ಬೆಂಗಳೂರು: ಈ ಬಾರಿ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಬಿಸಿಲಿನ ತಾಪಮಾನ ಮತ್ತಷ್ಟು ಏರಿಕೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ಬೆನ್ನಲ್ಲೇ ಉಷ್ಣ ಅಲೆ ಸಮಸ್ಯೆಯನ್ನು ರಾಜ್ಯ ವಿಪತ್ತು ಎಂದು ಘೋಷಿಸಿ ಎಂದು ತಜ್ಞರು ಒತ್ತಾಯಿಸಿದ್ದಾರೆ.
ಉತ್ತರ ಕರ್ನಾಟಕದ ಕಲಬುರಗಿ, ರಾಯಚೂರು ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಉಷ್ಣ ಅಲೆ ಕಾಣಿಸಿಕೊಂಡಿದ್ದು ತಾಪಮಾನ ಸುಮಾರು 43 ಡಿಗ್ರಿ ಸೆಲ್ಸಿಯಸ್ ತಲುಪಿದೆ. ಇದು ಮಕ್ಕಳು, ವೃದ್ಧರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಇನ್ನು ಈ ಪ್ರದೇಶಗಳ ತಾಪಮಾನದಲ್ಲಿ ಮತ್ತಷ್ಟು ಏರಿಕೆಯಾಗುವ ಬಗ್ಗೆ IMD ಮುನ್ಸೂಚನೆ ನೀಡಿರುವುದು ಜನರನ್ನು ಕಂಗಾಲಾಗಿಸಿದೆ. ರಾಜ್ಯ ಸರ್ಕಾರ ಉಷ್ಣ ಅಲೆಯನ್ನು ರಾಜ್ಯ ವಿಪತ್ತು ಎಂದು ಘೋಷಿಸುವುದರಿಂದಾಗುವ ಪ್ರಯೋಜನಗಳು ಏನೆಂದರೆ, ಕರ್ನಾಟಕ ವಿಪತ್ತು ಪರಿಹಾರ ನಿಧಿಯಿಂದ ಸಂತ್ರಸ್ತರಿಗೆ ಪರಿಹಾರ ನೀಡಲು ಸಾಧ್ಯವಾಗಲಿದೆ. ಈ ಪರಿಸ್ಥಿತಿಯನ್ನು ಎದುರಿಸಲು ಜಿಲ್ಲೆಗಳಿಗೆ ನೆರವಾಗಲಿದೆ. ಏತನ್ಮಧ್ಯೆ, ಅಧಿಕ ತಾಪಮಾನದಿಂದ ರಕ್ಷಣೆಗೆ ಜನರಲ್ಲಿ
ಜಾಗೃತಿ ಮೂಡಿಸಲು ಆರೋಗ್ಯ ಇಲಾಖೆ ಮಾರ್ಗಸೂಚಿ
ಕಲ್ಯಾಣ ಕರ್ನಾಟಕ ಪ್ರದೇಶ ಈಗಾಗಲೇ ಮಕ್ಕಳಲ್ಲಿ ಅಪೌಷ್ಟಿಕತೆ ಮತ್ತು ಹೆಚ್ಚಿನ ತಾಯಂದಿರ ಮರಣ ಪ್ರಮಾಣದಿಂದ ಬಳಲುತ್ತಿದ್ದು, ಇಲ್ಲಿನ ಜನರಿಗೆ ಅಧಿಕ ತಾಪಮಾನದಿಂದ ರಕ್ಷಿಸಿಕೊಳ್ಳುವ ನಿಟ್ಟಿನಲ್ಲಿ ಸಹಾಯ ಮಾಡಲು ಯಾವುದೇ ಕ್ರಿಯಾ ಯೋಜನೆ ಜಾರಿಯಲ್ಲಿಲ್ಲ ಎಂದು ತಜ್ಞರು ಹೇಳಿದ್ದಾರೆ. ಇದುವರೆಗೆ ಯಾವುದೇ ರೋಗಿಗಳು ಅಥವಾ ಜನ ಬಿಸಿಲಾಘಾತ ಅಥವಾ ಉಷ್ಣ ಅಲೆಯಿಂದಾಗಿ ಆಸ್ಪತ್ರೆಗೆ ದಾಖಲಾಗಿಲ್ಲ ಎಂದು ಕಲಬುರಗಿ ಜಿಲ್ಲಾ ಆರೋಗ್ಯ ಅಧಿಕಾರಿ ಶರಣಬಸಪ್ಪ ಕ್ಯಾತನಾಳ್ ತಿಳಿಸಿದ್ದಾರೆ. ತಾಪಮಾನ ಏರಿಕೆಯಿಂದಾಗಿ ಮಧ್ಯಾಹ್ನ 12 ರಿಂದ 3 ಗಂಟೆಯವರೆಗೆ ಮನೆಯಿಂದ ಹೊರ ಹೋಗುವುದನ್ನು ತಪ್ಪಿಸುವಂತೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.
Advertisement