News Headlines 18-03-25 | HDKಗೆ ಭೂ ಸಂಕಷ್ಟ; HM Revanna ವಿರುದ್ದ ಹಲ್ಲೆ ಆರೋಪ; ಮಾರ್ಚ್ 22ಕ್ಕೆ ಕರ್ನಾಟಕ ಬಂದ್; ಅಧಿಕಾರಿಗಳಿಂದ ಶಾಸಕರ ಅಪಮಾನ ಸಹಿಸಲ್ಲ!

News Headlines 18-03-25 | HDKಗೆ ಭೂ ಸಂಕಷ್ಟ; HM Revanna ವಿರುದ್ದ ಹಲ್ಲೆ ಆರೋಪ; ಮಾರ್ಚ್ 22ಕ್ಕೆ ಕರ್ನಾಟಕ ಬಂದ್; ಅಧಿಕಾರಿಗಳಿಂದ ಶಾಸಕರ ಅಪಮಾನ ಸಹಿಸಲ್ಲ!

1. ಸರ್ಕಾರಿ ಅಧಿಕಾರಿಗಳು ಶಾಸಕರನ್ನು ಅಪಮಾನಿಸುವುದು ಸಹಿಸಲ್ಲ

ಕಾಂಗ್ರೆಸ್ ಶಾಸಕ ರಾಜು ಕಾಗೆ ಹಾಗೂ ಬಿಜೆಪಿ ಶಾಸಕ ಬಸವರಾಜ ಮತ್ತಿಮೋಡ್ ಅವರಿಗೆ ಹಿರಿಯ ಅಧಿಕಾರಿಗಳಿಂದ ಅಪಮಾನವಾಗಿರುವ ವಿಚಾರವನ್ನು ಹಕ್ಕುಬಾಧ್ಯತಾ ಸಮಿತಿಗೆ ವರ್ಗಾಯಿಸುವುದಾಗಿ ವಿಧಾನಸಭೆ ಸ್ಪೀಕರ್ ಯು. ಟಿ ಖಾದರ್ ತಿಳಿಸಿದ್ದಾರೆ. ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಜೇಂದರ್ ಕುಮಾರ್ ಕಟಾರಿಯಾ ವಿರುದ್ಧ ರಾಜು ಕಾಗೆ ಮತ್ತು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಹೇಶ್ ಮೇಘಣ್ಣವರ್ ವಿರುದ್ಧ ಮತ್ತಿಮೋಡು ಸಲ್ಲಿಸಿದ್ದ ಹಕ್ಕುಚ್ಯುತಿ ನೋಟಿಸ್ ಅನ್ನು ಉಲ್ಲೇಖಿಸಿದ ಖಾದರ್, ಅಧಿಕಾರಿಗಳು ಪರಸ್ಪರ ಗೌರವದ ಮಹತ್ವವನ್ನು ಅರ್ಥಮಾಡಿಕೊಳ್ಳಬೇಕು. ಶಾಸಕರನ್ನು ಅವಮಾನಿಸುವುದು ಇಡೀ ಸದನವನ್ನು ಅವಮಾನಿಸಿದಂತೆ. ಇದು ಎಲ್ಲರಿಗೂ ಎಚ್ಚರಿಕೆ ಗಂಟೆಯಾಗಬೇಕು. ನಾನು ಇದನ್ನು ಹಕ್ಕುಬಾಧ್ಯತಾ ಸಮಿತಿಗೆ ಉಲ್ಲೇಖಿಸುತ್ತಿದ್ದೇನೆ ಎಂದು ಸ್ಪೀಕರ್ ಸದನದಲ್ಲಿ ತಿಳಿಸಿದರು.

