
ಬೆಂಗಳೂರು: ಕಾಂಗ್ರೆಸ್ ಕಾರ್ಯಕರ್ತರು ಮತ್ತು ನಾಯಕರು ಮುಖ್ಯಸ್ಥರಾಗಿರುವ ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ರಾಜ್ಯ, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅನುಷ್ಠಾನ ಸಮಿತಿ ಅಸಂವಿಧಾನಿಕವಾಗಿದ್ದು, ಅವುಗಳನ್ನು ರದ್ದುಗೊಳಿಸಬೇಕು ಎಂದು ಪ್ರತಿಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ ಶಾಸಕರು ಬುಧವಾರ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ದೂರು ಸಲ್ಲಿಸಿದರು.
ಕಾಂಗ್ರೆಸ್ ಪಕ್ಷದ ಕಾರ್ಯಕರ್ತರನ್ನು ಒಳಗೊಂಡಿರುವ ಈ ಸಮಿತಿಗಳನ್ನು ಸಂಪೂರ್ಣವಾಗಿ ರಾಜಕೀಯ ಆಧಾರದ ಮೇಲೆ ರಚನೆ “ಅಸಂವಿಧಾನಿಕ” ಮಾತ್ರವಲ್ಲದೇ, ರಾಜ್ಯದ ಬೊಕ್ಕಸಕ್ಕೆ ಅನಗತ್ಯ ಹೊರೆಯಾಗಿದೆ ಎಂದು ಹೇಳಿದರು.
ಈ ವಿಚಾರವಾಗಿ ವಿಧಾನಸೌಧದ ಹೊರಗೆ ಪ್ರತಿಭಟನೆ ನಡೆಸಿದ ಬಿಜೆಪಿ, ಜೆಡಿಎಸ್ ಶಾಸಕರು ಎರಡನೇ ದಿನವೂ ವಿಧಾನಸೌಧದ ಕಲಾಪಕ್ಕೆ ಅಡ್ಡಿಪಡಿಸಿದರು. ನಂತರ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ್, ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ಜೆಡಿಎಸ್ ನಾಯಕ ಸಿ.ಬಿ.ಸುರೇಶ್ ಬಾಬು ಮತ್ತಿತರರ ನೇತೃತ್ವದಲ್ಲಿ ರಾಜಭವನಕ್ಕೆ ತೆರಳಿ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದರು.
ಗ್ಯಾರಂಟಿ ಅನುಷ್ಠಾನ ಸಮಿತಿಗಳನ್ನು ಕೂಡಲೇ ವಿಸರ್ಜಿಸಬೇಕು ಎಂದು ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು. ಸಾರ್ವಜನಿಕ ಹಣದ ದುರ್ಬಳಕೆ ತಡೆಯಲು ರಾಜಕೀಯ ಪ್ರೇರಿತ ಸಮಿತಿಗಳನ್ನು ರದ್ದುಪಡಿಸಬೇಕು ಎಂದು ಮನವಿ ಮಾಡಿದರು.
ಅಲ್ಲದೆ, ಈ ಸಮಿತಿಗಳಿಗೆ ಮೀಸಲಿಟ್ಟ ಹಣವನ್ನು ಅಗತ್ಯ ಸಾರ್ವಜನಿಕ ಸೇವೆಗಳು ಮತ್ತು ಕಲ್ಯಾಣ ಯೋಜನೆಗಳಿಗೆ ವರ್ಗಾಯಿಸಲು ಮತ್ತು ಸ್ಥಳೀಯ ಸರ್ಕಾರಿ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಜನಪ್ರತಿನಿಧಿಗಳ ಪಾತ್ರವನ್ನು ಮರು ಸ್ಥಾಪಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಒತ್ತಾಯಿಸಿದ್ದಾರೆ. ಈ ಸಮಿತಿಗಳನ್ನು ಕೇವಲ ರಾಜಕೀಯ ನೆಲೆಯಲ್ಲಿ ರಚಿಸಿರುವುದು ಅಸಾಂವಿಧಾನಿಕ ಮಾತ್ರವಲ್ಲದೆ ರಾಜ್ಯದ ಬೊಕ್ಕಸಕ್ಕೆ ಅನಗತ್ಯ ಹೊರೆಯಾಗುತ್ತಿದೆ. ಈ ಸಮಿತಿಗಳು ಸಾರ್ವಜನಿಕರ ಸೇವೆಗೆ ಬದಲಾಗಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ ಆರ್ಥಿಕವಾಗಿ ಲಾಭ ಮಾಡಿಕೊಡಲು ಬಳಕೆಯಾಗುತ್ತಿವೆ ಎಂದು ಆರೋಪಿಸಿದ್ದಾರೆ.
ಸಮಿತಿ ಸದಸ್ಯರು ಹೆಚ್ಚಿನ ಗೌರವಧನವನ್ನು ಪಡೆಯುತ್ತಿದ್ದರೆ ಆಶಾ ಕಾರ್ಯಕರ್ತೆಯರು, ಮಧ್ಯಾಹ್ನದ ಊಟದ ಸಿಬ್ಬಂದಿ, ಅರೆಕಾಲಿಕ ಉಪನ್ಯಾಸಕರು ಮತ್ತು ಗುತ್ತಿಗೆ ನೌಕರರು ಕಡಿಮೆ ವೇತನಕ್ಕಾಗಿ ತಿಂಗಳುಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ರಾಜಕೀಯವಾಗಿ ರಚಿಸಿದ ಸಮಿತಿಗಳಿಗೆ ಉದಾರವಾಗಿ ಹಣ ನೀಡುವ ಸರ್ಕಾರ, ಅತ್ಯವಶ್ಯಕ ಸರ್ಕಾರಿ ಕೆಲಸಗಾರರ ಬೇಡಿಕೆಗಳನ್ನು ನಿರ್ಲಕ್ಷಿಸಿರುವುದು ತೀವ್ರ ಅನ್ಯಾಯವಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯೇಂದ್ರ, ಈ ಸಮಿತಿಗಳು ಸಂವಿಧಾನ ಬಾಹಿರವಾಗಿದ್ದು, ಶಾಸಕರ ಅಧಿಕಾರ ಮೊಟಕುಗೊಳಿಸುವ ಯತ್ನವಾಗಿದೆ ಎಂಬುದನ್ನು ರಾಜ್ಯಪಾಲರ ಗಮನಕ್ಕೆ ತಂದಿದ್ದೇವೆ. ಈ ಸಮಿತಿಗಳಿಂದ ಕೆಲವೆಡೆ ಸಚಿವರು, ಶಾಸಕರ ಸವಲತ್ತುಗಳನ್ನು ಮೊಟಕುಗೊಳಿಸುತ್ತಿರುವುದರಿಂದ ಮುಂದಿನ ದಿನಗಳಲ್ಲಿ ವಿಶೇಷ ಹಕ್ಕು ಮಂಡನೆಗೆ ಮುಂದಾಗುತ್ತೇವೆ ಎಂದು ತಿಳಿಸಿದರು.
Advertisement