ಅಕ್ರಮ ಅದಿರು ಸಾಗಣೆ ಆರೋಪ: ಸಾಕ್ಷ್ಯಾಧಾರಗಳ ಕೊರತೆ; ಮಾಜಿ ಸಚಿವ ಆನಂದ್ ಸಿಂಗ್ ಸೇರಿ 12 ಮಂದಿ ಖುಲಾಸೆ

ಸಾಕ್ಷ್ಯಾಧಾರಗಳ ಕೊರತೆ ಕಾರಣ ನೀಡಿರುವ ನ್ಯಾಯಾಧೀಶರು, ಆನಂದ್ ಸಿಂಗ್ ಸೇರಿದಂತೆ ಎಲ್ಲಾ ಆರೋಪಿಗಳನ್ನೂ ಪ್ರಕರಣದಿಂದ ಖುಲಾಸೆಗೊಳಿಸಿ ಆದೇಶಿಸಿದ್ದಾರೆ.
Anand singh
ಆನಂದ್ ಸಿಂಗ್
Updated on

ಬೆಂಗಳೂರು: ಬಳ್ಳಾರಿಯ ವ್ಯಾಸನಕೆರೆ ಗಣಿಯಿಂದ ಅಕ್ರಮ ಅದಿರು ಸಾಗಣೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಆನಂದ ಸಿಂಗ್ ಮತ್ತು ಗೋವಾದ ಹಾಲಿ ಸಚಿವ ರೋಹನ್ ಅಶೋಕ್ ಖಾವುಂತೆ ಸೇರಿದಂತೆ ಇತರರ ವಿರುದ್ಧದ ಕ್ರಿಮಿನಲ್ ಪ್ರಕರಣವನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ರದ್ದುಪಡಿಸಿದೆ. ಈ ಸಂಬಂಧ ಕಾಯ್ದಿರಿಸಿದ್ದ ಆದೇಶವನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಶುಕ್ರವಾರ ಪ್ರಕಟಿಸಿತು.

ಕರ್ನಾಟಕ ಲೋಕಾಯುಕ್ತದ ವಿಶೇಷ ತನಿಖಾ ತಂಡ ಪ್ರಕರಣವನ್ನು ಸಾಬೀತುಪಡಿಸಲು ಸಂಪೂರ್ಣವಾಗಿ ವಿಫಲವಾಗಿದೆ ಎಂದು ವಿಶೇಷ ನ್ಯಾಯಾಲಯವು ಮಾಜಿ ಸಚಿವ ಆನಂದ್ ಸಿಂಗ್ ಮತ್ತು ಗೋವಾ ಪ್ರವಾಸೋದ್ಯಮ ಸಚಿವ ರೋಹನ್ ಎಸ್ ಖೌಂಟೆ ಸೇರಿದಂತೆ 12 ಆರೋಪಿಗಳನ್ನು ಮತ್ತು ಮೂರು ಸಂಸ್ಥೆಗಳನ್ನು ಕಬ್ಬಿಣದ ಅದಿರು ಅಕ್ರಮ ರಫ್ತು ಪ್ರಕರಣದಲ್ಲಿ ಖುಲಾಸೆಗೊಳಿಸಿದೆ.

ಬಿಜೆಪಿ ಶಾಸಕ ಆನಂದ್ ಸಿಂಗ್, ಬಿ ಎಸ್‌ ಗೋಪಾಲ ಸಿಂಗ್, ಬಿ ಎಸ್‌ ಪಾಂಡುರಂಗ ಸಿಂಗ್, ಮೆಸರ್ಸ್‌ ನೈವೇದ್ಯ ಲಾಜಿಸ್ಟಿಕ್ಸ್, ರಾಜೇಶ್ ಅಶೋಕ್‌ ಖಾವುಂತೆ, ರೋಹನ್ ಖಾವುಂತೆ, ಶಾಜು ನಾಯರ್, ರಿಯಾ ನಾಯರ್, ಮೊಹಮ್ಮದ್ ಮುನೀರ್, ಕ್ಲಾರಿಯಾ ಮಾರ್ಕೆಟಿಂಗ್‌ ಸರ್ವೀಸಸ್‌ ಪ್ರೈವೇಟ್‌ ಲಿಮಿಟೆಡ್‌, ಆನಂದ್‌ ಸಿಂಗ್‌ ಮಾಲೀಕತ್ವದ ಎಸ್‌ ಬಿ ಮಿನರಲ್ಸ್‌ ಅನ್ನು ದೋಷಮುಕ್ತಗೊಳಿಸಲಾಗಿದೆ ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.

