News headlines 11-03-2025 | ಹೋಮ್ ಸ್ಟೇ, ರೆಸಾರ್ಟ್ ಗಳಿಗೆ ಸರ್ಕಾರದಿಂದ ಕಠಿಣ ಮಾರ್ಗಸೂಚಿ; ಬೆಂಗಳೂರಿನಲ್ಲಿ ತಂಪೆರೆದ ಮಳೆ; ಸದನದಲ್ಲಿ ಗ್ಯಾರೆಂಟಿ ಗದ್ದಲ; ನಗರವನ್ನು ಲೂಟಿ ಮಾಡಲು ಘಜ್ನಿ, ಘೋರಿ ವಕ್ಕರಿಸಿದ್ದಾನೆ: HDK ಕಿಡಿ

News headlines
ಸುದ್ದಿ ಮುಖ್ಯಾಂಶಗಳುonline desk

1. ಸದನದಲ್ಲಿ ಗ್ಯಾರೆಂಟಿ ಗದ್ದಲ

ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಗಳಿಗೆ ಕಾಂಗ್ರೆಸ್ ಕಾರ್ಯಕರ್ತರುಗಳನ್ನು ನೇಮಕ ಮಾಡಿ ಅವರಿಗೆ ಸರ್ಕಾರದಿಂದ ಗೌರವ ಧನ, ಭತ್ಯೆ ನೀಡುತ್ತಿರುವ ವಿಚಾರ ವಿಧಾನಸಭೆಯಲ್ಲಿಂದು ವಿಪಕ್ಷಗಳ ಆಕ್ರೋಶಕ್ಕೆ ಕಾರಣವಾಯಿತು. ಪ್ರಶ್ನೋತ್ತವ ಅವಧಿಯಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿ ವಿಚಾರ ಸದನದಲ್ಲಿ ಪ್ರಸ್ತಾಪಗೊಂಡು ಈ ಸಮಿತಿಗಳನ್ನು ರದ್ದುಪಡಿಸಿ ಎಂದು ಆಗ್ರಹಿಸಿದ ವಿಪಕ್ಷಗಳ ಸದಸ್ಯರು ಸದನದಲ್ಲಿ ಧರಣಿ ನಡೆಸಿದರು. ಪರಿಣಾಮ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ಮಾತಿನ ಚಕಮಕಿ ನಡೆದು ಸಭಾಧ್ಯಕ್ಷರು ಸದನವನ್ನು 10 ನಿಮಿಷ ಮುಂದೂಡಿದ್ದರು. ವಿಪಕ್ಷ ಸದಸ್ಯರು ಶಾಸಕರ ನೇತೃತ್ವದಲ್ಲೇ ಸಮಿತಿ ಮಾಡಿ ಎಂಬ ಬೇಡಿಕೆ ಇಟ್ಟಿದ್ದಾರೆ. ಈ ಬಗ್ಗೆ ಈಗಲೇ ತೀರ್ಮಾನ ಮಾಡಲು ಸಾಧ್ಯವಿಲ್ಲ. ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಮಾಡುತ್ತೇವೆ. ಸದ್ಯಕ್ಕೆ ಗ್ಯಾರಂಟಿ ಅನುಷ್ಠಾನ ಸಮಿತಿಗಳು ಮುಂದುವರೆಯುತ್ತವೆ ಎಂದು ಸರ್ಕಾರದ ನಡೆಯನ್ನು ಡಿಸಿಎಂ ಸಮರ್ಥಿಸಿದ್ದಾರೆ.

2. ರನ್ಯಾ ರಾವ್ ತಂದೆಗೂ ಸಂಕಷ್ಟ

ದುಬೈನಿಂದ ಅಕ್ರಮವಾಗಿ ಚಿನ್ನ ಸಾಗಾಟ ಮಾಡಿದ್ದ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ, ನಟಿ ರನ್ಯಾಗೆ ವಿಮಾನ ನಿಲ್ದಾಣದಲ್ಲಿ ಪ್ರೋಟೋಕಾಲ್ ನೀಡಿದ ಬಗ್ಗೆ ತನಿಖೆ ನಡೆಸಿ ಒಂದು ವಾರದ ಒಳಗೆ ವರದಿ ಸಲ್ಲಿಸುವಂತೆ ಕರ್ನಾಟಕ ಗೃಹ ಇಲಾಖೆ ಆದೇಶಿಸಿದೆ. ನಟಿ ರನ್ಯಾ ಚಿನ್ನ ಸಾಗಾಟ ಮಾಡುವಾಗ ಐಪಿಎಸ್ ಅಧಿಕಾರಿ ರಾಮಚಂದ್ರ ರಾವ್ ಹೆಸರು ಬಳಸಿದ್ದರು. ಹೀಗಾಗಿ ಶಿಷ್ಟಾಚಾರದ ಸೌಲಭ್ಯ ಪಡೆಯಲು ಕಾರಣವಾದ ಸಂಗತಿಗಳು ಯಾವುವು. ಕೇಸ್‌ನಲ್ಲಿ ರಾಮಚಂದ್ರರಾವ್ ಪಾತ್ರ ಏನೇನಿದೆ ಎಂಬ ಬಗ್ಗೆ ತನಿಖೆ ನಡೆಸಲು ಹಿರಿಯ ಐಪಿಎಸ್ ಅಧಿಕಾರಿ ಗೌರವ್ ಗುಪ್ತಾ ಅವರನ್ನು ನೇಮಿಸಲಾಗಿದೆ.

