
ಬೆಂಗಳೂರು: ನಟಿ ರನ್ಯಾ ರಾವ್ ಅಕ್ರಮ ಚಿನ್ನ ಸಾಗಾಟ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಿದ್ದ ಆದೇಶವನ್ನು ಕೇವಲ ಎರಡೇ ದಿನದಲ್ಲಿ ವಾಪಸ್ ಪಡೆದುಕೊಂಡಿದೆ.
ರನ್ಯಾರಾವ್ ವಿದೇಶಗಳಿಗೆ ಹೋಗಿ ಬರುವಾಗ ಪೊಲೀಸರಿಂದಲೇ ಪ್ರೋಟೊಕಾಲ್ ಉಲ್ಲಂಘನೆಯಾದ ಹಿನ್ನೆಲೆಯಲ್ಲಿ ಸಿಐಡಿ ತನಿಖೆಗೆ ರಾಜ್ಯ ಸರ್ಕಾರ ಮಾರ್ಚ್ 11 ರಂದು ಆದೇಶ ಹೊರಡಿಸಿತ್ತು. ಆದರೆ, ಈಗ ಸರ್ಕಾರ ಏಕಾಏಕಿ ಸಿಐಡಿ ಆದೇಶವನ್ನು ಬುಧವಾರ ವಾಪಸ್ ಪಡೆದುಕೊಂಡಿದೆ.
ಪ್ರಭಾವಿ ಸಚಿವರು ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂಬಂತಹ ಮಾತುಗಳು ಕೇಳಿಬರುತ್ತಿರುವಾಗ ಸರ್ಕಾರದ ಈ ನಿರ್ಧಾರ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ನಟಿ ರನ್ಯಾ ರಾವ್ ತಂದೆ ರಾಮಚಂದ್ರರಾವ್ ಅವರಿಂದ ಪ್ರೋಟೋಕಾಲ್ ದುರ್ಬಳಕೆ ಆಗಿದೆಯೇ ಎಂಬುದನ್ನು ತನಿಖೆ ಮಾಡಲು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ ನೇತೃತ್ವದಲ್ಲಿ ಪ್ರತ್ಯೇಕ ತನಿಖೆಗೆ ವಹಿಸಿರುವ ಹಿನ್ನೆಲೆಯಲ್ಲಿ ಸಿಐಡಿ ತನಿಖೆ ಆದೇಶವನ್ನು ವಾಪಸ್ ಪಡೆದಿರುವುದಾಗಿ ರಾಜ್ಯ ಸರ್ಕಾರ ಸ್ಪಷ್ಪಪಡಿಸಿದೆ.
ಇದೀಗ ಮುಂದಿನ ತನಿಖೆ ಹೇಗೆ ನಡೆಯುತ್ತದೆ ಎಂಬುದು ಸಾಕಷ್ಟು ಕುತೂಹಲ ಮೂಡಿಸಿದೆ.
Advertisement