
ಬೆಂಗಳೂರು: ಕನ್ನಡ ನಟಿ ರನ್ಯಾ ರಾವ್ ಅವರ ಚಿನ್ನದ ಕಳ್ಳಸಾಗಣೆ ಪ್ರಕರಣದ ಸಿಐಡಿ ತನಿಖೆಯನ್ನು ಹಿಂತೆಗೆದುಕೊಳ್ಳುವಂತೆ ತಮ್ಮ ಮೇಲೆ ಯಾವುದೇ ಒತ್ತಡವಿಲ್ಲ ಎಂದು ಗೃಹ ಸಚಿವ ಜಿ ಪರಮೇಶ್ವರ ಗುರುವಾರ ಹೇಳಿದ್ದಾರೆ.
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಐಎ) ನಿಯೋಜಿಸಲಾದ ಪೊಲೀಸ್ ಸಿಬ್ಬಂದಿಯ ಲೋಪ ಮತ್ತು ಕರ್ತವ್ಯ ಲೋಪಗಳ ಬಗ್ಗೆ ಸಿಐಡಿ ತನಿಖೆಗೆ ನೀಡಿದ್ದ ಆದೇಶವನ್ನು ಕರ್ನಾಟಕ ಸರ್ಕಾರ ಘೋಷಿಸಿದ 24 ಗಂಟೆಗಳ ಒಳಗೆ ಹಿಂತೆಗೆದುಕೊಂಡಿದೆ.
ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಡಿಪಿಎಆರ್) ರನ್ಯಾ ಅವರ ಮಲತಂದೆ ಡಿಜಿಪಿ ಶ್ರೇಣಿಯ ಅಧಿಕಾರಿ ಕೆ ರಾಮಚಂದ್ರ ರಾವ್ ಅವರ ಸಂಭಾವ್ಯ ಪಾತ್ರದ ತನಿಖೆಗೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ ಅವರನ್ನು ನೇಮಿಸಲು ಆದೇಶಿಸಿರುವುದರಿಂದ, ಸಮಾನಾಂತರ ತನಿಖೆಯ ಅಗತ್ಯವಿಲ್ಲ ಎಂದು ಸಚಿವರು ಹೇಳಿದರು.
ಪೊಲೀಸ್ ಪ್ರೊಟೊಕಾಲ್ ಉಲ್ಲಂಘನೆ ಬಗ್ಗೆ ತಿಳಿದುಕೊಳ್ಳಲು ನಾನು ಸಿಐಡಿ ತನಿಖೆಗೆ ಆದೇಶಿಸಿದೆ. ಅಷ್ಟರೊಳಗಾಗಲೇ ಸಿಎಂ ಕಚೇರಿಯಿಂದ ಮೇಲ್ಮಟ್ಟದ ತನಿಖೆಗೆ ಆದೇಶ ನೀಡಲಾಗಿತ್ತು. ಒಂದೇ ವಿಚಾರಕ್ಕೆ ಎರಡು ಕಡೆ ತನಿಖೆ ಆಗೋದು ಬೇಡ ಎಂಬ ಕಾರಣಕ್ಕೆ ನಾವು ಸಿಐಡಿ ತನಿಖೆಯನ್ನು ಹಿಂಪಡೆದೆವು’ ಎಂದು ಹೇಳಿದ್ದಾರೆ. ಎರಡು ಪ್ರತ್ಯೇಕ ತನಿಖೆಗಳು ನಡೆಯಬಾರದು ಎಂಬ ಕಾರಣಕ್ಕೆ ನಾವು ಹಿಂದೆ ಸರಿದ್ದೇವೆ ಎಂದು ಹೇಳಿದ್ದಾರೆ.
ತನಿಖೆ ಹಿಂಪಡೆಯಲು ನಮ್ಮ ಮೇಲೆ ಯಾವುದೇ ಒತ್ತಡವಿರಲಿಲ್ಲ ಹಾಗೂ ಯಾವುದೇ ಗೊಂದಲವಿಲ್ಲ ಎಂದು ಪರಮೇಶ್ವರ್ ಹೇಳಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ರನ್ಯಾ ರಾವ್ ಅವರ ವಿವಾಹದಲ್ಲಿ ಭಾಗವಹಿಸುತ್ತಿರುವ ಛಾಯಾಚಿತ್ರವನ್ನು ಬಿಜೆಪಿ ಹಂಚಿಕೊಂಡಿದ್ದಕ್ಕೆ ಸಂಬಂಧಿಸಿದಂತೆ, ಪ್ರತಿಕ್ರಿಯಿಸಿಗ ಪರಮೇಶ್ವರ ನಾವು ಸಾವಿರಾರು ಮದುವೆಗಳಿಗೆ ಹೋಗುತ್ತೇವೆ ಎಂದರು.
ಇತ್ತೀಚೆಗೆ, ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರನ್ಯಾ ಅವರಿಂದ 12.56 ಕೋಟಿ ರೂ. ಮೌಲ್ಯದ ಚಿನ್ನದ ಬಾರ್‌ಗಳನ್ನು ವಶಪಡಿಸಿಕೊಳ್ಳಲಾಗಿತ್ತು, ಮರುದಿನ, ಆಕೆಯ ನಿವಾಸದಲ್ಲಿ ಶೋಧ ನಡೆಸಲಾಯಿತು, ಅಲ್ಲಿ 2.06 ಕೋಟಿ ರೂ. ಮೌಲ್ಯದ ಚಿನ್ನಾಭರಣ ಮತ್ತು 2.67 ಕೋಟಿ ರೂ. ನಗದು ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Advertisement