದಾರೆ ಎಂದು ಇತ್ತೀಚಿನ ಸಮೀಕ್ಷೆಯೊಂದು ಹೇಳುತ್ತದೆ. ನಗರದ ಶೇ.56 ರಷ್ಟು ಜನರು ಪ್ರತಿ ರಾತ್ರಿ ನಿದ್ದೆ ಮಾಡುವ ಅವಧಿ ಆರು ಗಂಟೆಗಳಿಗಿಂತಲೂ ಕಡಿಮೆಯಾಗಿದೆ ಎಂದು ವಿಶ್ವ ನಿದ್ರಾ ದಿನದ ಸಂದರ್ಭದಲ್ಲಿ ಲೋಕಲ್ ಸರ್ಕಲ್ಸ್ ನಡೆಸಿದ ಇತ್ತೀಚಿನ ಸಮೀಕ್ಷೆಯು ಬಹಿರಂಗಪಡಿಸಿದೆ. ಮಾರ್ಚ್ 14ರಂದು ವಿಶ್ವ ನಿದ್ರಾ ದಿನ ಆಚರಿಸಲಾಗುತ್ತದೆ.
'ಭಾರತ 2025 ಹೇಗೆ ನಿದ್ರಿಸುತ್ತದೆ' ಎಂಬ ಶೀರ್ಷಿಕೆಯಡಿಯಲ್ಲಿ ಸಮೀಕ್ಷೆ ನಡೆಸಲಾಗಿದ್ದು, ನಗರದ 5,563 ವ್ಯಕ್ತಿಗಳಿಂದ ಪ್ರತಿಕ್ರಿಯೆಗಳನ್ನು ಸಂಗ್ರಹಿಸಲಾಗಿದೆ. ಕಳಪೆ ನಿದ್ರೆಯ ಗುಣಮಟ್ಟ ಮತ್ತು ಅದರ ಸಂಭಾವ್ಯ ಆರೋಗ್ಯ ಅಪಾಯಗಳ ಬಗ್ಗೆ ಹೆಚ್ಚುತ್ತಿರುವ ಕಳವಳವನ್ನು ಸಮೀಕ್ಷೆ ಎತ್ತಿ ತೋರಿಸುತ್ತದೆ.
ಸಮೀಕ್ಷೆಗೆ ಒಳಗಾದವರಲ್ಲಿ, ಶೇ.47 ರಷ್ಟು ಜನರು ಪ್ರತಿ ರಾತ್ರಿ ಕೇವಲ 4ರಿಂದ 6 ಗಂಟೆಗಳ ಕಾಲ ನಿದ್ರಿಸುತ್ತಿದ್ದಾರೆ ಎಂದು ವರದಿ ಮಾಡಿದರೆ, ಶೇ.9 ರಷ್ಟು ಜನರು ನಾಲ್ಕು ಗಂಟೆಗಳಿಗಿಂತ ಕಡಿಮೆ ನಿದ್ರೆ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ. ಸಂಶೋಧನೆಗಳ ಪ್ರಕಾರ, ಪ್ರತಿಕ್ರಿಯಿಸಿದವರಲ್ಲಿ ಕೇವಲ 3% ಜನರು ಮಾತ್ರ ವೈದ್ಯರು, ಆರೋಗ್ಯ ತಜ್ಞರು ಶಿಫಾರಸು ಮಾಡುವ ದಿನಕ್ಕೆ 8ರಿಂದ 10 ಗಂಟೆಗಳ ಕಾಲ ನಿದ್ದೆ ಮಾಡುತ್ತಾರೆ.
ನಿದ್ದೆ ಅಡ್ಡಿಯಾಗುತ್ತಿರುವ ಅಂಶಗಳು
ಪದೇ ಪದೇ ಮೂತ್ರ ವಿಸರ್ಜನೆಗೆ ಹೋಗಬೇಕೆಂದೆನಿಸುವುದು ನಿದ್ರಾಭಂಗಕ್ಕೆ ಪ್ರಮುಖ ಕಾರಣವಾಗಿದೆ. ರಾತ್ರಿ ತಡವಾಗಿ ಮಲಗುವುದು, ಮುಂಜಾನೆ ಮನೆಯಲ್ಲಿ ಅವಸರದ ಕೆಲಸ, ಕಚೇರಿಗೆ ಹೊರಡುವ ಒತ್ತಡ, ಮೊಬೈಲ್ ಕರೆಗಳು ಮತ್ತು ಇತರ ಕೆಲಸ-ಕಾರ್ಯಗಳು, ಒತ್ತಡಗಳು, ಹೊರಗಡೆಯಿಂದ ಬರುವ ಶಬ್ದದ ಅಡಚಣೆಯಿಂದ ನಿದ್ದೆ ಬರುತ್ತಿಲ್ಲ ಎಂದು ಹೇಳುವವರು ಅಧಿಕ ಮಂದಿಯಿದ್ದಾರೆ.