3. ಡಿವೈಎಸ್ ಪಿ ಕನಕಲಕ್ಷ್ಮಿ ಬಂಧನ

ಭೋವಿ ಅಭಿವೃದ್ಧಿ ನಿಗಮ ಅಕ್ರಮದ ತನಿಖೆ ವೇಳೆ ವಕೀಲೆ ಜೀವಾ ಆತ್ಮಹತ್ಯೆ ಪ್ರಕರಣದ ಸಂಬಂಧ ಡಿವೈಎಸ್ಪಿ ಕನಕಲಕ್ಷ್ಮಿ ಅವರನ್ನು ಬಂಧಿಸಲಾಗಿದೆ. ರಾಜ್ಯ ಭೋವಿ ನಿಗಮ ಹಗರಣದ ತನಿಖೆ ಎದುರಿಸಿದಾಗ ಪೊಲೀಸ್ ಅಧಿಕಾರಿ ವಿವಸ್ತ್ರಗೊಳಿಸಿ ವಿಚಾರಣೆ ನಡೆಸಿದ್ದಲ್ಲದೆ, 25 ಲಕ್ಷ ರೂ. ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದರು ಎಂದು ಮಹಿಳಾ ವಕೀಲೆ ಜೀವಾ ಡೆತ್ ನೋಟ್ ನಲ್ಲಿ ಆರೋಪಿಸಿದ್ದರು. ಈ ಸಂಬಂಧ ಸಿಐಡಿ ಡಿವೈಎಸ್ ಪಿ ಕನಕಲಕ್ಷ್ಮಿ ವಿರುದ್ಧ ಪ್ರಕರಣ ದಾಖಲಾಗಿತ್ತು.

4. ಹೋಮ್ ಸ್ಟೇ, ರೆಸಾರ್ಟ್ ಗಳಿಗೆ ಸರ್ಕಾರದಿಂದ ಕಠಿಣ ಮಾರ್ಗಸೂಚಿ

ಕೊಪ್ಪಳ ಜಿಲ್ಲೆಯ ಗಂಗಾವತಿಯ ಸಾಣಾಪುರದ ಬಳಿ ಇತ್ತೀಚೆಗೆ ನಡೆದಿದ್ದ ವಿದೇಶಿ ಮಹಿಳೆ ಮೇಲಿನ ಅತ್ಯಾಚಾರ ಪ್ರಕರಣದ ಹಿನ್ನಲೆಯಲ್ಲಿ ಕರ್ನಾಟಕ ಸರ್ಕಾರ ಕಠಿಣ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಹೊರವಲಯಗಳಲ್ಲಿ ಅಥವಾ ನಿರ್ಜನ ಪ್ರದೇಶಗಳಿಗೆ ಪ್ರವಾಸಿಗರನ್ನು ಕರೆದೊಯ್ಯುವ ಮುಂಚಿತವಾಗಿ ಸಂಬಂಧಿಸಿದ ಅಧಿಕಾರ ವ್ಯಾಪ್ತಿಯುಳ್ಳ ಪೊಲೀಸ್ ಠಾಣೆಯಲ್ಲಿ ಮಾಹಿತಿಯನ್ನು ನೀಡಿ, ಅನುಮತಿ ಪಡೆಯುವುದನ್ನು ಸರ್ಕಾರ ಕಡ್ಡಾಯಗೊಳಿಸಿದೆ. ಪೂರ್ವಾನುಮತಿ ಇಲ್ಲದೆ ಪ್ರವಾಸಿಗರನ್ನು ದೂರದ ಸ್ಥಳಗಳು, ಹೊರವಲಯಗಳಿಗೆ ಕರೆದೊಯ್ದಾಗ ಉಂಟಾಗುವ ಯಾವುದೇ ಘಟನೆಗಳಿಗೆ ಹೋಂಸ್ಟೇ ಮಾಲೀಕರನ್ನು ಹೊಣೆಗಾರರನ್ನಾಗಿ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.

