News headlines of the day 10-03-2025 | ಹಿಂದೂ ಹುಡುಗರು ಅನ್ಯಧರ್ಮೀಯ ಯುವತಿಯರನ್ನು ಪ್ರೀತಿಸಿ ಮದುವೆಯಾಗಿ- ಚಕ್ರವರ್ತಿ ಸೂಲಿಬೆಲೆ; ರಶ್ಮಿಕ ವಿರುದ್ಧ ಟೀಕೆ: ಗಣಿಗ ವಿರುದ್ಧ ಶಾಸಕ ಭರತ್ ಶೆಟ್ಟಿ ಕಿಡಿ; ಹಂಪಿ: ಪ್ರವಾಸಿಗರ ಸಂಖ್ಯೆ ಕುಸಿತ!

News headlines
ಸುದ್ದಿ ಮುಖ್ಯಾಂಶಗಳುonline desk

1. ನಟಿ ರನ್ಯಾ ರಾವ್ ಗೆ 14 ದಿನ ನ್ಯಾಯಾಂಗ ಬಂಧನ

ದುಬೈನಿಂದ ಅಕ್ರಮವಾಗಿ ಚಿನ್ನ ಕಳ್ಳಸಾಗಣೆ ಮಾಡಿದ ಪ್ರಕರಣ ಸಂಬಂಧ ಬಂಧನಕ್ಕೀಡಾಗಿರುವ ನಟಿ ರನ್ಯಾ ರಾವ್ ಗೆ ಕೋರ್ಟ್ 14 ದಿನ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದೆ. ಪ್ರಕರಣ ಸಂಬಂಧ ಡಿಆರ್ ಐ ಕಸ್ಟಡಿ ಅವಧಿ ಇಂದು ಮುಕ್ತಾಯವಾದ ಹಿನ್ನೆಲೆಯಲ್ಲಿ ರನ್ಯಾ ರಾವ್ ಅವರನ್ನು ಬೆಂಗಳೂರಿನ ಆರ್ಥಿಕ ಅಪರಾಧಗಳ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಮತ್ತೊಂದೆಡೆ, ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ರನ್ಯಾ ರಾವ್ ಜೊತೆ ಉದ್ಯಮಿ ಪುತ್ರ ತರುಣ್ ಹೆಸರು ಕೇಳಿಬಂದಿತ್ತು. ಹೀಗಾಗಿ ವಿಚಾರಣೆ ಮಾಡಿದ ಅಧಿಕಾರಿಗಳು ತರುಣ್ ರಾಜು ಎಂಬುವರನ್ನು ಬಂಧಿಸಿದ್ದಾರೆ. ರನ್ಯಾ ರಾವ್, ತರುಣ್ ರಾಜು ಸ್ನೇಹಿತರಾಗಿದ್ದರು. ರನ್ಯಾ ರಾವ್ರಿಂದ ತರುಣ್ ಚಿನ್ನ ತರಿಸಿಕೊಳ್ಳುತ್ತಿದ್ದರು ಎಂದು ಹೇಳಲಾಗುತ್ತಿದೆ.

2. ರನ್ಯಾ ರಾವ್ ಕಂಪನಿಗೆ 12 ಎಕರೆ KIADB ಭೂಮಿ!

ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಬಂಧಿತರಾಗಿರುವ ನಟಿ ರನ್ಯಾ ರಾವ್ ಗೆ ಸಂಬಂಧಿಸಿದ ಮೆಸರ್ಸ್ ಕ್ಸಿರೋಡಾ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ಗೆ 2023ರ ಜನವರಿ 2ರಂದು 12 ಎಕರೆ ಭೂಮಿಯನ್ನು ಮಂಜೂರು ಮಾಡಲಾಗಿದೆ ಎಂದು ಕೆಐಎಡಿಬಿ CEO ಮಹೇಶ್ ಸ್ಪಷ್ಟಪಡಿಸಿದ್ದಾರೆ. ತುಮಕೂರು ಜಿಲ್ಲೆಯ ಸಿರಾ ಕೈಗಾರಿಕಾ ಪ್ರದೇಶದಲ್ಲಿರುವ ಈ ಭೂಮಿಯನ್ನು ಹಿಂದಿನ ಸರ್ಕಾರದ ಅವಧಿಯಲ್ಲಿ 137ನೇ ರಾಜ್ಯ ಮಟ್ಟದ ಏಕ ವಿಂಡೋ ಕ್ಲಿಯರೆನ್ಸ್ ಸಮಿತಿ ಸಭೆಯಲ್ಲಿ ಹಂಚಿಕೆಗೆ ಅನುಮೋದಿಸಲಾಗಿದೆ ಎಂದು ಮಹೇಶ್ ಹೇಳಿದರು. ಕಂಪನಿಯು 138 ಕೋಟಿ ರು. ಹೂಡಿಕೆಯೊಂದಿಗೆ ಉಕ್ಕಿನ ಟಿಎಂಟಿ ಬಾರ್‌ಗಳು, ರಾಡ್‌ಗಳ ಉತ್ಪಾದನಾ ಘಟಕವನ್ನು ಸ್ಥಾಪಿಸಲು ಪ್ರಸ್ತಾವನೆ ಸಲ್ಲಿಸಿತ್ತು. ಆದರೆ ರನ್ಯಾ ಅವರು‌ ನಿಗದಿತ ಅವಧಿಯಲ್ಲಿ ಹಣ ಪಾವತಿಸದ ಕಾರಣ ಅವರಿಗೆ ಜಮೀನಿನ ಹಂಚಿಕೆ ಮಾಡಿಲ್ಲ‌ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಸೋಮವಾರ ಸ್ಪಷ್ಟಪಡಿಸಿದ್ದಾರೆ.

