ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಶೇ.4 ರಷ್ಟು ಮೀಸಲಾತಿ ವಿಷಯದಲ್ಲಿ ಕಾಂಗ್ರೆಸ್ ಸಂವಿಧಾನ ಬದಲು ಮಾಡಲಿದೆ ಎಂಬ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿಕೆ ಇಂದು ಸಂಸತ್ತಿನ ಉಭಯ ಸದನಗಳಲ್ಲಿ ಗದ್ದಲ, ಕೋಲಾಹಲಕ್ಕೆ ಕಾರಣವಾಯಿತು. ರಾಜ್ಯಸಭೆಯಲ್ಲಿ ಜೆಪಿ ನಡ್ಡಾ ಡಿಕೆ ಶಿವಕುಮಾರ್ ಹೇಳಿಕೆಯನ್ನು ಪ್ರಸ್ತಾಪ ಮಾಡುತ್ತಿದ್ದಂತೆ ಆಡಳಿತ ಮತ್ತು ವಿರೋಧ ಪಕ್ಷಗಳ ಸದಸ್ಯರ ನಡುವೆ ಗದ್ದಲ, ಗಲಾಟೆ ವಾಕ್ಸ್‌ಮರ ನಡೆಯಿತು. ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಡಿಕೆ ಶಿವಕುಮಾರ್ ಅವರ ಹೇಳಿಕೆಗೆ ಸಮಜಾಷಿಯಿ ನೀಡಲು ಯತ್ನಿಸಿದರಾದರೂ ಆಡಳಿತ ಪಕ್ಷದ ಸದಸ್ಯರು ಗದ್ದಲ ಎಬ್ಬಿಸಿದ ಹಿನ್ನಲೆಯಲ್ಲಿ ಕಲಾಪ ಏರುಪೇರಾಯಿತು. ಕಾಂಗ್ರೆಸ್ ಪಕ್ಷದ ಧರ್ಮಾಧಾರಿತ ಮೀಸಲಾತಿ ತರುವ ಮೂಲಕ ಕಾಂಗ್ರೆಸ್ ಸಂವಿಧಾನವನ್ನು ಬುಡಮೇಲು ಮಾಡಲು ಪ್ರಯತ್ನಿಸುತ್ತಿದೆ. ಸಂವಿಧಾನಸದಲ್ಲಿ ಇಂತಹುದಕ್ಕೆ ಅವಕಾಶವಿಲ್ಲ ಆದರೂ ಕಾಂಗ್ರೆಸ್ ಸಂವಿಧಾನ ವಿರೋಧ ನಿಲುವು ತೆಗೆದುಕೊಂಡಿದೆ ಎಂದು ಬಿಜೆಪಿ ಆರೋಪಿಸಿದೆ. ಡಿಕೆ ಶಿವಕುಮಾರ್ ಹೇಳಿಕೆ ವಿವಾದಕ್ಕೀಡಾಗಿರುವುದು ಕಾಂಗ್ರೆಸ್ ಹೈಕಮಾಂಡ್ ನ್ನು ಪೇಚಿಗೆ ಸಿಲುಕಿಸಿದೆ. ತಕ್ಷಣವೇ ಎಚ್ಚೆತ್ತುಕೊಂಡಿರುವ ಕಾಂಗ್ರೆಸ್ ಹೈಕಮಾಂಡ್, ಈ ಹೇಳಿಕೆಗೆ ವಿವರಣೆ ನೀಡುವಂತೆ ಡಿಕೆ ಶಿವಕುಮಾರ್ ಗೆ ಸೂಚಿಸಿದೆ. ಈ ಮಧ್ಯೆ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿರುವ ಡಿಕೆ ಶಿವಕುಮಾರ್, ನ್ಯಾಯಾಲಯಗಳ ತೀರ್ಪಿನ ಅನುಸಾರ ತಿದ್ದುಪಡಿ ತಂದಿರುವ ನಿದರ್ಶನವಿದೆ ಎಂದು ಹೇಳಿದ್ದೇನೆಯೇ ಹೊರತು, ಸಂವಿಧಾನವನ್ನು ಬದಲಾವಣೆ ಮಾಡುತ್ತೇವೆ ಎಂದು ಎಲ್ಲಿಯೂ ಹೇಳಿಲ್ಲ. ನನ್ನ ಹೇಳಿಕೆಯನ್ನು ತಿರುಚಿರುವ ಬಗ್ಗೆ ಕಾನೂನು ಹೋರಾಟ ಮಾಡುತ್ತೇನೆಂದು ತಿಳಿಸಿದರು.
