
ಉಡುಪಿ: ಭಾರತ ಕ್ರಿಕೆಟ್ ತಂಡದ ಮಾಜಿ ಕೋಚ್, ವೀಕ್ಷಕ ವಿವರಣೆಗಾರ ರವಿಶಾಸ್ತ್ರಿ ಅವರಿಂದು ಕಾರ್ಕಳ ತಾಲೂಕಿನ ಬೈಲೂರು ಎರ್ಲಪಾಡಿ ಕರ್ವಾಲು ಶ್ರೀ ವಿಷ್ಣುಮೂರ್ತಿ ದೇವಸ್ಥಾನಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಬೈಲೂರು ಎರ್ಲಪಾಡಿ ಕರ್ವಾಲು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಆಡಳಿತ ಮಂಡಳಿಯ ಅನಂತ ಪಟ್ಟಾಭಿ ರಾವ್, ಅಭಿವೃದ್ಧಿ ಸಮಿತಿ ಅಧ್ಯಕ್ಷ ಭೋಜ ಶೆಟ್ಟಿ, ರವಿಶಾಸ್ತಿ ಕುಟುಂಬಸ್ಥರಾದ ವಾದಿರಾಜ ಪೆಜತ್ತಾಯ ಮತ್ತಿತರರು ಉಪಸ್ಥಿತರಿದ್ದರು.
ರವಿಶಾಸ್ತ್ರಿ ಅವರ ಹಿರಿಯರು ಕರ್ವಾಲು ಮೂಲದವರಾಗಿದ್ದು, 50 ವರ್ಷಗಳ ಹಿಂದೆ ರವಿಶಾಸ್ತ್ರಿ ಹಿರಿಯರು ಎರ್ಲಪಾಡಿ ತೊರೆದಿದ್ದರು. 2007ರಿಂದ ಸತತ 13 ಬಾರಿ ಎರ್ಲಪಾಡಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ನಾಗ ದರ್ಶನಕ್ಕೆ ಬರುತ್ತಿದ್ದಾರೆ.
2007ರಲ್ಲಿ ರವಿಶಾಸ್ತ್ರಿ ದಂಪತಿ ಇಲ್ಲಿಗೆ ಮೊದಲ ಬಾರಿಗೆ ಭೇಟಿ ನೀಡಿ ನಾಗಬನದಲ್ಲಿ ಪೂಜೆಗೈದಿದ್ದರು. ಇದಾದ ಮರು ವರ್ಷವೇ ಈ ದಂಪತಿಗೆ ಮಗುವಾಯಿತು. ಇದರಿಂದ ಪ್ರಭಾವಿತರಾದ ಶಾಸ್ತ್ರಿ ಅವರು ನಿರಂತರವಾಗಿ ವರ್ಷಕ್ಕೊಮ್ಮೆ ಭೇಟಿ ನೀಡಿ ಇಲ್ಲಿ ವಿಶೇಷ ಪೂಜೆ ಸಲ್ಲಿಸುತ್ತಲೇ ಬರುತ್ತಿದ್ದಾರೆ.
ಇಂದಿನ ಭೇಟಿ ವೇಳೆ ಮೂಲ ನಾಗದೇವರಿಗೆ ಪಂಚಾಮೃತ ಅಭಿಷೇಕ, ಎಳನೀರಿನ ಅಭಿಷೇಕ, ಕಲ್ಪೋಕ್ತ ಪೂಜೆ, ನಾಗತಂಬಿಲ ಸೇವೆ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಮಾರ್ಚ್ 22 ರಿಂದ ಆರಂಭವಾಗಲಿರುವ ಐಪಿಎಲ್ ಟೂರ್ನಿ ಬಗ್ಗೆ ಮಾತನಾಡಿದ ರವಿ ಶಾಸ್ತ್ರಿ, ಹತ್ತು ತಂಡದ ಜಿದ್ದಾಜಿದ್ದಿನ ಹೋರಾಟ ಕಣ್ತುಂಬಿಕೊಳ್ಳಲು ಕ್ರೀಡಾ ಕ್ಷೇತ್ರವೆೇ ಕಾತರದಲ್ಲಿದೆ. ಐಪಿಎಲ್ ಯುವ ಆಟಗಾರರಿಗೆ ತೆರೆದಿಟ್ಟ ವೇದಿಕೆಯಾಗಿದ್ದು ದಾಖಲೆಗಳಿಗೆ ಸ್ಪೂರ್ತಿದಾಯಕವಾಗಿದೆ ಎಂದರು.
Advertisement