
ಬೆಂಗಳೂರು: ಕೆಎಸ್‌ಆರ್‌ಟಿಸಿ ನಿರ್ವಾಹಕನ ಮೇಲೆ ಮರಾಠಿಗರು ಹಲ್ಲೆ ಮಾಡಿರುವುದು ಸೇರಿದಂತೆ ವಿವಿಧ ಘಟನೆಗಳನ್ನು ಖಂಡಿಸಿ ವಾಟಾಳ್ ನಾಗರಾಜ್ ನೇತೃತ್ವದ ಗುಂಪು ಶನಿವಾರ ‘ಕರ್ನಾಟಕ ಬಂದ್’ಗೆ ಕರೆ ನೀಡಿವೆ.
ಬಂದ್‌ಗೆ ಓಲಾ ಉಬರ್ ಡ್ರೈವರ್ಸ್ ಅಂಡ್ ಓನರ್ಸ್ ಅಸೋಸಿಯೇಷನ್, ಆಟೊ ರಿಕ್ಷಾ ಸಂಘಟನೆಗಳು ಬೆಂಬಲ ನೀಡಿದ್ದರೆ, ಕೆಎಸ್‌ಆರ್‌ಟಿಸಿ, ಮೆಟ್ರೊ ಬೆಂಬಲ ನೀಡಿಲ್ಲ. ಹೋಟೆಲ್ ಮಾಲೀಕರು ನೈತಿಕ ಬೆಂಬಲ ಮಾತ್ರ ನೀಡಿದ್ದಾರೆ.
ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆವರೆಗೆ ಅಖಂಡ ಕರ್ನಾಟಕ ಬಂದ್‌ಗೆ ಕರೆ ನೀಡಿದ್ದು ಬೆಳಗ್ಗೆ ಬೆಂಗಳೂರಿನ ಟೌನ್‌ಹಾಲ್‌ನಿಂದ ಫ್ರೀಡಂ ಪಾರ್ಕ್ ವರೆಗೆ ಬೃಹತ್ ಮೆರವಣಿಗೆ ಹಮ್ಮಿಕೊಂಡಿವೆ. ಬೆಳಗಾವಿ, ಮಂಡ್ಯ, ರಾಮನಗರದಲ್ಲಿ ಸಂಪೂರ್ಣ ಬೆಂಬಲ ಸಿಕ್ಕಿದೆ. ಮೈಸೂರು, ಕಲ್ಯಾಣ ಕರ್ನಾಟಕದಲ್ಲಿ ಮಿಶ್ರ ಬೆಂಬಲ ಇದೆ. ಕರಾವಳಿ ಕರ್ನಾಟಕದಲ್ಲಿ ಬಂದ್‌ಗೆ ಯಾವುದೇ ಸಂಘಟನೆ ಕರೆ ನೀಡಿಲ್ಲ.
ಬಂದ್‌ಗೆ ಬೆಂಗಳೂರಿನಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ನಗರದ ಪ್ರಮುಖ ರಸ್ತೆಗಳಲ್ಲಿ ಪೊಲೀಸರು ಬೆಳಗ್ಗೆಯಿಂದಲೇ ಗಸ್ತಿನಲ್ಲಿದ್ದಾರೆ. ಯಾವುದೇ ಮೆರವಣಿಗೆ, ಪ್ರತಿಭಟನೆಗೆ ಅವಕಾಶವಿಲ್ಲ ಎಂದು ಪೊಲೀಸರು ಈಗಾಗಲೇ ಎಚ್ಚರಿಕೆ ನೀಡಿದ್ದಾರೆ. ಫ್ರೀಡಂ ಪಾರ್ಕ್‌ನಲ್ಲಿ ಮಾತ್ರ ಪ್ರತಿಭಟನೆಗೆ ಅವಕಾಶ ನೀಡಲಾಗಿದೆ. ಬಲವಂತವಾಗಿ ಬಂದ್ ಮಾಡಿಸಿದ್ರೆ ಶಿಸ್ತುಕ್ರಮ ಕೈಗೊಳ್ಳಲಿದ್ದಾರೆ. ಟೌನ್ ಹಾಲ್, ಮೈಸೂರ್ ಬ್ಯಾಂಕ್ ಸರ್ಕಲ್, ಮೆಜೆಸ್ಟಿಕ್‌ನಲ್ಲಿ ಖಾಕಿ ಅಲರ್ಟ್ ಆಗಿದ್ದು 4 ಎಸಿಪಿ ಸೇರಿದಂತೆ 11 ಇನ್ಸ್‌ಪೆಕ್ಟರ್‌ಗಳನ್ನು ಭದ್ರತೆಗೆ ನಿಯೋಜಿಸಲಾಗಿದೆ.