3. ರಶ್ಮಿಕಾ ವಿರುದ್ಧ ಟೀಕೆ: ರವಿ ಗಣಿಗ ವಿರುದ್ಧ ಶಾಸಕ ಭರತ್ ಕುಮಾರ್ ಶೆಟ್ಟಿ ಕಿಡಿ

ಕಾಂಗ್ರೆಸ್ ಶಾಸಕ ರವಿಕುಮಾರ್ ಗಣಿಗ ಅವರು ನಟಿ ರಶ್ಮಿಕಾ ಮಂದಣ್ಣ ಕುರಿತು ಮಾಡಿರುವ ಬೆದರಿಕೆ ಮತ್ತು ಟೀಕೆಗಳನ್ನು ಬಿಜೆಪಿ ಶಾಸಕ ಭರತ್ ಶೆಟ್ಟಿ ತೀವ್ರವಾಗಿ ಖಂಡಿಸಿದ್ದಾರೆ. ರಾಜಕೀಯ ಲಾಭಕ್ಕಾಗಿ ರಶ್ಮಿಕಾ ಅವರ ಹೆಸರನ್ನು ಬಳಸಲಾಗುತ್ತಿದೆ. ಕಾಂಗ್ರೆಸ್ ಪಕ್ಷದೊಳಗಿನ ಕೆಲವು ಸದಸ್ಯರು ಗೂಂಡಾಗಳ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ದೇಶದಲ್ಲಿ ಯಾವುದೇ ವ್ಯಕ್ತಿಗೆ ಕಾರ್ಯಕ್ರಮಕ್ಕೆ ಬರುವ ಅಥವಾ ಕಾರ್ಯಕ್ರಮಕ್ಕೆ ಬರದಿರುವ ಹಕ್ಕಿದೆ. ರಾಜಕಾರಣಿಗಳು ಬಹಿರಂಗವಾಗಿ ಬಂದು ಅವರಿಗೆ ಈ ರೀತಿ ಬೆದರಿಕೆ ಹಾಕುವುದು ಸರಿಯಲ್ಲ ಎಂದು ಭರತ್ ಶೆಟ್ಟಿ ಕಿಡಿಕಾರಿದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ರವಿ ಗಣಿಗ, ಕಳೆದ ಬಾರಿ ಚಲನಚಿತ್ರೋತ್ಸವಕ್ಕೆ ಕರೆದಾಗ ಬರಲು ನಿರಾಕರಿಸಿದ್ದು ಮತ್ತು ರಶ್ಮಿಕಾ ಅವರು ಹಲವಾರು ವೇದಿಕೆಗಳಲ್ಲಿ ಕನ್ನಡ ಕುರಿತು ಅವಮಾನಕಾರಿಯಾಗಿ ಮಾತನಾಡಿದ್ದನ್ನು ಇಂದಿಗೂ ಖಂಡಿಸುತ್ತೇನೆ. ಇವತ್ತಿಗೂ ಕರ್ನಾಟಕದ ಪರ ನಾನಿದ್ದೇನೆ ಅಂತ ಹೇಳಲಿ, ಆ ಬಗ್ಗೆ ನಾನು ತುಟಿಬಿಚ್ಚುವುದಿಲ್ಲ ಎಂದರು.

