ದೇವಸ್ಥಾನ ಮೇಲೆ ಕಲ್ಲು ತೂರಿದ ಮುಸ್ಲಿಂ ಯುವಕ: ಕೋಮು ಉದ್ವಿಗ್ನ ಸ್ಥಿತಿ
ಬೆಳಗಾವಿ: ಗಡಿಜಿಲ್ಲೆ ಬೆಳಗಾವಿ ನಗರದ ಪಾಂಗುಳ ಗಲ್ಲಿಯಲ್ಲಿ ಅಶ್ವತ್ಥಾಮ ದೇವಸ್ಥಾನಕ್ಕೆ ಮುಸ್ಲಿಂ ಯುವಕ ಕಲ್ಲು ತೂರಾಟ ಮಾಡಿದ್ದರಿಂದ ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ಉಂಟಾಯಿತು. ನೆರೆದಿದ್ದ ಜನರು ಯುವಕನನ್ನು ಹಿಡಿದು ಸ್ಥಳೀಯ ಪೊಲೀಸರಿಗೊಪ್ಪಿಸಿದ ಘಟನೆ ನಡೆದಿದೆ.
ಉಜ್ವಲ್ ನಗರದ ನಿವಾಸಿ ಯಾಸೀರ್ ಎಂಬಾತನೇ ನಿನ್ನೆ ರಾತ್ರಿ ದೇವಸ್ಥಾನಕ್ಕೆ ಕಲ್ಲು ಎಸೆದ ಯುವಕ. ತಕ್ಷಣವೇ ಧಾವಿಸಿ ಬಂದ ಸ್ಥಳೀಯರು ಯಾಸೀರ್ನನ್ನು ಹಿಡಿದು ಕಂಬಕ್ಕೆ ಕಟ್ಟಿಹಾಕಿದ್ದಾರೆ. ಸ್ಥಳಿಯರು ಹೊಡೆಯಲು ಮುಂದಾದಾಗ ಯಾಸೀರ್, ತಪ್ಪು ಮಾಡಿದ್ದೇನೆ ಕ್ಷಮಿಸಿಬಿಡಿ. ಮಂದಿರಕ್ಕೆ ಕಲ್ಲು ಹೊಡೆದಿದ್ದೇನೆ. ಮೊನ್ನೆ ಒಬ್ಬ ಬುರ್ಕಾ ಹಾಕಿ ಡ್ಯಾನ್ಸ್ ಮಾಡಿದ್ದನಲ್ಲಾ ಅದಕ್ಕೆ ಎಂದಿದ್ದಾನೆ.
ಪ್ರತೀಕಾರ
ಮೊನ್ನೆ ಹೋಳಿ ಹಬ್ಬದ ದಿನ ಕೆಲವರು ಬುರ್ಖಾ ಧರಿಸಿ ಡ್ಯಾನ್ಸ್ ಮಾಡಿದ್ದರು. ಅದಕ್ಕೆ ಸಿಟ್ಟಿನಿಂದ ದೇವಸ್ಥಾನಕ್ಕೆ ಕಲ್ಲುಹೊಡೆದಿರುವುದಾಗಿ ಮದ್ಯಪಾನದ ನಶೆಯಲ್ಲಿದ್ದ ಆರೋಪಿ ಯಾಸೀರ್ ಬಾಯಿಬಿಟ್ಟಿದ್ದಾನೆ. ಸ್ಥಳೀಯರು ಯಾಸೀರ್ನನ್ನು ಕಂಬಕ್ಕೆ ಕಟ್ಟಿಹಾಕಿ ಥಳಿಸಿ ನಂತರ ಬೆಳಗಾವಿಯ ಮಾರ್ಕೆಟ್ ಠಾಣೆ ಪೊಲೀಸರಿಗೆ ಒಪ್ಪಿಸಿದ್ದಾರೆ.
ಪಾಂಗಳು ಗಲ್ಲಿಯಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್
ಪರಿಸ್ಥಿತಿ ಸೂಕ್ಷ್ಮವಾಗಿರುವುದರಿಂದ ನಗರ ಪೊಲೀಸರು ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಪಾಂಗಳು ಗಲ್ಲಿಯಲ್ಲಿ ಒಂದು ಕೆಎಸ್ಆರ್ಪಿ ತುಕಡಿ ನಿಯೋಜಿಸಿದ್ದಾರೆ. ಪಿಎಸ್ಐ ನೇತೃತ್ವದಲ್ಲಿ ಭದ್ರತೆ ಹೆಚ್ಚಿಸಿದ್ದಾರೆ. ಭಾಷಾ ಸಂಘರ್ಷ ಎದುರಿಸುತ್ತಿರುವ ಬೆಳಗಾವಿಯಲ್ಲಿ ಇಂಥಹ ಕಿಡಿಗೇಡಿ ಕೃತ್ಯ ನಡೆಸಿರುವುದು ಕೋಮು ಸೌಹಾರ್ದಕ್ಕೆ ಧಕ್ಕೆ ಉಂಟಾಗಿದೆ. ಸ್ಥಳದಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ.
ದಿನದ ಹಿಂದಷ್ಟೇ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಬೆಕ್ಕೇರಿ ಗ್ರಾಮದಲ್ಲಿ ಸೋಷಿಯಲ್ ಮೀಡಿಯಾ ಸ್ಟೇಟಸ್ ಒಂದರ ಪರಿಣಾಮ ಕಲ್ಲು ತೂರಾಟ ನಡೆದು ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು. ಅದು ನಿಯಂತ್ರಣಕ್ಕೆ ಬರುತ್ತಿದೆ ಎನ್ನುವಷ್ಟರಲ್ಲೇ ಪಾಂಗುಳ ಗಲ್ಲಿಯಲ್ಲಿ ಸಮಸ್ಯೆ ತಲೆದೋರಿದೆ. ಕೆಲ ದಿನಗಳ ಹಿಂದಷ್ಟೇ ಬಸ್ ಕಂಡಕ್ಟರ್ ಮೇಲಿನ ಹಲ್ಲೆಯಿಂದಾಗಿ ಬೆಳಗಾವಿ ಉದ್ವಿಗ್ನಗೊಂಡಿತ್ತು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