
ಬೆಳಗಾವಿ: ಖಾನಾಪುರ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ (ಪಿಐ) ಮಂಜುನಾಥ ನಾಯಕ್ ಅವರ ಅಮಾನತು ಆದೇಶವನ್ನು ಕರ್ನಾಟಕ ಆಡಳಿತ ನ್ಯಾಯಮಂಡಳಿ (ಕೆಎಟಿ) ರದ್ದುಗೊಳಿಸಿದ್ದು, ಸರ್ಕಾರ ಅವರನ್ನು ಮತ್ತೆ ಅವರ ಸ್ಥಾನದಲ್ಲಿ ಇರಿಸುವಂತೆ ನಿರ್ದೇಶಿಸಿದೆ. ರಾಜಕೀಯ ವಿವಾದದ ನಂತರ ಅಮಾನತುಗೊಂಡಿದ್ದ ನಾಯಕ್ ಅವರನ್ನು ಸೇವೆಯಲ್ಲಿ ಮುಂದುವರಿಸಬೇಕೆಂದು ನ್ಯಾಯಮಂಡಳಿ ತೀರ್ಪು ನೀಡಿದೆ.
ಸಚಿವೆ ಲಕ್ಷ್ಮೀ ಹೆಬ್ಬಾಳಕರ ಮತ್ತು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಅವರ ನಡುವಿನ ಗಲಾಟೆ ಪ್ರಕರಣದಲ್ಲಿ ಖಾನಾಪುರದ ಇನ್‌ಸ್ಪೆಕ್ಟರ್ ಮಂಜುನಾಥ ನಾಯ್ಕ್ ಅಮಾನತುಗೊಂಡಿದ್ದರು.
ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ (ಡಿ.19) ನಡೆದ ಚಳಿಗಾಲದ ಅಧಿವೇಶನದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ವಿರುದ್ಧ ಅವಾಚ್ಯ ಪದ ಬಳಸಿದ್ದಾರೆ ಎಂಬ ಆರೋಪದ ಮೇರೆಗೆ ಸಿ.ಟಿ. ರವಿ ಅವರನ್ನು ಬಂಧಿಸಲಾಗಿತ್ತು. ತಡರಾತ್ರಿ ಅವರನ್ನು ಖಾನಾಪುರ ಠಾಣೆಗೆ ಕರೆದೊಯ್ಯಲಾಗಿತ್ತು.
ಅಲ್ಲಿ ನಡೆದ ವಿಚಾರಣೆ ಸಂದರ್ಭದಲ್ಲಿ ಬೆಳಗಾವಿ ನಗರ ಪೊಲೀಸ್ ಆಯುಕ್ತರು ಸೇರಿದಂತೆ ಇಲಾಖೆಯ ಹಲವು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ರವಿ ಅವರ ಬಂಧನ ಮತ್ತು ಅವರನ್ನು ಖಾನಾಪುರ ಠಾಣೆಗೆ ಕರೆತಂದಿದ್ದ ಪೊಲೀಸರ ನಡೆ ಖಂಡಿಸಿ ಬಿಜೆಪಿ ಮುಖಂಡರು ಪೊಲೀಸ್ ಠಾಣೆಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ್ದರು.
ಅದೇ ಸಂದರ್ಭದಲ್ಲಿ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಆರ್.ಅಶೋಕ ಸೇರಿದಂತೆ ಬಿಜೆಪಿ ನಾಯಕರಿಗೆ ಸಿ.ಟಿ ರವಿ ಅವರನ್ನು ಭೇಟಿಯಾಗಲು ಮಂಜುನಾಥ ನಾಯ್ಕ ಅವರು ಅವಕಾಶ ನೀಡಿದ್ದರು ಎಂಬ ಆರೋಪದ ಮೇಲೆ ಅಮಾನತುಗೊಳಿಸಲಾಗಿತ್ತು.
ಆದೇಶದ ವಿರುದ್ಧ ಮಂಜುನಾಥ ಅವರು ಕೆಎಟಿ ಮೆಟ್ಟಿಲೇರಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಸತ್ಯನಾರಾಯಣ ಸಿಂಗ್ ಮತ್ತು ಸುನೀಲ ಕುಮಾರ ಅವರನ್ನೊಳಗೊಂಡ ಪೀಠ ‘ಡಿ.21, 2024ರಂದು ಪೊಲೀಸ್ ಇಲಾಖೆ ಹೊರಡಿಸಿದ್ದ ಮಂಜುನಾಥ ನಾಯ್ಕ ಅವರ ಅಮಾನತು ಆದೇಶಕ್ಕೆ ತಡೆಯಾಜ್ಞೆ ನೀಡಿದೆ. ಅವರನ್ನು ಖಾನಾಪುರ ಠಾಣೆಯ ಇನ್‌ಸ್ಪೆಕ್ಟರ್ ಹುದ್ದೆಯಲ್ಲೇ ಮುಂದುವರೆಸಬೇಕು’ ಎಂದು ಆದೇಶಿಸಿದೆ. ಮೂರು ತಿಂಗಳೊಳಗೆ ಅವರಿಗೆ ಎಲ್ಲಾ ಅರ್ಹ ಸವಲತ್ತುಗಳು ಸಿಗುವಂತೆ ನೋಡಿಕೊಳ್ಳಬೇಕು ಎಂದು ತೀರ್ಪು ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಈ ತೀರ್ಪಿನೊಂದಿಗೆ, ನಾಯ್ಕ್ ಮತ್ತೆ ಕರ್ತವ್ಯಕ್ಕೆ ಮರಳಲಿದ್ದಾರೆ, ಇದು ರಾಜಕೀಯ ಚರ್ಚೆ ಮತ್ತು ಪ್ರತಿಭಟನೆಗಳನ್ನು ಹುಟ್ಟುಹಾಕಿದ್ದ ಪ್ರಕರಣದಲ್ಲಿ ಮಹತ್ವದ ನಿರ್ಧಾರವಾಗಿದೆ.
Advertisement