4. ಹಂಪಿಯಲ್ಲಿ ಪ್ರವಾಸಿಗರ ಸಂಖ್ಯೆ ಕುಸಿತ, 3 ನೇ ಆರೋಪಿ ಬಂಧನ

ಕೊಪ್ಪಳ ಜಿಲ್ಲೆಯ ಸಾಣಾಪುರ ಗ್ರಾಮದಲ್ಲಿ ಇಸ್ರೇಲಿ ಪ್ರಜೆ ಹಾಗೂ ಹೋಮ್‌ ಸ್ಟೇ ಆಪರೇಟರ್ ಮೇಲೆ ನಡೆದ ಹಲ್ಲೆ ಮತ್ತು ಅತ್ಯಾಚಾರ ಪ್ರಕರಣದ ನಂತರ ಹಂಪಿಗೆ ಬರುವ ಪ್ರವಾಸಿಗರ ಸಂಖ್ಯೆ ಗಣನೀಯ ಕುಸಿದಿದೆ. ಕೊಪ್ಪಳ ಘಟನೆಯು ಅಂತರರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದೆ. ಸಂತ್ರಸ್ತೆ ಇಸ್ರೇಲ್‌ ಮಹಿಳೆಯಾಗಿದ್ದರಿಂದ ರಾಯಭಾರ ಕಚೇರಿಗಳು ತಮ್ಮ ದೇಶಗಳ ಪ್ರವಾಸಿಗರ ಸ್ಥಿತಿಯನ್ನು ತಿಳಿದುಕೊಳ್ಳಲು ಸಿಎಂ ಕಚೇರಿ ಮತ್ತು ಕೊಪ್ಪಳ ಆಡಳಿತದ ಜೊತೆ ಸಂಪರ್ಕದಲ್ಲಿವೆ. ಹಂಪಿ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಿಗೆ ಇಸ್ರೇಲ್‌ನಿಂದ ಸುಮಾರು ಶೇ. 60 ರಷ್ಟು ಪ್ರವಾಸಿಗರು ಆಗಮಿಸುತ್ತಿರುತ್ತಾರೆ. ಕಳೆದ ಎರಡು ದಿನಗಳಲ್ಲಿ, ಹಂಪಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿರುವ 25ಕ್ಕೂ ಹೆಚ್ಚು ಹೋಂಸ್ಟೇಗಳ ಬುಕಿಂಗ್ ರದ್ದು ಮಾಡಲಾಗಿದೆ. ಏತನ್ಮಧ್ಯೆ, ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಮೂರನೇ ಆರೋಪಿಯನ್ನು ತಮಿಳುನಾಡಿನಲ್ಲಿ ಬಂಧಿಸಲಾಗಿದೆ.

5. ಹಿಂದೂ ಹುಡುಗರು ಅನ್ಯಧರ್ಮೀಯ ಯುವತಿಯರನ್ನು ಪ್ರೀತಿಸಿ ಮದುವೆಯಾಗಿ- ಚಕ್ರವರ್ತಿ ಸೂಲಿಬೆಲೆ

ಮದುವೆಯಾಗಲು ಹುಡುಗಿ ಸಿಗದ ಹಿಂದೂ ಹುಡುಗರು ಅನ್ಯಧರ್ಮೀಯ ಯುವತಿಯರನ್ನು ಪ್ರೀತಿಸಿ ಮದುವೆಯಾಗಿ ಎಂದು ಚಕ್ರವರ್ತಿ ಸೂಲಿಬೆಲೆ ಸಲಹೆ ನೀಡಿದ್ದಾರೆ. ವಿಶ್ವ ಹಿಂದೂ ಪರಿಷತ್ ಆಯೋಜಿಸಿದ್ದ ಕೊರಗಜ್ಜನ ಆದಿಕ್ಷೇತ್ರಕ್ಕೆ ನಮ್ಮ ನಡೆ ಪಾದಯಾತ್ರೆಯ ಸಮಾರೋಪದಲ್ಲಿ ಪಾಲ್ಗೊಂಡು ಮಾತನಾಡಿದ ಚಕ್ರವರ್ತಿ ಸೂಲಿಬೆಲೆ, 'ಮತಾಂತರ, ಲವ್ ಜಿಹಾದ್ ವಿಚಾರಗಳನ್ನು ಬಿಟ್ಟು ಬಿಡಿ. ಹಿಂದೂಧರ್ಮದಿಂದ ಮತಾಂತರವಾದವರನ್ನ ಮತ್ತೆ ‘ಘರ್ ವಾಪಸಿ’ ಮಾಡುವುದು ಹೇಗೆಂದು ನಮ್ಮ ಯುವಕರನ್ನ ತರಬೇತುಗೊಳಿಸಿ ಎಂದು ಹೇಳಿರುವುದು ಇದೀಗ ಚರ್ಚೆಗೆ ಎಡೆ ಮಾಡಿಕೊಟ್ಟಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com