ಸಂಗಾತಿ ಅಥವಾ ಮಗುವಿಗೆ ಸಂಬಂಧಿಸಿದ ಅಡಚಣೆಗಳು ಮತ್ತು ಅನಾನುಕೂಲವಾದ ಹಾಸಿಗೆಗಳು ಸಹ ನಿದ್ರಾ ಭಂಗಕ್ಕೆ ಕಾರಣವಾಗಿದೆ. ಇದಲ್ಲದೆ, ಪ್ರತಿಕ್ರಿಯಿಸಿದವರಲ್ಲಿ ಶೇಕಡಾ 17ರಷ್ಟು ಮಂದಿ ನಿರ್ದಿಷ್ಟ ಅಡಚಣೆಗಳಿಲ್ಲದೆ ಎಂಟು ಗಂಟೆಗಳ ಕಾಲ ನಿರಂತರವಾಗಿ ನಿದ್ರೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಹೇಳುತ್ತಾರೆ.
ತಮ್ಮ ನಿದ್ರೆಯ ಕೊರತೆಯನ್ನು ಸರಿದೂಗಿಸಲು, ಜನರು ಭಾನುವಾರದಂದು ಮಧ್ಯಾಹ್ನ ನಿದ್ರೆ ಮಾಡುತ್ತಾರೆ, ವಾರಾಂತ್ಯದಲ್ಲಿ ತಮ್ಮ ನಿದ್ರೆಯ ಸಮಯವನ್ನು ವಿಸ್ತರಿಸುತ್ತಾರೆ ಮತ್ತು ರಜಾದಿನಗಳಲ್ಲಿ ವಿಶ್ರಾಂತಿ ಪಡೆಯಲು ಬಯಸುತ್ತಾರೆ ಎಂದು ಸಮೀಕ್ಷೆ ಹೇಳುತ್ತದೆ. ಸುಮಾರು 28% ಜನರು ತಮ್ಮ ನಿದ್ರೆಯ ಕೊರತೆಯನ್ನು ಸರಿದೂಗಿಸಲು ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ. ಇದು ದೀರ್ಘಕಾಲದ ನಿದ್ರೆಯ ಕೊರತೆಗೆ ಕಾರಣವಾಗುತ್ತದೆ.
ನಿದ್ರಾಹೀನತೆಯಿಂದ ಅನಾರೋಗ್ಯ ಸಮಸ್ಯೆ
ನಿದ್ರಾಹೀನತೆಯಿಂದ ಹೃದಯರಕ್ತನಾಳದ ಕಾಯಿಲೆಗಳು, ತೂಕ ಹೆಚ್ಚಾಗುವುದು, ಟೈಪ್ 2 ಮಧುಮೇಹ ಮತ್ತು ದುರ್ಬಲಗೊಂಡ ಅರಿವಿನ ಕಾರ್ಯದಂತಹ ಹೆಚ್ಚಿನ ಅಪಾಯಕ್ಕೆ ಕಾರಣವಾಗುತ್ತದೆ. ಬೆಂಗಳೂರಿನ ನಿವಾಸಿಗಳಲ್ಲಿ ಉತ್ತಮ ನಿದ್ರೆಯ ನೈರ್ಮಲ್ಯ ಮತ್ತು ನಿದ್ರೆಗೆ ಸಂಬಂಧಿಸಿದ ಆರೋಗ್ಯ ಅಪಾಯಗಳ ಬಗ್ಗೆ ಹೆಚ್ಚಿದ ಜಾಗೃತಿಯ ತುರ್ತು ಅಗತ್ಯವನ್ನು ಸಂಶೋಧನೆಗಳು ಒತ್ತಿಹೇಳುತ್ತವೆ.
ದೇಶಾದ್ಯಂತ ಇತ್ತೀಚಿನ ದಿನಗಳಲ್ಲಿ ಇದೇ ರೀತಿಯ ಪ್ರವೃತ್ತಿ ಕಂಡುಬಂದಿದೆ, ಪ್ರತಿಕ್ರಿಯಿಸಿದವರಲ್ಲಿ 59% ಜನರು ಆರು ಗಂಟೆಗಳಿಗಿಂತ ಕಡಿಮೆ ಸಮಯ ನಿರಂತರ ನಿದ್ದೆ ಮಾಡುತ್ತಿದ್ದಾರೆ. ದೇಶಾದ್ಯಂತ 348 ಜಿಲ್ಲೆಗಳಿಂದ 43,000 ಕ್ಕೂ ಹೆಚ್ಚು ಪ್ರತಿಕ್ರಿಯೆಗಳನ್ನು ಸಂಗ್ರಹಿಸಿದ ಸಮೀಕ್ಷೆಯು ಪ್ರತಿಕ್ರಿಯಿಸಿದವರಲ್ಲಿ 61% ಪುರುಷರು ಮತ್ತು 39% ಮಹಿಳೆಯರಾಗಿದ್ದಾರೆ.
Advertisement