
ಬೆಂಗಳೂರು: ಚಿನ್ನದ ಕಳ್ಳಸಾಗಣೆ ಕೇಸಿನಲ್ಲಿ ಮಾರ್ಚ್ 3ರಂದು ರಾತ್ರಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗುಪ್ತಚರ ನಿರ್ದೇಶನಾಲಯ(DRI) ಅಧಿಕಾರಿಗಳಿಂದ ಬಂಧನಕ್ಕೀಡಾದ ನಟಿ ಹರ್ಷವರ್ಧಿನಿ ರನ್ಯಾ ಅಲಿಯಾಸ್ ರನ್ಯಾ ರಾವ್(33 ವ)ರನ್ನು ಮಾರ್ಚ್ 18ರವರೆಗೆ ಆರ್ಥಿಕ ಅಪರಾಧಗಳ ವಿಶೇಷ ಕೋರ್ಟ್ ನ್ಯಾಯಾಂಗ ಬಂಧನಕ್ಕೊಪ್ಪಿಸಿದೆ.
ಬಂಧನ ಬಳಿಕ ತನಿಖೆ ಮಾಡುತ್ತಾ ಹೋದಾಗ ರನ್ಯಾ ಫೆಬ್ರವರಿ ತಿಂಗಳಲ್ಲಿ ಮೂರು ಬಾರಿ ದುಬೈಗೆ ಭೇಟಿ ಕೊಟ್ಟಿದ್ದರು ಎಂಬ ಮಾಹಿತಿ ಸಿಕ್ಕಿದೆ. ರನ್ಯಾ, ಎಮಿರೇಟ್ಸ್ ಏರ್ ಲೈನ್ಸ್ ನಲ್ಲಿ ಬ್ಯುಸ್ ನೆಸ್ ಕ್ಲಾಸ್ ನಲ್ಲಿ ದುಬೈಯಿಂದ ಪ್ರಯಾಣಿಸಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದಾಗ ಬಂಧನಕ್ಕೊಳಗಾದರು. ಆಕೆಯ ಬಳಿ ಯುಎಇಯ ವಸತಿ ಗುರುತು ಪತ್ರವಿದೆ. ಅಂದರೆ ಅಲ್ಲಿ ಆಕೆ ನೆಲೆ ಕಂಡುಕೊಂಡಿದ್ದಾರೆ ಎಂದರ್ಥವಾಗುತ್ತದೆ. ತನ್ನ ಬ್ಯುಸ್ ನೆಸ್ ಐಡೆಂಟಿಟಿ ಕಾರ್ಡ್ ಮೂಲಕ ವಿದೇಶಗಳಿಗೆ ಆಗಾಗ ಪ್ರಯಾಣಿಸುತ್ತಿರುತ್ತಾರೆ ಎಂದು ಅನಾಮಧೇಯ ಷರತ್ತಿನ ಮೇರೆ ಖಚಿತ ಮೂಲಗಳಿಂದ ಮಾಹಿತಿ ಸಿಕ್ಕಿದೆ.
ಮಾರ್ಚ್ 3ರಂದು ರಾತ್ರಿ ಏನಾಯ್ತು
ಅಂದು ಮಾರ್ಚ್ 3ರ ರಾತ್ರಿ ಡಿಆರ್ ಐ ಅಧಿಕಾರಿಗಳು ರನ್ಯಾರನ್ನು ಕೆಂಪೇಗೌಡ ಇಂಟರ್ನಾಷನಲ್ ಏರ್ ಪೋರ್ಟ್ ನಲ್ಲಿ 1962ರ ಕಸ್ಟಮ್ಸ್ ಆಕ್ಟ್ ನಡಿ 12.56 ಕೋಟಿ ರೂಪಾಯಿ ಮೌಲ್ಯದ 14.2 ಕೆಜಿ ಚಿನ್ನವನ್ನು ಕಳ್ಳಸಾಗಣೆ ಮಾಡುತ್ತಿದ್ದ ಆರೋಪದ ಮೇಲೆ ಬಂಧಿಸಿದರು. ರನ್ಯಾ ಬಳಿ 14 ಚಿನ್ನದ ಬಿಸ್ಕತ್ ಗಳಿದ್ದವು, ಪ್ರತಿಯೊಂದೂ 1 ಕೆಜಿ ತೂಕ ಹೊಂದಿದ್ದು ತನ್ನ ತೊಡೆಯ ಮೇಲೆ ಟೇಪ್ ಮತ್ತು ಬ್ಯಾಂಡೇಜ್ ನಿಂದ ಸುತ್ತಿ ತರುತ್ತಿದ್ದರು. ಆಕೆ ವಿಮಾನದೊಳಗೆ ಅಥವಾ ಕಸ್ಟಮ್ಸ್ ಅಧಿಕಾರಿಗಳಿಂದ ತಪ್ಪಿಸಿಕೊಳ್ಳಲು ವಿಮಾನ ಹತ್ತುವ ಮೊದಲು ಕಣ್ತಪ್ಪಿಸಿ ತೆಗೆದುಕೊಂಡು ಬಂದಿರಬಹುದು ಎಂದು ಅನಾಮಧೇಯ ಮೂಲಗಳು ಹೇಳುತ್ತವೆ.
