ರಾಜ್ಯದಲ್ಲಿ ವಿಶ್ವವಿದ್ಯಾನಿಲಯಗಳನ್ನು ಮುಚ್ಚುವ ಬಗ್ಗೆ ಯಾವುದೇ ತೀರ್ಮಾನ ಆಗಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ಸ್ಪಷ್ಟಪಡಿಸಿದರು. ರಾಜ್ಯದ 9 ವಿಶ್ವವಿದ್ಯಾನಿಲಯಗಳನ್ನು ಮುಚ್ಚುವ ಬಗ್ಗೆ ಡಾ. ಸಿ.ಎನ್. ಅಶ್ವತ್ಥ್‌ನಾರಾಯಣ ನಿಲುವಳಿ ಸೂಚನೆಯಡಿ ಮಾಡಿದ ಪೂರ್ವಭಾವಿ ಪ್ರಸ್ತಾವದ ಸಂದರ್ಭದಲ್ಲಿ ಮಾತನಾಡಿದ ಸಿಎಂ, ವಿಶ್ವವಿದ್ಯಾನಿಲಯಗಳನ್ನು ಮುಚ್ಚುವ ಬಗ್ಗೆ ತೀರ್ಮಾನವೇ ಆಗಿಲ್ಲ. ಈ ವಿಶ್ವವಿದ್ಯಾನಿಲಯಗಳನ್ನು ಮುಂದುವರೆಸಬೇಕೇ, ಬೇಡವೇ ಎಂಬ ಬಗ್ಗೆ ಉಪಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟ ಉಪಸಮಿತಿಯನ್ನು ರಚಿಸಿದ್ದೇವೆ ವರದಿ ಬಂದ ಬಳಿಕ ಅಂತಿಮ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.
ಪೋಕ್ಸೋ ಪ್ರಕರಣದ ಸಂಬಂಧ ಮಾರ್ಚ್ 15 ರಂದು ಖುದ್ದು ವಿಚಾರಣೆಗೆ ಹಾಜರಾಗುವಂತೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂಪ್ಪರಿಗೆ 1ನೇ ತ್ವರಿತಗತಿ ನ್ಯಾಯಾಲಯ ಜಾರಿ ಮಾಡಿದ್ದ ಸಮನ್ಸ್ಗೆ ಹೈಕೋರ್ಟ್ ತಡೆ ನೀಡಿದೆ. ಈ ಆದೇಶದ ಜೊತೆಗೆ ಮಾಜಿ ಸಿಎಂ ಯಡಿಯೂರಪ್ಪ ಖುದ್ದು ಹಾಜರಾತಿಗೂ ವಿನಾಯಿತಿ ನೀಡಿದೆ. 1 ತಿಂಗಳು 12 ದಿನ ತಡವಾಗಿ ಪೊಕ್ಸೋ ಕೇಸ್ ದಾಖಲಿಸಲಾಗಿದೆ. ಘಟನೆ ನಡೆದಿದ್ದರೆ ಯಾರೂ ಇಷ್ಟು ತಡವಾಗಿ ದೂರು ದಾಖಲಿಸುತ್ತಿರಲಿಲ್ಲ. ಸಮನ್ಸ್ ರದ್ದುಪಡಿಸಿ ಹೊಸದಾಗಿ ಪರಿಶೀಲನೆಗೆ ಹಿಂದೆ ಆದೇಶಿಸಲಾಗಿತ್ತು. ಈಗ ವಿಶೇಷ ಕೋರ್ಟ್ ಕಾಗ್ನಿಜೆನ್ಸ್ ಪಡೆದು ಸಮನ್ಸ್ ಜಾರಿಗೊಳಿಸಿದೆ ಎಂದು ಬಿಎಸ್ ಯಡಿಯೂರಪ್ಪ ಪರ ವಕೀಲರು ವಾದಿಸಿದರು.
ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲ್ಲೂಕಿನ ಮಾಸೂರು ಗ್ರಾಮದ ಸ್ವಾತಿ ರಮೇಶ್ ಬಡಿಗೆರೆ ಕೊಲೆ ತೀವ್ರ ವಿವಾದಕ್ಕೆ ಕಾರಣವಾಗಿದೆ. ರಾಣೆಬೆನ್ನೂರು ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಸ್ವಾತಿ ನಾಪತ್ತೆಯಾಗಿದ್ದಾಳೆ ಎಂದು ಕಳೆದ ಮಾರ್ಚ್ 3 ರಂದು ಹಿರೇಕೆರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದರ ಬೆನ್ನಲ್ಲೇ ಮಾರ್ಚ್ 6 ರಂದು ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನ ಫತೇಪುರ್ ಗ್ರಾಮದ ತುಂಗಭದ್ರಾ ನದಿಯ ಬಳಿ ಆಕೆಯ ಶವ ಪತ್ತೆಯಾಗಿತ್ತು. ಮರಣೋತ್ತರ ಪರೀಕ್ಷೆಯಲ್ಲಿ ಇದು ಕೊಲೆ ಎಂದು ದೃಢಪಟ್ಟಿದೆ.