2. ಮಾರ್ಚ್ 22ಕ್ಕೆ ಕರ್ನಾಟಕ ಬಂದ್: ವಾಟಾಳ್ ನಾಗರಾಜ್ ಘೋಷಣೆ

ಬೆಳಗಾವಿಯಲ್ಲಿ ಕರ್ನಾಟಕದ ಬಸ್ ಕಂಡಕ್ಟರ್ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೇ ಮಾರ್ಚ್ 22ರಂದು ಕರ್ನಾಟಕ ಬಂದ್ ಗೆ ಕರೆ ನೀಡಲಾಗಿದೆ ಎಂದು ವಾಟಾಳ್ ನಾಗರಾಜ್ ಘೋಷಿಸಿದ್ದಾರೆ. ಇತ್ತೀಚೆಗಷ್ಟೇ ಬೆಳಗಾವಿಯಲ್ಲಿ KSRTC ಬಸ್‌ ನಲ್ಲಿ ಕಂಡಕ್ಟರ್‌ ಮತ್ತು ಪ್ರಯಾಣಿಕನೊಂದಿಗೆ ನಡೆದಿದ್ದ ಗಲಾಟೆ ಪ್ರಕರಣ ತಾರಕಕ್ಕೇರಿ ನಂತರ ಉಭಯ ರಾಜ್ಯಗಳ ನಡುವೆ ಬಸ್ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಇದೀಗ ಇಂತಹ ಪುಂಡಾಟಿಕೆ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ ಕನ್ನಡಪರ ಸಂಘಟನೆಗಳು ಕರ್ನಾಟಕ ಬಂದ್ ಗೆ ಕರೆ ನೀಡಿವೆ.

3. HM Revanna ವಿರುದ್ಧ ಹಲ್ಲೆ ಆರೋಪ: ಮಹಿಳಾ ಆಯೋಗಕ್ಕೆ ನಂದಿನಿ ದೂರು

ಕರ್ನಾಟಕ ರಾಜ್ಯ ಖಾತರಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಹೆಚ್.ಎಂ.ರೇವಣ್ಣ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತೆ ಮೇಲೆ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ. ಪ್ರಕರಣ ಸಂಬಂಧ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತೆ ನಂದಿನಿ ನಾಗರಾಜ್ ದೂರು ದಾಖಲಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತ ವಲಯದಲ್ಲಿ ಕರ್ನಾಟಕ ರಾಜ್ಯ ಖಾತರಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಎಚ್.ಎಂ ರೇವಣ್ಣ ವಿರುದ್ಧ ಹಲ್ಲೆ ಮತ್ತು ಜೀವ ಬೆದರಿಕೆ ಆರೋಪ ಕೇಳಿ ಬಂದಿದೆ. ರೇವಣ್ಣ ತನ್ನನ್ನು ತಳ್ಳುತ್ತಿರುವ ವೀಡಿಯೊ ಸಾಕ್ಷ್ಯವನ್ನು ನಂದಿನಿ ಪೊಲೀಸರಿಗೆ ಸಲ್ಲಿಸಿದ್ದಾರೆ. ಇದೇ ವೇಳೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿಗೂ ನಂದಿನಿ ನಾಗರಾಜ್ ದೂರು ಸಲ್ಲಿಸಿದ್ದಾರೆ. ತಮ್ಮ ವಿರುದ್ಧ ಕೇಳಿಬಂದಿರುವ ಆರೋಪವನ್ನು ಮಾಜಿ ಸಚಿವ ಹೆಚ್ಎಂ ರೇವಣ್ಣ ತಳ್ಳಿಹಾಕಿದ್ದಾರೆ. ವಿಡಿಯೋ ಮಾಡಬೇಡ ಅಂತಾ ಮೊಬೈಲ್ ತಳ್ಳಿದ್ದು ನಿಜ. ಆಕೆಯ ಮೇಲೆ ಹಲ್ಲೆ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದರು.

