
ಬೆಂಗಳೂರು: ನಾನು ಮುಗ್ಧೆ, ನನ್ನಿಂದ ಏನನ್ನೂ ವಶಕ್ಕೆ ಪಡೆಯದಿದ್ದರೂ ತಪ್ಪಾಗಿ ಬಿಂಬಿಸಲಾಗುತ್ತಿದೆ ಎಂದು ಚಿನ್ನ ಸ್ಮಗ್ಲಿಂಗ್ ಆರೋಪದಲ್ಲಿ ಮಾರ್ಚ್ 3 ರಂದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲ್ಪಟ್ಟ 33 ವರ್ಷದ ನಟಿ ರನ್ಯಾ ರಾವ್ ಹೇಳಿದ್ದಾರೆ.
ಬೆಂಗಳೂರು ಸೆಂಟ್ರಲ್ ಜೈಲಿನಿಂದ ಮಾರ್ಚ್ 6 ರಂದು ಕಂದಾಯ ಗುಪ್ತಚರ ನಿರ್ದೇಶನಾಲಯ(ಡಿಆರ್‌ಐ) ಹೆಚ್ಚುವರಿ ಮಹಾನಿರ್ದೇಶಕರಿಗೆ ಪತ್ರ ಬರೆದಿರುವ ರನ್ಯಾರಾವ್, ಇತರ ಕೆಲ ಪ್ರಯಾಣಿಕರನ್ನು ರಕ್ಷಿಸಲು ನನ್ನನ್ನು ಸುಳ್ಳು ಕೇಸ್ ನಲ್ಲಿ ಸಿಲುಕಿಸಲಾಗಿದೆ. ಅಧಿಕಾರಿಗಳು ಹೇಳಿದಂತೆ ಯಾವುದೇ ಮಹಜರ್ ಮಾಡಿಲ್ಲ ಅಥವಾ ಯಾವುದೇ ಶೋಧ ಕಾರ್ಯ ನಡೆದಿಲ್ಲ. ನನ್ನಿಂದ ಏನನ್ನೂ ವಶಕ್ಕೆ ಪಡೆದಿಲ್ಲ ಎಂದು ಅವರು ಹೇಳಿದ್ದಾರೆ.
ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯವು ಆಕೆಯ ಜಾಮೀನು ಅರ್ಜಿಯನ್ನು ವಜಾಗೊಳಿಸಿದ ನಂತರ ಕಾರಾಗೃಹ ಇಲಾಖೆಯ ಮೂಲಕ ಡಿಆರ್‌ಐಗೆ ಸಲ್ಲಿಸಿದ ಪತ್ರ ಹೆಚ್ಚು ಸುದ್ದಿಯಾಗುತ್ತಿದೆ. ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರದ ಸತ್ಯಾಸತ್ಯತೆಯನ್ನು ಖಚಿತಪಡಿಸಲು ಸಾಧ್ಯವಾಗಲಿಲ್ಲ. ಬೆಂಗಳೂರು ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕ ಕೆ ಸುರೇಶ್ ಅವರು ಮಾರ್ಚ್ 7 ರಂದು ರನ್ಯಾ ಬರೆದ ಪತ್ರವನ್ನು ಡಿಆರ್‌ಐಗೆ ಕಳುಹಿಸಿದ್ದಾರೆ.
ಆಂಗ್ಲ ಭಾಷೆಯಲ್ಲಿ ಬರೆದಿರುವ ನಾಲ್ಕು ಪುಟಗಳ ಪತ್ರದಲ್ಲಿ, ತನ್ನನ್ನು ವಿಮಾನದ ಒಳಗಿನಿಂದ ಹಿಡಿದು ವಿಮಾನದಿಂದ ಬಂಧಿಸಿದ ಸಮಯದಿಂದ ನ್ಯಾಯಾಲಯಕ್ಕೆ ಹಾಜರುಪಡಿಸುವವರೆಗೆ ಸುಮಾರು 10 ರಿಂದ 15 ಬಾರಿ ತನ್ನ ಮುಖಕ್ಕೆ ಡಿಆರ್ ಐ ಅಧಿಕಾರಿಗಳು ಹೊಡೆದಿದ್ದಾರೆ. ತನ್ನ ಮೇಲೆ ದೈಹಿಕವಾಗಿ ಹಲ್ಲೆ ಮಾಡಿದ್ದರಿಂದ ಒತ್ತಡದಲ್ಲಿ ಸುಮಾರು 50 ರಿಂದ 60 ಟೈಪ್ ಮಾಡಿದ ಫೇಜ್ ಗಳಿಗೆ ಮತ್ತು ಸುಮಾರು 40 ಪುಟಗಳಷ್ಟು ಖಾಲಿ ಕಾಗದದ ಮೇಲೆ ಸಹಿ ಹಾಕಿದ್ದೇನೆ. ಡಿಆರ್‌ಐ ಅಧಿಕಾರಿಗಳು ತನ್ನನ್ನು ಹಸಿವಿನಿಂದ ನರಳಿಸಿದ್ದು, ಮಲಗಲು ಬಿಡುತ್ತಿಲ್ಲ ಎಂದು ಆರೋಪಿಸಿದ್ದಾರೆ.
ತನ್ನ ಬಂಧನದ ಅವಧಿಯಲ್ಲಿ ತನ್ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವವರೆಗೆ ದಾಖಲಾದ ಯಾವುದೇ ಹೇಳಿಕೆಗಳ ಮೇಲೆ ಯಾವುದೇ ಅವಲಂಬನೆ ಇರಬಾರದು ಅವರು ಎಡಿಜಿಗೆ ಮನವಿ ಮಾಡಿಕೊಂಡಿದ್ದಾರೆ. ತನ್ನ ವಿಚಾರಣಾಧೀನ ಖೈದಿ ನಂಬರ್ 2198/25 ಎಂದು ಉಲ್ಲೇಖಿಸಿದ್ದಾರೆ.
Advertisement