ಸಾಕ್ಷ್ಯಾಧಾರಗಳ ಕೊರತೆ ಕಾರಣ ನೀಡಿರುವ ನ್ಯಾಯಾಧೀಶರು, ಆನಂದ್ ಸಿಂಗ್ ಸೇರಿದಂತೆ ಎಲ್ಲಾ ಆರೋಪಿಗಳನ್ನೂ ಪ್ರಕರಣದಿಂದ ಖುಲಾಸೆಗೊಳಿಸಿ ಆದೇಶಿಸಿದ್ದಾರೆ. “ಆರೋಪಿಗಳು, ಎಸ್ ಬಿ ಮಿನರಲ್ಸ್‌ಗೆ ಸೇರಿದ ಗಣಿಯಿಂದ 16,987 ಮೆಟ್ರಿಕ್ ಟನ್ ಅದಿರನ್ನು ಅಕ್ರಮವಾಗಿ ಸಾಗಣೆ ಮಾಡಿ ಸರ್ಕಾರದ ಬೊಕ್ಕಸಕ್ಕೆ ₹1.53 ಕೋಟಿ ನಷ್ಟ ಉಂಟುಮಾಡಿದ್ದಾರೆ" ಎಂದು ಆರೋಪಿಸಲಾಗಿತ್ತು.

Anand singh
ಆನಂದ್ ಸಿಂಗ್ ಅವರನ್ನು ಅರಣ್ಯ ಖಾತೆ ಸಚಿವ ಮಾಡಿ 'ಕುರಿ ಕಾಯಲು ತೋಳವನ್ನು ಬಿಟ್ಟಂತೆ' ಆಗಿದೆ:ಸಿದ್ದರಾಮಯ್ಯ

ಆರೋಪಿಗಳ ವಿರುದ್ಧ ಐಪಿಸಿಯ ವಿವಿಧ ವಿಭಾಗಗಳು, ಗಣಿ ಮತ್ತು ಖನಿಜಗಳು (ಅಭಿವೃದ್ಧಿ ಮತ್ತು ನಿಯಂತ್ರಣ) ಕಾಯ್ದೆ, 1957 ಮತ್ತು ಕರ್ನಾಟಕ ಅರಣ್ಯ ನಿಯಮಗಳು, 1969 ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧಕ್ಕಾಗಿ ಪ್ರಕರಣ ದಾಖಲಿಸಲಾಗಿದೆ.

ಸರ್ಕಾರಿ ಅಧಿಕಾರಿಗಳು, ಗಣಿ ಉದ್ಯಮಿಗಳು ಮತ್ತು ಇತರೆ ಖಾಸಗಿ ವ್ಯಕ್ತಿಗಳು ಅಕ್ರಮ ಮತ್ತು ಕಾನೂನುಬಾಹಿರವಾಗಿ ಅಕ್ರಮ ಕೂಟ ರಚಿಸಿಕೊಂಡು ಬೇಲೇಕೇರಿ ಬಂದರಿಗೆ ಅದಿರು ಸಾಗಿಸಿ, ಅಲ್ಲಿಂದ ಪರವಾನಗಿ ಪಡೆಯದೇ ವಿದೇಶಗಳಿಗೆ ಅದಿರು ರಫ್ತು ಮಾಡಿದ್ದರು. ಈ ಮೂಲಕ ಸರ್ಕಾರಕ್ಕೆ ಸೇರಿದ ಅದಿರನ್ನು ಕಳುವು ಮಾಡಿ, ವಂಚಿಸಿ, ಲಾಭ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು.