ರಾಜ್ಯದಲ್ಲಿ ಭಾರಿ ಸದ್ದು ಮಾಡುತ್ತಿರುವ ಹನಿಟ್ರ್ಯಾಪ್ ಪ್ರಕರಣ ಈಗ ಸುಪ್ರೀಂ ಕೋರ್ಟ್‌ನ ಮೆಟ್ಟಿಲೇರಿದೆ. ಹನಿಟ್ರ್ಯಾಪ್ ಪ್ರಕರಣದ ಬಗ್ಗೆ ತನಿಖೆಗೆ ಆದೇಶಿಸಬೇಕು ಎಂದು ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಲಾಗಿದೆ. ಈ ಅರ್ಜಿಯನ್ನು ವಿಚಾರಣೆಗೆ ತೆಗೆದುಕೊಳ್ಳಲು ಸುಪ್ರೀಂ ಕೋರ್ಟ್ ಸಮ್ಮತಿಸಿದೆ. ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾ. ಸಂಜೀವ್ ಖನ್ನಾ ಅವರ ನೇತೃತ್ವದ ನ್ಯಾಯ ಪೀಠದ ಮುಂದೆ ಧನಬಾದ್ ನಿವಾಸಿಯಾಗಿರುವ ವಿನಯ್‌ಕುಮಾರ್ ಸಿಂಗ್ ಎಂಬುವರು ಮಾಧ್ಯಮ ವರದಿಗಳ ಆಧಾರದ ಮೇಲೆ ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದಾರೆ. ಇನ್ನು ಹನಿಟ್ರ್ಯಾಪ್ ಪ್ರಕರಣದ ಬಗ್ಗೆ ಸೂಕ್ತ ಸಮಯದಲ್ಲಿ ದೂರು ನೀಡಲಾಗುವುದು ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ತಿಳಿಸಿದ್ದಾರೆ. ದೂರು ನೀಡಲು ಸಮಯ ನಿಗದಿ ಮಾಡಿಕೊಂಡಿಲ್ಲ. ನಾನು ಮಧ್ಯಾಹ್ನದ ನಂತರ ಬೆಂಗಳೂರಿಗೆ ಹೋಗುತ್ತೇನೆ, ಆ ನಂತರ ಈ ಕುರಿತು ಪಕ್ಷದ ವರಿಷ್ಠರೊಂದಿಗೆ ಚರ್ಚಿಸಿ ನಿರ್ಧರಿಸುತ್ತೇನೆ ಎಂದು ಹೇಳಿದ್ದಾರೆ.
ಕನ್ನಡ ಬಿಗ್ ಬಾಸ್ ಸೀಸನ್ 10ರ ಸ್ಪರ್ಧಿಗಳಾದ ವಿನಯ್ ಗೌಡ ಹಾಗೂ ರಜತ್ ಗೆ ಸಂಕಷ್ಟ ಎದುರಾಗಿದೆ. ಸಾರ್ವಜನಿಕ ಸ್ಥಳದಲ್ಲಿ ಲಾಂಗ್ ಹಿಡಿದುಕೊಂಡು ರೀಲ್ಸ್ ಮಾಡಿದ್ದ ಇಬ್ಬರ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆ ಅಡಿ ಬಸವೇಶ್ವರನಗರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಈ ವಿಡಿಯೋವನ್ನು ರಜತ್ ಅಪ್ಲೋಡ್ ಮಾಡಿದ್ದರು. ಈ ವಿಡಿಯೋ ಭಾರೀ ವೈರಲ್ ಆಗಿತ್ತು. ಈ ವಿಡಿಯೋ ಸಾರ್ವಜನಿಕ ವಲಯದಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿತ್ತು. ಇದರ ಬೆನ್ನಲ್ಲೇ ರಜತ್ ಕಿಶನ್ ಆ ವಿಡಿಯೋವನ್ನು ಡಿಲೀಟ್ ಮಾಡಿದ್ದರು. ಇಬ್ಬರಿಗೂ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡುವ ಸಾಧ್ಯತೆ ಇದೆ.
ಹನಿಟ್ರ್ಯಾಪ್ ಬೆನ್ನಲ್ಲೇ ರಾಜ್ಯದಲ್ಲಿ ಇದೀಗ ಸಚಿವರ ಫೋನ್ ಕದ್ದಾಲಿಕೆ ವಿಚಾರ ಚರ್ಚೆಯ ಮುನ್ನಲೆಗೆ ಬಂದಿದೆ. ಸಿದ್ದರಾಮಯ್ಯ ಅವರ ಆಪ್ತ ಸಚಿವರ ಬಳಗದ ಫೋನ್ ಗಳನ್ನು ಕದ್ದಾಲಿಕೆ ಮಾಡಲಾಗಿದೆ ಎಂಬುವುದು ಸದ್ಯ ಕೇಳಿ ಬಂದಿರುವ ಆರೋಪವಾಗಿದೆ. ಸಚಿವರಷ್ಟೇ ಅಲ್ಲದೆ, ಸುಮಾರು 20 ಕ್ಕೂ ಅಧಿಕ ಶಾಸಕರಿಂದ ಫೋನ್ ಗಳನ್ನು ಕದ್ದಾಲಿಕೆ ಮಾಡಲಾಗಿದೆ. ಈ ಬಗ್ಗೆ ಸ್ವತಃ ಸಚಿವರು ಮತ್ತು ಕೆಲವು ಶಾಸಕರು ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮಾತನಾಡಿದ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಇದು ಶೇಕಡ 100 ರಷ್ಟು ಸತ್ಯ. ಯಾವುದೇ ಅನುಮಾನ ಬೇಡ. ಹನಿಟ್ರ್ಯಾಪ್ ಗೆ ಬೀಳಿಸಲು ಸಚಿವರನ್ನು ಟ್ರ್ಯಾಕ್ ಮಾಡಬೇಕು ಮತ್ತು ಅದಕ್ಕಾಗಿ ಫೋನ್‌ಗಳನ್ನು ಟ್ಯಾಪ್ ಮಾಡಬೇಕು. ಈ ಸರ್ಕಾರವು ಸಂಪೂರ್ಣವಾಗಿ ಫೋನ್ ಟ್ಯಾಪಿಂಗ್‌ನಲ್ಲಿ ತೊಡಗಿಸಿಕೊಂಡಿದೆ. ನನ್ನ ಮತ್ತು ಕುಮಾರಸ್ವಾಮಿ ಅವರ ಫೋನ್ ಕದ್ದಾಲಿಕೆ ಆಗ್ತಿದೆ ಎಂದು ಆರೋಪಿಸಿದ್ದಾರೆ.
Advertisement