
ಬೆಂಗಳೂರು: ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಸಚಿವ ಎಚ್.ಎಂ.ರೇವಣ್ಣ ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಮತ್ತು ಜಾತಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತೆಯೊಬ್ಬರು ಮಂಗಳವಾರ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರ.
ರೇವಣ್ಣ ಅವರು ನನ್ನ ಬಗ್ಗೆ ಮಾತಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಿದ್ದಾರೆ ಎಂದು ಕಾಂಗ್ರೆಸ್ ಕಾರ್ಯಕರ್ತೆ ನಂದಿನಿ ನಾಗರಾಜು ಅವರು ಆರೋಪ ಮಾಡಿದ್ದಾರೆ.
ನಂದಿನಿ ನಾಗರಾಜ್ ಅವರು ಸೋಮವಾರ ಕುಮಾರ ಕೃಪಾ ಗೆಸ್ಟ್ ಹೌಸ್ ನಲ್ಲಿದ್ದಾಗ ಈ ಘಟನೆ ನಡೆದಿದೆ. ಇನ್ನು ಈ ಸಂಬಂಧ ನಂದಿನಿ ಅವರು ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಗೂ ದೂರು ನೀಡಿದ್ದಾರೆ.
ಆದರೆ ತನ್ನ ದೂರಿನ ಬಗ್ಗೆ ಪೊಲೀಸರು ಸೂಕ್ತ ಕ್ರಮ ತೆಗೆದುಕೊಳುತ್ತಿಲ್ಲ ಎಂದು ಆರೋಪಿಸಿ ನಂದಿನಿ ಅವರು ರಾಜ್ಯ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ.
ನಂದಿನಿ ದೂರು ಸ್ವೀಕರಿಸಿ ಮಾತಾಡಿದ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಅವರು, ಕಾಂಗ್ರೆಸ್ ಕಾರ್ಯಕರ್ತೆ ಮೇಲೆ ಎಚ್ ಎಂ ರೇವಣ್ಣ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಸಂಬಂಧ ದೂರು ಕೊಟ್ಟಿದ್ದಾರೆ. ಈ ಸಂಬಂಧ ಡಿಸಿಪಿಗೆ ಪತ್ರ ಬರೆದು ದೂರಿನ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಹೇಳುತ್ತೇವೆ ಎಂದರು.
ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ ಮಾಡುವಂತಿಲ್ಲ. ಕಾನೂನಿನ ಚೌಕಟ್ಟಿನಲ್ಲಿ ಏನು ಮಾಡಬೇಕೋ ಅದನ್ನು ಮಾಡುತ್ತೇವೆ. ಎಚ್.ಎಂ.ರೇವಣ್ಣ ಆಗಲಿ ಯಾರೇ ತಪ್ಪುಮಾಡಿದರೂ ಒಂದೇ. ಎಚ್.ಎಂ.ರೇವಣ್ಣಗೆ ಪತ್ರ ಬರೆದು ಅವರ ಪ್ರತಿಕ್ರಿಯೆ ಕೇಳುತ್ತೇವೆ ಎಂದು ನಾಗಲಕ್ಷ್ಮೀ ಚೌಧರಿ ತಿಳಿಸಿದ್ದಾರೆ.
Advertisement