
ಬೆಂಗಳೂರು: ಸ್ಯಾಂಕಿ ಟ್ಯಾಂಕ್‌ನಲ್ಲಿ ಆಯೋಜಿಸಿರುವ ಕಾವೇರಿ ಆರತಿ ಸರ್ಕಾರಿ ಕಾರ್ಯಕ್ರಮವೇ ಹೊರತು ರಾಜಕೀಯ ಕಾರ್ಯಕ್ರಮವಲ್ಲ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಗುರುವಾರ ಸ್ಪಷ್ಟಪಡಿಸಿದ್ದಾರೆ.
ಇಂದು ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ, ಮಾರ್ಚ್ 22 ರಂದು ವಿಶ್ವ ಜಲ ದಿನಾಚರಣೆ. ಹೀಗಾಗಿ ನಾಳೆ ಕಾವೇರಿ ಆರತಿಯ ಜೊತೆಗೆ ರಾಜ್ಯದಲ್ಲಿ ಒಂದು ತಿಂಗಳ ಕಾಲ ಜಲ ಸಂರಕ್ಷಣಾ ಅಭಿಯಾನವನ್ನು ಆರಂಭಿಸಲಾಗುವುದು ಎಂದು ಹೇಳಿದರು.
"ಸರ್ಕಾರವು ತನ್ನ ಜಲ ಸಂರಕ್ಷಣಾ ಪ್ರಯತ್ನಗಳ ಭಾಗವಾಗಿ ಸ್ಯಾಂಕಿ ಟ್ಯಾಂಕ್‌ನಲ್ಲಿ ಕಾವೇರಿ ಆರತಿಯನ್ನು ಆಯೋಜಿಸಿದೆ. ಇದು ಸಂಪೂರ್ಣವಾಗಿ ಸರ್ಕಾರಿ ಕಾರ್ಯಕ್ರಮ. ಆದರೂ ಕೆಲವರು ಇದರ ವಿರುದ್ಧ ನ್ಯಾಯಾಲಯಕ್ಕೆ ಹೋಗಿದ್ದಾರೆ. ನಾವು ಈ ಪ್ರಕರಣವನ್ನು ಕಾನೂನುಬದ್ಧವಾಗಿ ಎದುರಿಸುತ್ತೇವೆ" ಎಂದರು.
ಜಲ ಸಂರಕ್ಷಣೆಯ ಅಗತ್ಯವನ್ನು ಎತ್ತಿ ತೋರಿಸಿದ ಅವರು, ಅನೇಕ ಜನರು ಕಾರುಗಳನ್ನು ತೊಳೆಯಲು ಮತ್ತು ತೋಟಗಳಿಗೆ ನೀರುಣಿಸಲು ಕುಡಿಯುವ ನೀರನ್ನು ದುರುಪಯೋಗಪಡಿಸಿಕೊಳ್ಳುತ್ತಾರೆ. ಹೀಗೆ ಸುಮಾರು ಶೇ 20ರಷ್ಟು ಕುಡಿಯುವ ನೀರು ವ್ಯರ್ಥವಾಗುತ್ತಿದೆ. ಈ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಪ್ರತಿಜ್ಞಾ ಸ್ವೀಕಾರ ಮಾಡಿಸಲಾಗುವುದು. ಇನ್ನು ಕೆಆರ್ಎಸ್ನಲ್ಲಿ ಕಾವೇರಿ ಆರತಿ ಮಾಡಲು ನಾನು ಈ ಹಿಂದೆಯೇ ಘೋಷಣೆ ಮಾಡಿದ್ದೆ. ಅದರ ಭಾಗವಾಗಿ ನಾಳೆ ಸ್ಯಾಂಕಿ ಕೆರೆಯಲ್ಲಿ ಪೂಜೆ ನೆರವೇರಿಸಲಾಗುವುದು ಎಂದು ಹೇಳಿದರು.
ಹಲವು ಸ್ಥಳಗಳನ್ನು ಪರಿಶೀಲನೆ ಮಾಡಿದ ನಂತರ ಈ ಸ್ಥಳದಲ್ಲಿ ಕಾವೇರಿ ಆರತಿ ನಡೆಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಡಿಸಿಎಂ ತಿಳಿಸಿದರು.
ಈ ಹಿಂದೆ ಸ್ಯಾಂಕಿ ಟ್ಯಾಂಕ್ ನಲ್ಲಿ ಕನ್ನಡ ರಾಜ್ಯೋತ್ಸವ ಮತ್ತು ಶಾಸಕರ ಹುಟ್ಟುಹಬ್ಬ ಸೇರಿದಂತೆ ವಿವಿಧ ಸಾರ್ವಜನಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಆದಾಗ್ಯೂ, ಕೆಲವು ಬಿಜೆಪಿ ನಾಯಕರು ಕಾವೇರಿ ಆರತಿಯನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದಾರೆ ಎಂದರು.
Advertisement