2009 ಮತ್ತು 2010 ರ ನಡುವೆ ನಡೆದ ಅಪರಾಧಗಳಿಗಾಗಿ 2015 ರಲ್ಲಿ ಎಸ್‌ಐಟಿ ದಾಖಲಿಸಿದ ಪ್ರಕರಣದ ಪ್ರಕಾರ, ಪಿಸೆಸ್ ಎಕ್ಸಿಮ್ ಮುಂಬೈ ಕಾರವಾರ ಬಂದರಿನಿಂದ 14,000 ಮೆಟ್ರಿಕ್ ಟನ್ ಕಬ್ಬಿಣ ಮತ್ತು ಬೇಲೆಕೇರಿ ಬಂದರಿನಿಂದ ಸುಮಾರು 6,000 ಮೆಟ್ರಿಕ್ ಟನ್ ಕಬ್ಬಿಣದ ಅದಿರನ್ನು ರಫ್ತು ಮಾಡಲು ಪಿಇಸಿ ಇಂಡಿಯಾ ಜೊತೆ ಒಪ್ಪಂದ ಮಾಡಿಕೊಂಡಿತ್ತು. ಅಗತ್ಯ ಪರವಾನಗಿಗಳನ್ನು ಪಡೆಯದೆ ಅಥವಾ ಸರ್ಕಾರಕ್ಕೆ ಅಗತ್ಯವಾದ ರಾಯಲ್ಟಿ ಮತ್ತು ತೆರಿಗೆಗಳನ್ನು ಪಾವತಿಸದೆ ಪಿಸೆಸ್ ಎಕ್ಸಿಮ್ ಮುಂಬೈ ವಿವಿಧ ಡೀಲರ್‌ಗಳಿಂದ 11,397.44 ಮೆಟ್ರಿಕ್ ಟನ್ ಪಡೆದಿದೆ ಎಂದು ಆರೋಪಿಸಲಾಗಿದೆ.

ಕೊನೆಯ ತನಿಖಾ ಅಧಿಕಾರಿ ಎನ್‌ಎಚ್ ರಾಮಚಂದ್ರಯ್ಯ ಹಲವಾರು ಪರವಾನಗಿಗಳ ಸತ್ಯಾಸತ್ಯತೆಯನ್ನು ಪರಿಶೀಲಿಸದೆ ನ್ಯಾಯಾಲಯದ ಮುಂದೆ ದಾಖಲೆ ನೀಡಿದ್ದಾರೆ. ಕಾನೂನಿನ ಪ್ರಕಾರ ತನಿಖೆ ನಡೆಯುತ್ತದೆ ಎಂಬ ಭರವಸೆಯೊಂದಿಗೆ ತನಿಖೆಯನ್ನು ಕರ್ನಾಟಕ ಲೋಕಾಯುಕ್ತದ ಎಸ್‌ಐಟಿಗೆ ವಹಿಸಲಾಗಿತ್ತು ಎಂಬುದು ದುರದೃಷ್ಟಕರ. ಕಬ್ಬಿಣದ ಅದಿರನ್ನು ಸಾಗಿಸಿದ ಇತರ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದ್ದರೂ, ಕೊನೆಯ ತನಿಖಾ ಅಧಿಕಾರಿ, ತನಗೆ ಚೆನ್ನಾಗಿ ತಿಳಿದಿರುವ ಕಾರಣಗಳಿಗಾಗಿ, ಅವರನ್ನು ಸಾಕ್ಷಿಗಳಾಗಿ ವಿಚಾರಣೆಗೆ ಒಳಪಡಿಸಿ ಆರೋಪಪಟ್ಟಿ ಸಲ್ಲಿಸಿದ್ದರು” ಎಂದು ನ್ಯಾಯಾಲಯ ಹೇಳಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com