ತನಿಖೆ ಆರಂಭಿಸಿದ ಪೊಲೀಸರು, ನಯಾಜ್ ಹಾಗೂ ಇನ್ನಿಬ್ಬರನ್ನು ಯುವತಿಯನ್ನು ಕೊಲೆ ಮಾಡಿರುವ ಆರೋಪದಲ್ಲಿ ಬಂಧಿಸಿದ್ದಾರೆ. ಹಾವೇರಿ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಅಂಶುಕುಮಾರ್ ಮಾತನಾಡಿದ್ದು, ಈ ಕೊಲೆ ಯಾವುದೇ ಕೋಮು ಸಂಘರ್ಷಕ್ಕೆ ಸಂಬಂಧಿಸಿಲ್ಲ, ಮೂವರು ಆರೋಪಿಗಳು ವೈಯಕ್ತಿಕ ಕಾರಣಗಳಿಂದ ಸ್ವಾತಿಯನ್ನು ಕೊಂದಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ. ಆರೋಪಿ ನಯಾಜ್ ಹಾಗೂ ಸ್ವಾತಿ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಆದರೆ ನಯಾಜ್ ಸ್ವಾತಿಯನ್ನು ಬಿಟ್ಟು ತಮ್ಮ ಧರ್ಮದ ಯುವತಿ ಜೊತೆ ಮದುವೆಯಾಗಲು ಬಯಸಿದ್ದ. ಇದರಿಂದ ರೊಚ್ಚಿಗೆದ್ದಿದ್ದ ಸ್ವಾತಿ ನನಗೆ ಮೋಸ ಮಾಡಬೇಡ ಎಂದು ಜಗಳ ಮಾಡಿದ್ದಾಳೆ. ಇದರಿಂದ ಆಕ್ರೋಶಗೊಂಡ ನಯಾಜ್ ಹಾಗೂ ಇತರ ಇಬ್ಬರು ಸೇರಿ ಸ್ವಾತಿಯನ್ನು ಕೊಲೆ ಮಾಡಿ, ತುಂಗಭದ್ರಾ ನದಿಗೆ ಹಾಕಿದ್ದಾರೆ.
ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದಲ್ಲಿ ಶುಕ್ರವಾರ ಹೋಳಿ ಆಚರಿಸುತ್ತಿದ್ದಾಗ ದುಷ್ಕರ್ಮಿಗಳ ಗುಂಪೊಂದು ರಾಸಾಯನಿಕ ಮಿಶ್ರಿತ ಬಣ್ಣವನ್ನು ಎರಚಿದ್ದರಿಂದ ಕನಿಷ್ಠ ಏಳು ಶಾಲಾ ವಿದ್ಯಾರ್ಥಿನಿಯರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಪೈಕಿ ನಾಲ್ವರ ಸ್ಥಿತಿ ಗಂಭೀರವಾಗಿದ್ದು, ಉಸಿರಾಟದ ತೊಂದರೆ ಮತ್ತು ಎದೆ ನೋವು ಕಾಣಿಸಿಕೊಂಡಿದ್ದರಿಂದ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಗದಗ ವೈದ್ಯಕೀಯ ವಿಜ್ಞಾನ ಸಂಸ್ಥೆ (ಜಿಮ್ಸ್) ಗೆ ಸ್ಥಳಾಂತರಿಸಲಾಗಿದೆ. ಉಳಿದ ಬಾಲಕಿಯರು ಲಕ್ಷ್ಮೇಶ್ವರದ ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಘಟನೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದ್ದು, ಸಂತ್ರಸ್ತರ ಪೋಷಕರು ಆಸ್ಪತ್ರೆಗೆ ಧಾವಿಸಿದ್ದಾರೆ. ಪೊಲೀಸರು ದುಷ್ಕರ್ಮಿಗಳ ಪತ್ತೆಗೆ ಹುಡುಕಾಟ ನಡೆಸುತ್ತಿದ್ದಾರೆ.
ಡ್ರಗ್ಸ್ ಮಾರಾಟ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ದೇವನಹಳ್ಳಿ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ನಿಷೇಧಿತ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿದ್ದಾರೆ. ಆರೋಪಿಗಳಿಬ್ಬರೂ ಪೊಲೀಸ್ ಠಾಣೆ ವ್ಯಾಪ್ತಿಯ ಎಂಆರ್ ಲೇಔಟ್‌ನ ರಾಣಿ ಕ್ರಾಸ್ ಬಳಿ ದ್ವಿಚಕ್ರ ವಾಹನದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದರು. ಈ ಮಾಹಿತಿ ಆಧಾರದ ಮೇಲೆ, ಠಾಣೆಯಲ್ಲಿ NDPS ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಬಂಧಿತರಿಂದ 3 ಕೆಜಿ 200 ಗ್ರಾಂ ಗಾಂಜಾ, ಎರಡು ಮೊಬೈಲ್ ಫೋನ್‌ಗಳು, ಒಂದು ತೂಕದ ಯಂತ್ರ ಮತ್ತು ಒಂದು ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದ್ದು ಇದರ ಒಟ್ಟು ಮೌಲ್ಯ 1,80,000 ರೂ. ಎಂದು ಅಂದಾಜಿಸಲಾಗಿದೆ.
Advertisement