ಪ್ರಮುಖ ಸ್ಥಳದಲ್ಲಿ 65 ಪಿಎಸ್‌ಐ, ನಗರದಲ್ಲಿ ಒಟ್ಟು 1,200 ಪೊಲೀಸರ ನಿಯೋಜನೆ ಮಾಡಲಾಗಿದೆ. ಕೆಎಸ್‌ಆರ್‌ಪಿ 46, ಸಿಎಆರ್ 30 ತುಕಡಿ ಜೊತೆ ಎರಡು ವಾಟರ್ ಜೆಟ್‌ಗಳನ್ನು ನಿಯೋಜಿಸಿದ್ದಾರೆ. ಬಂದ್ ಇದ್ದರೂ ಎಂದಿನಂತೆ ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಬಸ್‌ಗಳು ಸಂಚರಿಸುತ್ತಿವೆ. ನಗರದ ಮೆಜೆಸ್ಟಿಕ್‌ನ ಬಿಎಂಟಿಸಿ ಬಸ್ ನಿಲ್ದಾಣ ಯಥಾಸ್ಥಿತಿಯಲ್ಲಿದೆ. ಆದರೆ ಪ್ರಯಾಣಿಕರ ಸಂಖ್ಯೆ ಸ್ಪಲ್ಪ ಕಡಿಮೆಯಾಗಿದೆ.
ಇನ್ನು ಮೈಸೂರು ರಸ್ತೆಯ ಸ್ಯಾಟಲೈಟ್ ಬಸ್ ನಿಲ್ದಾಣದಲ್ಲಿ ಬೆಳ್ಳಂಬೆಳಗ್ಗೆ ಬಂದ್ ಬಿಸಿ ತಟ್ಟಿದೆ. ತಮ್ಮ ತಮ್ಮ ಊರುಗಳಿಗೆ ವೀಕೆಂಡ್‌ಗಳಲ್ಲೇ ಹೆಚ್ಚಾಗಿ ಹೋಗುವ ಜನ ಇಂದು ಬಂದ್ ಕಾರಣಕ್ಕೆ ಸ್ಯಾಟಲೈಟ್ ಬಸ್ ನಿಲ್ದಾಣದ ಕಡೆ ಮುಖ ಮಾಡಿಲ್ಲ. ಸ್ಯಾಟಲೈಟ್ ಕೆಎಸ್‌ಆರ್‌ಟಿಸಿ ನಿಲ್ದಾಣ ಇಂದು ಪ್ರಯಾಣಿಕರ ಕೊರತೆ ಎದುರಿಸುತ್ತಿದೆ.
ಕರ್ನಾಟಕ ಬಂದ್‌ಗೆ ವಿಜಯನಗರ ಜಿಲ್ಲೆಯಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾಗಿಲ್ಲ. ಹೊಸಪೇಟೆ, ಬೆಳಗಾವಿ ಸೇರಿದಂತೆ ಹಲವೆಡೆ ಜನಜೀವನ ಎಂದಿನಂತೆಯೇ ಸಾಗಿದೆ. ಆಟೊ, ಟ್ಯಾಕ್ಸಿ, ಬಸ್ ಸಂಚಾರ ಸಹ ಮಾಮೂಲಿನಂತೆಯೇ ಇದೆ.
Advertisement