ಕಂಪನಿಗಳ ರಿಜಿಸ್ಟ್ರಾರ್ (RoC) ದಾಖಲೆಗಳ ಪ್ರಕಾರ, ಏಪ್ರಿಲ್ 22, 2022 ರಂದು ರಚಿಸಲಾದ ಕ್ಸಿರೋಡಾ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನಲ್ಲಿ ರನ್ಯಾ ಪ್ರಮುಖ ಷೇರುದಾರರಾಗಿದ್ದರು. ಸರ್ಕಾರೇತರ ಕಂಪನಿ ಎಂದು ವರ್ಗೀಕರಿಸಲ್ಪಟ್ಟ ಇದು ಆರ್ ಒಸಿ-ಬೆಂಗಳೂರಿನಲ್ಲಿ ನೋಂದಾಯಿಸಲ್ಪಟ್ಟಿದೆ. ಕಂಪನಿಯ ವೆಬ್‌ಸೈಟ್ ನಲ್ಲಿ ಹರ್ಷವರ್ದಿನಿ ರನ್ಯಾ ಮತ್ತು ಅವರ ಸಹೋದರ ಕಬ್ಬಿನಹಳ್ಳಿ ರುಷಾಬ್ ಅವರನ್ನು ನಿರ್ದೇಶಕರು ಎಂದು ಉಲ್ಲೇಖವಿದೆ.
ಚಿನ್ನದ ಕಳ್ಳಸಾಗಣೆ ಪ್ರಕರಣದಲ್ಲಿ ಡಿಆರ್‌ಐ ಈಗ ವಿವಿಧ ಕೋನಗಳಿಂದ ತನಿಖೆ ನಡೆಸುತ್ತಿದೆ. ರನ್ಯಾ ಬೆಂಗಳೂರಿಗೆ ಎಲ್ಲಿಗೆ ಚಿನ್ನವನ್ನು ಕದ್ದು ತರುತ್ತಿದ್ದರು, ಕಳ್ಳಸಾಗಣೆ ಚಿನ್ನಕ್ಕೆ ಪಾವತಿ ವಿಧಾನ ಹೇಗೆ, ಇಲ್ಲಿ ರನ್ಯಾ ಪ್ರಮುಖ ಆರೋಪಿಯೇ ಅಥವಾ ಇದರ ಹಿಂದೆ ಕಳ್ಳಜಾಲವಿದೆಯೇ ಎಂದೆಲ್ಲ ತನಿಖೆ ನಡೆಸಲಾಗುತ್ತಿದೆ.
ತರುಣ್ ಕೊಂಡರಾಜು ಬಂಧನ
ಈ ಚಿನ್ನದ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಆರ್‌ಐ ರನ್ಯಾ ಸ್ನೇಹಿತ ತರುಣ್ ಕೊಂಡರಾಜುನನ್ನು ಬಂಧಿಸಿ ನಿನ್ನೆ ನ್ಯಾಯಾಲಯಕ್ಕೆ ಹಾಜರುಪಡಿಸಿತು. ಈತ ರನ್ಯಾ ಜೊತೆ ದುಬೈಗೆ ಹೋಗಿದ್ದರು.