5. ರೇಣುಕಾ ಯಲ್ಲಮ್ಮ ದೇವಸ್ಥಾನದ ಅಭಿವೃದ್ಧಿಗೆ ಕೇಂದ್ರ ಸರ್ಕಾರದಿಂದ 18.37 ಕೋಟಿ ರೂ. ಅನುದಾನ

ಬೆಳಗಾವಿ ಜಿಲ್ಲೆಯ ಸವದತ್ತಿಯ ರೇಣುಕಾ ಯಲ್ಲಮ್ಮ ದೇವಸ್ಥಾನದ ಅಭಿವೃದ್ಧಿಗೆ ಪ್ರಸಾದ್ ಯೋಜನೆಯಡಿಯಲ್ಲಿ ಕೇಂದ್ರ ಸರ್ಕಾರ 18.37 ಕೋಟಿ ರೂ. ಅನುದಾನವನ್ನು ಘೋಷಿಸಿದೆ. ಈ ಮಾಹಿತಿಯನ್ನು ಕೇಂದ್ರ ಸಂಸ್ಕೃತಿ ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಹಂಚಿಕೊಂಡಿದ್ದಾರೆ. ಅನುದಾನದಲ್ಲಿ ದೇವಾಲಯಕ್ಕೆ ಭಕ್ತಾಧಿಗಳ ಆಗಮನ ಕೇಂದ್ರ, ಕೆಫೆಟೇರಿಯಾ, ಪ್ರಥಮ ಚಿಕಿತ್ಸಾ ಕೇಂದ್ರ ಮತ್ತು ಇತರ ಆಧುನಿಕ ಸೌಲಭ್ಯ ಕಲ್ಪಿಸಲಾಗುತ್ತಿದೆ. ಈ ನಿರ್ಧಾರವನ್ನು ಸ್ವಾಗತಿಸಿದ ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿ ಸಂಸದ ಬಸವರಾಜ ಬೊಮ್ಮಾಯಿ, ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವರಿಗೆ ಧನ್ಯವಾದ ತಿಳಿಸಿದ್ದಾರೆ.

6. ನಗರವನ್ನು ಲೂಟಿ ಮಾಡಲು ಘಜ್ನಿ, ಘೋರಿ ವಕ್ಕರಿಸಿದ್ದಾನೆ: HDK ಕಿಡಿ

ಗ್ರೇಟರ್‌ ಬೆಂಗಳೂರು ವಿಧೇಯಕವನ್ನು ವಿಧಾನಸಭೆಯಲ್ಲಿ ಅಂಗೀಕರಿಸಲಾಗಿದ್ದು, ಮಸೂದೆಗೆ ಹೆಚ್‌.ಡಿ.ಕುಮಾರಸ್ವಾಮಿ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್‌ ಹಾಕಿ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. ಅಂದು: ಅಖಂಡ ಭಾರತವನ್ನು ಹೋಳು ಮಾಡಿದ ಕಾಂಗ್ರೆಸ್ ಈಗ ಬೆಂಗಳೂರು ಮಹಾನಗರವನ್ನು ಹೋಳು ಮಾಡುತ್ತಿದೆ, ಗ್ರೇಟರ್‌ ಬೆಂಗಳೂರು ಹೆಸರಿಗಷ್ಟೇ. ಲೂಟರ್‌ ಉದ್ದೇಶ ಕೊಳ್ಳೆ ಹೊಡೆಯುವುದಷ್ಟೇ ಎಂದು ಡಿಕೆ ಶಿವಕುಮಾರ್ ವಿರುದ್ಧ ಹೆಚ್ ಡಿ ಕುಮಾರಸ್ವಾಮಿ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.

7. ಬೆಂಗಳೂರಿನಲ್ಲಿ ತಂಪೆರೆದ ಮಳೆ

ಬೆಂಗಳೂರು ನಗರದ ಹಲವೆಡೆ ಇಂದು ಸಂಜೆ ಮಳೆಯಾಗಿದೆ. ಶಾಂತಿನಗರ, ಕಾರ್ಪೊರೇಷನ್, ರಿಚ್ಮಂಡ್ ಸರ್ಕಲ್, ಕೆ.ಆರ್.ಮಾರ್ಕೆಟ್, ಮೆಜೆಸ್ಟಿಕ್ ಸೇರಿದಂತೆ ಹಲವೆಡೆ ಮಳೆಯಾಗಿದ್ದು, ಬೇಸಿಗೆ ಬಿರು ಬಿಸಿಲಿನಿಂದ ಬಳಲಿದ್ದ ಬೆಂಗಳೂರಿನಲ್ಲಿ ಮಳೆ ತಂಪು ವಾತಾವರಣ ಮೂಡಿಸಿದೆ. ರಾಜ್ಯದ ಹಲವು ಭಾಗಗಳಲ್ಲಿ ಮಾರ್ಚ್‌ 14ರವರೆಗೆ ಸುಡುವ ಬೇಸಿಗೆಯಲ್ಲಿ ಮುಂಗಾರು ಪೂರ್ವ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com