
ಬೆಂಗಳೂರು: "ಮುಸ್ಲಿಮರಿಗೆ ಗುತ್ತಿಗೆ ಮೀಸಲಾತಿ ವಿಚಾರವಾಗಿ ಬಿಜೆಪಿ ಪರಿಷತ್ ಸದಸ್ಯ ಛಲವಾದಿ ನಾರಾಯಣ ಸ್ವಾಮಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
"ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಛಲವಾದಿ ನಾರಾಯಣ ಸ್ವಾಮಿ, ಮುಸ್ಲಿಮರಿಂದ ದೇಶಕ್ಕೆ ಗಂಡಾಂತರವಿಲ್ಲ. ಆದರೆ ಮುಸ್ಲಿಂ ಮನಸ್ಥಿತಿ ಹೊಂದಿರುವ ಈ ಹಿಂದೂಗಳಿಂದ ದೇಶಕ್ಕೆ ಗಂಡಾಂತರ ಇದೆ" ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
"ಸಂವಿಧಾನದ ಪ್ರಕಾರ ಧಾರ್ಮಿಕ ಮೀಸಲಾತಿ ಕೊಡಲು ಅವಕಾಶ ಇಲ್ಲ. ಈ ಹಿಂದೆ ಹಿಂದೆಯೂ ಮುಸ್ಲಿಮರಿಗೆ 4% ಮೀಸಲಾತಿ ಇದ್ದದ್ದನ್ನು ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದಾಗ ಹಿಂದಕ್ಕೆ ಪಡೆಯಲಾಯಿತು.
ಕಾಂಗ್ರೆಸ್ ನವರು ಅಧಿಕಾರಕ್ಕೆ ಬಂದ ಮೇಲೆ ಮುಸ್ಲಿಮರಿಗೆ ಮೀಸಲಾತಿ ಕೊಡುವುದಾಗಿ ಹೇಳಿ ಈಗ ಇದರ ಭಾಗವಾಗಿ ಗುತ್ತಿಗೆಯಲ್ಲೂ ಮೀಸಲಾತಿ ಕೊಟ್ಟಿದ್ದಾರೆ. ಇದರ ವಿರುದ್ಧ ನಾವು ಸದನದ ಒಳಗೆ ಮತ್ತು ಹೊರಗೆ ಹೋರಾಡ ಮಾಡುತ್ತೇವೆ. ಸರ್ಕಾರದ ಈ ನಡೆ ಓಲೈಕೆ ರಾಜಕಾರಣ, ದೇಶಕ್ಕೆ ಗಂಡಾಂತರ ತರುವ ಕೆಲಸ" ಎಂದು ಛಲವಾದಿ ನಾರಾಯಣಸ್ವಾಮಿ ಆಕ್ರೋಶ ಹೊರಹಾಕಿದ್ದಾರೆ.
"ಅಲ್ಪಸಂಖ್ಯಾತರು ಎಂದರೆ ಕೇವಲ ಮುಸ್ಲಿಮರು ಅಲ್ಲ ಎಂಬ ಡಿಕೆ ಶಿವಕುಮಾರ್ ಸಮರ್ಥನೆಗೆ ಪ್ರತಿಕ್ರಿಯೆ ನೀಡಿರುವ ಛಲವಾದಿ ನಾರಾಯಣಸ್ವಾಮಿ, ಜೈನರನ್ನು ಕೇವಲ ನೆಪ ಮಾತ್ರಕ್ಕೆ ಉಲ್ಲೇಖಿಸಿದ್ದಾರೆ ಅಷ್ಟೇ. ಕೇವಲ ಮುಸ್ಲಿಮರನ್ನು ಗಮನದಲ್ಲಿಟ್ಟುಕೊಂಡು ಮೀಸಲಾತಿ ಕೊಡುವುದು ಅವರ ಉದ್ದೇಶವಾಗಿದೆ. ನಮ್ಮ ಸರ್ಕಾರ ಬಂದಾಗ ಯಾರನ್ನು ಎಲ್ಲಿ ಇಡಬೇಕು ಇಡ್ತೇವೆ" ಎಂದು ಟಾಂಗ್ ಕೊಟ್ಟಿದ್ದಾರೆ.
"ಇದೇ ವೇಳೆ ಒಳಮೀಸಲಾತಿ ಬಗ್ಗೆ ಮಾತನಾಡಿ, ಒಳಮೀಸಲಾತಿಯನ್ನು ಪರಿಶಿಷ್ಟ ವರ್ಗಕ್ಕೆ ಕೊಡಲೇಬೇಕು. ತೆಲಂಗಾಣದಲ್ಲಿ ಈಗಾಗಲೇ ಘೋಷಣೆ ಆಗಿದೆ. ಆದರೆ, ರಾಜ್ಯ ಸರ್ಕಾರ ವಿಳಂಬ ಮಾಡ್ತಿದೆ. ಬೇಗ ಸರ್ಕಾರ ಈ ಬಗ್ಗೆ ತೀರ್ಮಾನ ಕೈಗೊಳ್ಳಲಿ" ಎಂದು ಆಗ್ರಹಿಸಿದ್ದಾರೆ.
Advertisement