ಎಮಿರೇಟ್ಸ್ ಏರ್‌ಲೈನ್ಸ್‌ನ ಬಿಸಿನೆಸ್ ಕ್ಲಾಸ್‌ನಲ್ಲಿ ಆಗಾಗ್ಗೆ ವಿಮಾನಯಾನ, ಅಲ್ಪಾವಧಿಯ ಭೇಟಿಗಳು ಮತ್ತು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರತಿ ಬಾರಿಯೂ ಅವರು ಬೆಂಗಳೂರಿಗೆ ಬಂದಾಗಲೆಲ್ಲಾ ಪ್ರೋಟೋಕಾಲ್ ಬೆಂಗಾವಲು ರನ್ಯಾ ಅವರನ್ನು ಏಜೆನ್ಸಿಗಳ ಗಮನಕ್ಕೆ ತಂದಿತು. ಕೆಂಪೇಗೌಡ ಏರ್ ಪೋರ್ಟ್ ನಲ್ಲಿ ಒಂದು ಬಾರಿಗೆ ಮೂರರಿಂದ ನಾಲ್ಕು ಅಂತಾರಾಷ್ಟ್ರೀಯ ವಿಮಾನಗಳು ಇಳಿಯುತ್ತವೆ ಮತ್ತು ಪ್ರತಿ ವಿಮಾನದಲ್ಲಿ ಸುಮಾರು 300 ಪ್ರಯಾಣಿಕರಿರುತ್ತಾರೆ. ಎಲ್ಲರನ್ನೂ ಪರಿಶೀಲಿಸುವುದು ಅಸಾಧ್ಯ.
ಕೆಲವೊಮ್ಮೆ ಅಧಿಕಾರಿಗಳು ರ್ಯಾಂಡಮ್ ಆಗಿ ತಪಾಸಣೆ ನಡೆಸುತ್ತಾರೆ. ಇತರ ಸಂದರ್ಭಗಳಲ್ಲಿ, ಗುಪ್ತಚರ/ಇತರ ಮಾಹಿತಿಗಳು ಮತ್ತು ಪ್ರಯಾಣಿಕರ ಹಿನ್ನೆಲೆ ಆಧರಿಸಿ ತಡೆಹಿಡಿದ ನಂತರ ಬಂಧನಗಳನ್ನು ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. ಅಂತಾರಾಷ್ಟ್ರೀಯ ವಿಮಾನಯಾನ ಸಂಸ್ಥೆಗಳು ತಮ್ಮ ಪ್ರಯಾಣಿಕರ ಮಾಹಿತಿಗಳನ್ನು ಕಸ್ಟಮ್ಸ್ ಮತ್ತು ವಲಸೆ ಅಧಿಕಾರಿಗಳಿಗೆ ಕಳುಹಿಸುವುದು ಕಡ್ಡಾಯವಾಗಿದೆ.
ಕಳೆದ ಒಂದು ವರ್ಷದಲ್ಲಿ ದುಬೈ ಮತ್ತು ಇತರ ಕೆಲವು ದೇಶಗಳಿಗೆ 25 ಬಾರಿ ಮತ್ತು ಬಂಧನಕ್ಕೆ ಹದಿನೈದು ದಿನಗಳಲ್ಲಿ ನಾಲ್ಕು ಬಾರಿ ರನ್ಯಾ ಭೇಟಿ ನೀಡಿದ್ದರು. ಕೆಐಎಯ ಕಸ್ಟಮ್ಸ್ ಮತ್ತು ವಲಸೆ ಅಧಿಕಾರಿಗಳ ಗಮನ ಸೆಳೆದಿದ್ದವು.
ರನ್ಯಾ ಬಂಧನವಾದ ಮರುದಿನ ಮಾರ್ಚ್ 4 ರಂದು, ಡಿಆರ್‌ಐ ದಾಳಿಯ ಸಮಯದಲ್ಲಿ ಆಕೆಯ ಮನೆಯಿರುವ ನಂ 62, ನಂದ್ವಾನಿ ಮ್ಯಾನ್ಷನ್, ಲ್ಯಾವೆಲ್ಲೆ ರಸ್ತೆಯಿಂದ 2.06 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ ಮತ್ತು 2.67 ಕೋಟಿ ರೂಪಾಯಿ ನಗದನ್ನು ವಶಪಡಿಸಿಕೊಂಡಿತು. ಪ್ರಕರಣದಲ್ಲಿ ಒಟ್ಟು ವಶಪಡಿಸಿಕೊಳ್ಳಲಾದ ಹಣ 17.29 ಕೋಟಿ ರೂಪಾಯಿಗಳಾಗಿದ್ದು, ಇದರಲ್ಲಿ 4.73 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಒಳಗೊಂಡಿದೆ.
Advertisement