4. HDKಗೆ ಸಂಕಷ್ಟ: ಕೇತಗಾನಹಳ್ಳಿ ಒತ್ತುವರಿಗೆ ಮುಂದಾದ ಕಂದಾಯ ಇಲಾಖೆ

ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ವಿರುದ್ಧ ಈ ಹಿಂದೆ ರಾಮನಗರದ ಬಿಡದಿಯಲ್ಲಿ ಭೂ ಒತ್ತುವರಿ ಮಾಡಿಕೊಂಡ ಆರೋಪ ಕೇಳಿ ಬಂದಿತ್ತು. ಒತ್ತುವರಿ ತೆರವು ಮಾಡುವಂತೆ ಹೈಕೋರ್ಟ್ ಆದೇಶ ನೀಡಿದ ಬೆನ್ನಲ್ಲೇ ಕಂದಾಯ ಇಲಾಖೆ ಈಗ ಒತ್ತುವರಿ ಕಾರ್ಯಾಚರಣೆಗೆ ಮುಂದಾಗಿದೆ. ಬಿಡದಿಗೆ ಹತ್ತಿರದ ಕೇತಗಾಹಳ್ಳಿಯಲ್ಲಿ ಒತ್ತುವರಿ ಮಾಡಿಕೊಂಡಿರುವ ಸರ್ವೆ ನಂಬರ್ 7, 8, 9, 10, 16, 17 ಮತ್ತು 79ರಲ್ಲಿ ತೆರವು ಕಾರ್ಯಾಚರಣೆ ರಾಮನಗರದ ಜಿಲ್ಲಾಧಿಕಾರಿ ರಾಕೇಶ್ ಕುಮಾರ್ ನೇತೃತ್ವದಲ್ಲಿ ನಡೆಯುತ್ತಿದೆ. ಸರ್ವೆ ನಂಬರ್ 7 ಮತ್ತು 8ರಲ್ಲಿ ಒತ್ತುವರಿಯಾಗಿದೆಯೆಂದು ಹೇಳಲಾಗಿದೆ. ಇನ್ನು ಒತ್ತುವರಿ ಬಗ್ಗೆ ಪ್ರತಿಕ್ರಿಯಿಸಿರುವ ಎಚ್ ಡಿ ಕುಮಾರಸ್ವಾಮಿ ಅವರು, ತನ್ನಿಂದ ಯಾವುದೇ ಅಕ್ರಮ ನಡೆದಿಲ್ಲ. 40 ವರ್ಷಗಳ ಹಿಂದೆ ತೆಗೆದುಕೊಂಡ ಜಮೀನು ಅದು, ಇದುವರೆಗೆ ನೂರಾರು ಬಾರಿ ತನಿಖೆ, ವಿಚಾರಣೆ ಆಗಿದೆ, ಸರ್ಕಾರದ ದಬ್ಬಾಳಿಕೆ ವಿರುದ್ಧ ಕಾನೂನಿನ ಚೌಕಟ್ಟನೊಳಗೆ ಹೋರಾಡುತ್ತೇನೆ ಎಂದು ಹೇಳಿದರು.

5. ಕನ್ನಡೇತರರಿಗೆ ನೇಮಕಾತಿ ಅಧಿಸೂಚನೆ ಹಿಂಪಡೆದ BMRCL

ನಮ್ಮ ಮೆಟ್ರೋದಲ್ಲಿ ಕನ್ನಡೇತರರಿಗೆ ನೇಮಕಾತಿ ಅಧಿಸೂಚನೆ ವಿಚಾರವಾಗಿ ಹೋರಾಟ ತೀವ್ರಗೊಂಡ ಹಿನ್ನೆಲೆಯಲ್ಲಿ ಎಚ್ಚೆತ್ತ BMRCL ಈ ಅಧಿಸೂಚನೆಯನ್ನು ಹಿಂಪಡೆದಿದೆ. ಗುತ್ತಿಗೆ ಆಧಾರದ ಮೇಲೆ 50 ಟ್ರೈನ್‌ ಆಪರೇಟರ್‌ ಹುದ್ದೆಗಳ ನೇಮಕಾತಿಗೆ ಮೆಟ್ರೋ ಮುಂದಾಗಿತ್ತು. ಹೀಗಾಗಿ BMRCL ಕಚೇರಿ ಮುಂದೆ ಕನ್ನಡಪರ ಹೋರಾಟಗಾರರು ಧರಣಿ ಮಾಡಿದ್ದರು. ನಮ್ಮ ಮೆಟ್ರೋದಲ್ಲಿ ಕನ್ನಡೇತರರಿಗೆ ನೇಮಕಾತಿ ಕಲ್ಪಿಸುವ ಪ್ರಕ್ರಿಯೆ ಕೈಬಿಡಬೇಕು. ತಾಂತ್ರಿಕ ಮತ್ತು ತಾಂತ್ರಿಕೇತರ ಹುದ್ದೆಗಳಿಗೆ ಕನ್ನಡಿಗರನ್ನೇ ನೇಮಿಸುವಂತೆ ಬಿಎಂಆರ್ಸಿಎಲ್ ಎಂಡಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಪತ್ರ ಬರೆದಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com