ಕರ್ನಾಟಕದಲ್ಲಿ ದರ ಏರಿಕೆ ಸರಣಿ ಮುಂದುವರೆದಿದ್ದು, ಮತ್ತೆ ವಿದ್ಯುತ್ ದರ ಏರಿಕೆ ಮಾಡಿ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಗ್ರಾಹಕರಿಗೆ ಶಾಕ್ ನೀಡಿದೆ. ವಿದ್ಯುತ್ ದರ ಪ್ರತಿ ಯೂನಿಟ್ಗೆ 36 ಪೈಸೆ ಹೆಚ್ಚಳ ಮಾಡಲಾಗಿದೆ. ವಿದ್ಯುತ್ ಪ್ರಸರಣ ಮತ್ತು ಎಸ್ಕಾಮ್ ಸಿಬ್ಬಂದಿ ಪಿಂಚಿಣಿ, ಗ್ರಾಚ್ಯುಟಿಗಾಗಿ ಗ್ರಾಹಕರಿಂದ ವಸೂಲಿಗೆ ಕೆಇಆರ್ಸಿ ಮುಂದಾಗಿದ್ದು, ದರ ಹೆಚ್ಚಳದ ಆದೇಶ ಹೊರಡಿಸಿದೆ. ಎಪ್ರಿಲ್ 1 ರಿಂದಲೇ ಹೊಸ ಆದೇಶ ಜಾರಿಯಾಗಲಿದೆ. ಈ ಕುರಿತು ಮಾತನಾಡಿರುವ ಸಚಿವ ಶರಣಪ್ರಕಾಶ್ ಪಾಟೀಲ್, 'ವಿದ್ಯುತ್ ದರ ಏರಿಕೆಯಿಂದ ಸಾಮಾನ್ಯ ಜನರಿಗೆ ತೊಂದರೆ ಆಗುವುದಿಲ್ಲ. ಗೃಹಜ್ಯೋತಿ ಯೋಜನೆಯಿಂದಾಗಿ ನಷ್ಟ ಆಗಿಲ್ಲ. ಗೃಹಜ್ಯೋತಿ ನಷ್ಟದಿಂದ ವಿದ್ಯುತ್ ದರ ಏರಿಕೆ ಮಾಡಲಾಗಿಲ್ಲ ಎಂದು ಸ್ಪಷ್ಟನೆ ನೀಡಿದರು. 'ನಾವು 200 ಯೂನಿಟ್ ವಿದ್ಯುತ್ ಉಚಿತ ಕೊಟ್ಟಿದ್ದೇವೆ. 200 ಯೂನಿಟ್ ಮೇಲೆ ಬಳಸಿದವರಿಗೆ ದರ ಏರಿಕೆ ಅನ್ವಯವಾಗುತ್ತದೆ ಎಂದು ಹೇಳಿದ್ದಾರೆ.
ವಿಧಾನಸಭೆಯಲ್ಲಿ ಇಂದು Honeytrap ವಿಷಯ ಸದ್ದು ಮಾಡಿದೆ. ರಾಜ್ಯದಲ್ಲಿ ಸಹಕಾರಿ ಸಚಿವ ರಾಜಣ್ಣ ಅವರ ಮೇಲೆ ಹನಿಟ್ರ್ಯಾಪ್ ಮಾಡುವ ಪ್ರಯತ್ನ ಮಾಡಲಾಗಿದೆ. ಇದೊಂದು ಕೆಟ್ಟ ಸಂಸ್ಕೃತಿ, ಜನಪ್ರತಿನಿಧಿಗಳನ್ನು ಬ್ಲಾಕ್ ಮೇಲ್ ಮಾಡುತ್ತಿದ್ದಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆರೋಪಿಸಿದ್ದಾರೆ. ಬಜೆಟ್ ಭಾಷಣದ ಮೇಲಿನ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ಅವರು, ರಾಜ್ಯ ಸಂಸ್ಕೃತಿ, ಒಳ್ಳೆಯದಕ್ಕೆ ಹೆಸರುವಾಸಿಯಾಗಿದ್ದು, ಸಿಎಂ ಆಗಬೇಕು ಎಂದು, ಕುಟುಂಬವನ್ನು ರಕ್ಷಿಸಿಕೊಳ್ಳಲು ಹನಿಟ್ರ್ಯಾಪ್‌ಗೆ ಮುಂದಾಗಿದ್ದಾರೆ ಎಂದು ಹೇಳಿದರು. ಈ ಆರೋಪ ಕುರಿತು ಪ್ರತಿಕ್ರಿಯಿಸಿದ ಸಚಿವ ರಾಜಣ್ಣ, ಕರ್ನಾಟಕ ಮಾತ್ರದಲ್ಲದೇ ದೇಶಾದ್ಯಂತ ಹನಿಟ್ರ್ಯಾಪ್ ನಡೆಯುತ್ತಿದೆ. ಕರ್ನಾಟಕ ಸಿಡಿ, ಪೆನ್ ಡ್ರೈವ್ ಕಾರ್ಖಾನೆ ಆಗಿದೆ. 48 ಜನರ ಹನಿಟ್ರ್ಯಾಪ್ ಮಾಡಲಾಗಿದೆ. ಸಿಡಿ, ಪೆನ್ ಡ್ರೈವ್ ಮಾಡುವಂತ 48 ಜನರು ಇದ್ದಾರೆ. ಈ ಸಂಬಂಧ ಗೃಹ ಸಚಿವರಿಗೆ ಲಿಖಿತ ದೂರ ನೀಡುತ್ತೇನೆ. ಗೃಹ ಸಚಿವರು ವಿಶೇಷ ತನಿಖೆ ಮಾಡಿಸಲಿ, ಇದರ ಹಿಂದಿರುವ ನಿರ್ದೇಶಕರು ಯಾರೆಂಬುದು ಗೊತ್ತಾಗಲಿದೆ ಎಂದರು. ಈಮಧ್ಯೆ, ಸಚಿವ ಕೆಎನ್ ರಾಜಣ್ಣ ಅವರ ಪುತ್ರ ಹಾಗೂ ಕಾಂಗ್ರೆಸ್ ಎಂಎಲ್ ಸಿ ರಾಜೇಂದ್ರ ಅವರು ತಮ್ಮನ್ನು ಹನಿಟ್ರ್ಯಾಪ್ ಬಲೆಗೆ ಬೀಳಿಸುವ ಯತ್ನ ನಡೆದಿದೆ ಎಂದು ಹೇಳಿದ್ದಾರೆ. ರಾಜಣ್ಣ ದೂರು ನೀಡಿದರೆ ಉನ್ನತ ಮಟ್ಟದ ತನಿಖೆಗೆ ಆದೇಶಿಸುವುದಾಗಿ ಗೃಹ ಸಚಿವ ಡಾ.ಜಿ ಪರಮೇಶ್ವರ್ ಸದನಕ್ಕೆ ಭರವಸೆ ನೀಡಿದ್ದಾರೆ.
ರಾಮನಗರವನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕರಣ ಮಾಡುವ ರಾಜ್ಯ ಸರ್ಕಾರದ ಪ್ರಸ್ತಾಪವನ್ನು ತಿರಸ್ಕರಿಸಿರುವ ಕೇಂದ್ರ ಸರ್ಕಾರದ ನಡೆಗೆ ಪ್ರತಿಕ್ರಿಯೆ ನೀಡಿರುವ ಡಿಕೆ ಶಿವಕುಮಾರ್, ಇದು ರಾಜ್ಯ ವಿಷಯವಾಗಿದ್ದು, ನಿರ್ಧಾರದಿಂದ ಹಿಂದೆ ಸರಿಯಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಗಳ ಮರುನಾಮಕರಣವು ರಾಜ್ಯ ವಿಷಯವಾಗಿದೆ. ಆದರೆ. ಇಲ್ಲಿನ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ, ಕೇಂದ್ರ ಗೃಹ ಸಚಿವರಿಗೆ ಹೇಳಿ ಹೆಸರು ಬದಲಾವಣೆ ಬೇಡ ಎಂದು ಬರೆಸಿದ್ದಾರೆ, ನಮ್ಮ ಕಾನೂನು ಇಲಾಖೆ ನಮ್ಮ ಪರವಾಗಿ ಬರೆದಿದೆ. ನಾವು ಮತ್ತೆ ಕೇಂದ್ರವನ್ನು ಸಂಪರ್ಕಿಸುವ ಅಗತ್ಯವಿಲ್ಲ. ನಮ್ಮ ನಿರ್ಧಾರದಲ್ಲಿ ಬದಲಾವಣೆಗಳಿಲ್ಲ. ರಾಮನಗರವನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕರಣ ಮಾಡುವುದು ನಿಶ್ಚಿತ ಎಂದು ಹೇಳಿದ್ದಾರೆ.
ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಅವರ ಸಂಬಂಧಿಕರಿಂದ ರಾಮನಗರದ ಬಿಡದಿಯ ಕೇತಗಾನಹಳ್ಳಿಯಲ್ಲಿನ ಸರ್ಕಾರಿ ಜಮೀನಿನ ಒತ್ತುವರಿ ತೆರವು ಕುರಿತು 10 ದಿನಗಳಲ್ಲಿ ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೊರ್ಟ್ ಬುಧವಾರ ಸೂಚನೆ ನೀಡಿದೆ. ಭೂ ಕಬಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಸ್ತೃತ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಲೋಕಾಯುಕ್ತರು ಮಾಡಿರುವ ಆದೇಶ ಜಾರಿ ಮಾಡುವಂತೆ ಹೈಕೋರ್ಟ್ ಹೊರಡಿಸಿರುವ ಆದೇಶ ಪಾಲಿಸದ ರಾಜ್ಯ ಸರ್ಕಾರದ ನಡೆ ವಿರುದ್ಧ ಸಮಾಜ ಪರಿವರ್ತನಾ ಸಮುದಾಯ ಅರ್ಜಿ ಸಲ್ಲಿಸಿತ್ತು.
ಬಿಡದಿಯಲ್ಲಿರುವ ಟೊಯೋಟಾ ಕಾರ್ಖಾನೆಯ ಶೌಚಾಲಯದಲ್ಲಿ ಪಾಕಿಸ್ತಾನ ಪರ ಘೋಷಣೆ ಬರೆದ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಬಿಡದಿ ಪೊಲೀಸರು ಬಂಧಿಸಿದ್ದಾರೆ. ಉತ್ತರ ಕರ್ನಾಟಕದ ಹೈಮದ್ ಹುಸೇನ್ ಮತ್ತು ಸಾದಿಕ್ ಬಂಧಿತ ಆರೋಪಿಗಳಾಗಿದ್ದಾರೆ. ಇವರು ಟೊಯೋಟಾ ಕಾರ್ಖಾನೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಆರೋಪಿಗಳು ಮಾರ್ಚ್ 15ರಂದು ಶೌಚಾಲಯದ ಗೋಡೆ ಮೇಲೆ ಪಾಕಿಸ್ತಾನದ ಪರ ಬರಹ ಬರೆಯುವುದರ ಜೊತೆಗೆ ಕನ್ನಡಿಗರ ಬಗ್ಗೆಯೂ ಅವಹೇಳನ ಪದ ಬಳಸಿದ್ದರು.
Advertisement