6 ಅಡಿ ಎತ್ತರವಿದ್ದ ವಿದೇಶಿ ವ್ಯಕ್ತಿ ಚಿನ್ನವಿದ್ದ ಎರಡು ಬಾಕ್ಸ್ ನೀಡಿದ್ದ; ಕಳ್ಳಸಾಗಣೆ ಮಾಡುವುದನ್ನು ಯೂಟ್ಯೂಬ್ ನೋಡಿ ಕಲಿತೆ: ರನ್ಯಾ ತಪ್ಪೊಪ್ಪಿಗೆ
ಬೆಂಗಳೂರು: ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣಕ್ಕೆ ಟ್ವಿಸ್ಟ್ ಮೇಲೆ ಟ್ವಿಸ್ಟ್ ಸಿಗುತ್ತಿದೆ. ಕಂದಾಯ ಗುಪ್ತಚರ ನಿರ್ದೇಶನಾಲಯ ತನಿಖೆಯಲ್ಲಿ ಹೊಸ ಹೊಸ ವಿಚಾರಗಳು ಬಯಲಾಗುತ್ತಿದೆ.
ಇದೇ ವೇಳೆ, ರನ್ಯಾ ಪ್ರೋಟೋಕಾಲ್‌ಗೆ ಸಂಬಂಧಿಸಿ ಪ್ರೋಟೋಕಾಲ್ ಅಧಿಕಾರಿ ನೀಡಿದ್ದ ಹೇಳಿಕೆಯೂ ಬಯಲಾಗಿದೆ. ಮಾರ್ಚ್ 1ರಂದು ವಿದೇಶಿ ನಂಬರ್‌ನಿಂದ ನನಗೆ ಕರೆ ಬಂದಿತ್ತು. ಚಿನ್ನ ತಂದು ಡೆಲಿವರಿ ಮಾಡಬೇಕು ಎಂಬ ಸೂಚನೆ ಆ ಕರೆಯಲ್ಲಿ ಇತ್ತು. ನಂತರ ಟಿಕೆಟ್ ಬುಕ್ ಮಾಡಿಕೊಂಡು ಮಾರ್ಚ್ 2ರಂದು ದುಬೈಗೆ ಹೋದೆ.
ದುಬೈ ವಿಮಾನ ನಿಲ್ದಾಣದ ಟರ್ಮಿನಲ್ 3ರ ಗೇಟ್ ಎ ಬಳಿ ಬರಲು ಸೂಚನೆ ಸಿಕ್ಕಿತ್ತು. 6 ಅಡಿ ಎತ್ತರದ ವ್ಯಕ್ತಿಯೊಬ್ಬ ಬಂದು ಚಿನ್ನವಿದ್ದ ಎರಡು ಬಾಕ್ಸ್ ನೀಡಿದ. ಬಂಗಾರ ಬಚ್ಚಿಡಲು ವಿಮಾನ ನಿಲ್ದಾಣದಲ್ಲೇ ಬ್ಯಾಡೇಜ್ ಮತ್ತು ಕತ್ತರಿ ಖರೀದಿಸಿದೆ.
ವಾಶ್‌ರೂಂಗೆ ಹೋಗಿ ಮೈಗೆ ಚಿನ್ನದ ಗಟ್ಟಿಗಳನ್ನು ಅಂಟಿಸಿಕೊಂಡು ಬಂದೆ. ಹೇಗೆ ಕಳ್ಳಸಾಗಣೆ ಮಾಡಬೇಕು ಎಂಬುದನ್ನು ಯೂಟ್ಯೂಬ್ ನೋಡಿ ಕಲಿತೆ. ಹಿಂದೆಂದೂ ನಾನು ಚಿನ್ನ ಕಳ್ಳಸಾಗಣೆ ಮಾಡಿರಲಿಲ್ಲ. ಮೊದಲ ಬಾರಿಗೆ ಕಳ್ಳ ಸಾಗಾಣಿಕೆ ಮಾಡಿದ್ದೆ.
ಬೆಂಗಳೂರು ಏರ್‌ಪೋರ್ಟ್ ಟೋಲ್ ಬಳಿ ಬರಲು ನನಗೆ ಸೂಚನೆ ಸಿಕ್ಕಿತ್ತು. ಸರ್ವೀಸ್ ರೋಡ್‌ನಲ್ಲಿ ನಿಲ್ಲಿಸಿದ ಆಟೋದಲ್ಲಿ ಚಿನ್ನ ಇಟ್ಟು ಹೋಗಲು ತಿಳಿಸಿದ್ದರು. ನನ್ನ ಜೊತೆ ಮಾತಾಡಿದ್ದು ಯಾರೆಂದು ಗೊತ್ತಿಲ್ಲ. ಭಾಷೆ ನೋಡಿದರೆ ಆ ವ್ಯಕ್ತಿ ಆಫ್ರಿಕನ್ ಅಮೆರಿಕನ್ ಇರಬಹುದು ಎಂದು 33 ವರ್ಷದ ನಟಿ ಕಂದಾಯ ಗುಪ್ತಚರ ನಿರ್ದೇಶನಾಲಯಕ್ಕೆ (DRI) ನೀಡಿದ ಹೇಳಿಕೆಯಲ್ಲಿ ಈ ವಿವರಗಳನ್ನು ಬಹಿರಂಗಪಡಿಸಿದ್ದಾರೆ. ಈ ವಿನಿಮಯದ ಮೊದಲು ಅಥವಾ ನಂತರ ತಾನು ಆ ವ್ಯಕ್ತಿಯನ್ನು ಎಂದಿಗೂ ಭೇಟಿಯಾಗಲಿಲ್ಲ ಎಂದು ನಟಿ ಹೇಳಿಕೊಂಡಿದ್ದಾಳೆ.
ಮಾರ್ಚ್ 1 ರಂದು ಎಮಿರೇಟ್ಸ್ ವೆಬ್‌ಸೈಟ್ ಮೂಲಕ ಹೋಗುವ ಮತ್ತು ಹಿಂದಿರುಗುವ ವಿಮಾನಗಳನ್ನು ಬುಕ್ ಮಾಡಲು ರನ್ಯಾ ತನ್ನ ಪತಿ ಜತಿನ್ ವಿಜಯಕುಮಾರ್ ಹುಕ್ಕೇರಿ ಅವರ ಹೆಸರಿನಲ್ಲಿರುವ ಮಶ್ರೆಕ್ ಕ್ರೆಡಿಟ್ ಕಾರ್ಡ್ ಬಳಕೆ ಮಾಡಿದ್ದಾಳೆ..
ಮಾರ್ಚ್ 1 ರಂದು ಅಪರಿಚಿತ ವಿದೇಶಿ ಸಂಖ್ಯೆಯಿಂದ ವಾಯ್ಸ್ ಓವರ್ ಇಂಟರ್ನೆಟ್ ಪ್ರೊಟೊಕಾಲ್ (ವಿಒಐಪಿ) ಕರೆ ಬಂದಿತ್ತು, ಆದರೆ ಅದನ್ನು ತಪ್ಪಿಸಿಕೊಂಡಿದ್ದಾಗಿ ನಟಿ ಹೇಳಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