
ತುಮಕೂರು: ತುಮಕೂರು ರೈಲ್ವೆ ನಿಲ್ದಾಣಕ್ಕೆ ಸಿದ್ದಗಂಗಾ ಮಠದ ಡಾ. ಶಿವಕುಮಾರ ಸ್ವಾಮೀಜಿ ಅವರ ಹೆಸರಿಡಲು ರಾಜ್ಯ ಸರ್ಕಾರ ಅನುಮೋದನೆ ನೀಡದೇ ವಿಳಂಬ ಮಾಡುತ್ತಿದೆ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರು ಶನಿವಾರ ಹೇಳಿದ್ದಾರೆ.
ಈ ಸಂಬಂಧ ರಾಜ್ಯ ಸರ್ಕಾರಕ್ಕೆ ನಾಲ್ಕು ಪತ್ರಗಳನ್ನು ಬರೆಯಲಾಗಿದೆ. ಆ ಪತ್ರಕ್ಕೆ ಸಹಿ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮೀನಾಮೇಷ ಎಣಿಸುತ್ತಿದ್ದಾರೆ. ಅವರನ್ನು ವೈಯಕ್ತಿಕವಾಗಿ ಭೇಟಿ ಮಾಡಿದರೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಸೋಮಣ್ಣ ಆರೋಪಿಸಿದ್ದಾರೆ.
ತುಮಕೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸೋಮಣ್ಣ, ಈಗಾಗಲೇ ನಗರದ ರೈಲ್ವೆ ನಿಲ್ದಾಣವನ್ನು ಮೇಲ್ದರ್ಜೆಗೇರಿಸಲು 90 ಕೋಟಿ ರೂ.ಗಳ ಟೆಂಡರ್ ನೀಡಲಾಗಿದೆ ಎಂದರು.
ಲಕ್ಷಾಂತರ ಬಡ ಮಕ್ಕಳಿಗೆ ಅನ್ನ, ಅಕ್ಷರ, ಆಶ್ರಯ ನೀಡಿ ಅವರ ಬದುಕಿಗೆ ದಾರಿದೀಪವಾಗಿರುವ ಸಿದ್ದಗಂಗಾ ಶ್ರೀಗಳ ಹೆಸರನ್ನು ತುಮಕೂರು ರೈಲ್ವೆ ನಿಲ್ದಾಣಕ್ಕೆ ಇಡುವ ಸಂಬಂಧ ಕೇಂದ್ರದಿಂದ ಬಂದಿರುವ ಪತ್ರಕ್ಕೆ ಸಹಿ ಮಾಡಲು ರಾಜ್ಯ ಸರ್ಕಾರ ಮೀನಾಮೇಷ ಎಣಿಸುತ್ತಿರುವುದು ಸರಿಯಲ್ಲ ಎಂದರು.
ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಒಂದೇ ನಾಣ್ಯದ ಮುಖಗಳಾಗಿ ಕೆಲಸ ಮಾಡಬೇಕು. ಈ ರೀತಿ ವಿಳಂಬ ಧೋರಣೆ ಮಾಡುವುದು ಸರಿಯಲ್ಲ. ಕೂಡಲೇ ಮುಖ್ಯಮಂತ್ರಿಗಳು ಗಮನ ಹರಿಸಿ ಕೇಂದ್ರದ ಪತ್ರಕ್ಕೆ ಸಹಿ ಹಾಕುವ ಮೂಲಕ ತುಮಕೂರು ರೈಲ್ವೆ ನಿಲ್ದಾಣಕ್ಕೆ ಸಿದ್ದಗಂಗಾ ಶ್ರೀಗಳ ಹೆಸರಿಡಲು ಕೈಜೋಡಿಸಬೇಕು ಎಂದು ಅವರು ಒತ್ತಾಯಿಸಿದರು.
ರಾಜ್ಯ ಸರ್ಕಾರ ಮುಖ್ಯ ಕಾರ್ಯದರ್ಶಿ ಮತ್ತು ಹಣಕಾಸು ಕಾರ್ಯದರ್ಶಿ ಸೇರಿದಂತೆ ಸಂಬಂಧಿತ ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ಆದರೆ ಪ್ರತಿಕ್ರಿಯೆ ತೃಪ್ತಿಕರವಾಗಿಲ್ಲ ಎಂದು ಸೋಮಣ್ಣ ತಿಳಿಸಿದ್ದಾರೆ.
Advertisement