
ಬೆಂಗಳೂರು: ಸುಮಾರು 15 ಕೋಟಿ ರೂಪಾಯಿ ಮೌಲ್ಯದ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಬಂಧಿತರಾಗಿರುವ ಕನ್ನಡದ ನಟಿ ರನ್ಯಾ ರಾವ್ ಅವರ ಜಾಮೀನು ಅರ್ಜಿಯ ವಿಚಾರಣೆಯನ್ನು ಮಂಗಳವಾರ ಪೂರ್ಣಗೊಳಿಸಿದ ವಿಶೇಷ ನ್ಯಾಯಾಲಯ ಮಾರ್ಚ್ 27ಕ್ಕೆ ತೀರ್ಪು ಕಾಯ್ದಿರಿಸಿದೆ.
ನಟಿ ರನ್ಯಾ ರಾವ್ ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ 64ನೇ ಸಿಸಿಹೆಚ್ ಕೋರ್ಟ್, ಪ್ರತಿವಾದಿ ಮತ್ತು ಪ್ರಾಸಿಕ್ಯೂಷನ್ ಎರಡೂ ಕಡೆಯ ವಿವರವಾದ ವಾದಗಳನ್ನು ಆಲಿಸಿ, ಆದೇಶವನ್ನು ಕಾಯ್ದಿರಿಸಿದೆ.
ವಿಚಾರಣೆಯ ಸಮಯದಲ್ಲಿ, ರನ್ಯಾ ರಾವ್ ಪರ ವಕೀಲ ಕಿರಣ್ ಜವಳಿ ಅವರು, ತಮ್ಮ ಕಕ್ಷಿದಾರರಿಗೆ ಜಾಮೀನು ನೀಡಬೇಕು ಎಂದು ವಾದಿಸಿದರು. ಆದರೆ ಇದಕ್ಕೆ ವಿರೋಧ ವ್ಯಕ್ತಪಡಿಸಿದ ಕಂದಾಯ ಗುಪ್ತಚರ ನಿರ್ದೇಶನಾಲಯದ(ಡಿಆರ್‌ಐ) ವಕೀಲ ಮಧು ರಾವ್ ಅವರು ಅಕ್ರಮ ಹಣ ವರ್ಗಾವಣೆಯಲ್ಲಿ ಅವರ ನೇರ ಪಾತ್ರವನ್ನು ಸೂಚಿಸುವ ಪುರಾವೆಗಳಿವೆ ಎಂದರು.
ಪ್ರಾಸಿಕ್ಯೂಷನ್ ಪ್ರಕಾರ, ನಟಿ ಚಿನ್ನ ಖರೀದಿಗೆ ಅನುಕೂಲವಾಗುವಂತೆ ಹವಾಲಾ ಮಾರ್ಗಗಳನ್ನು ಬಳಸಿದ್ದಾಗಿ ಒಪ್ಪಿಕೊಂಡಿದ್ದಾರೆ, ಇದು ಅವರ ವಿರುದ್ಧದ ಪ್ರಕರಣವನ್ನು ಬಲಪಡಿಸುತ್ತದೆ.
ಕಾನೂನು ಪ್ರಕ್ರಿಯೆಯ ಭಾಗವಾಗಿ, ಅಧಿಕಾರಿಗಳು ಕಸ್ಟಮ್ಸ್ ಕಾಯ್ದೆಯ ಸೆಕ್ಷನ್ 108 ಅನ್ನು ಅನ್ವಯಿಸಿದ್ದಾರೆ, ಇದು ನ್ಯಾಯಾಂಗ ತನಿಖೆಯನ್ನು ಕಡ್ಡಾಯಗೊಳಿಸುತ್ತದೆ ಎಂದರು.
ಯಾವುದು ಕಾಗ್ನಿಸಬಲ್, ಯಾವುದು ನಾನ್ ಕಾಗ್ನಿಸಬಲ್ ಎಂದು ಕಸ್ಟಮ್ಸ್ ಕಾಯ್ದೆ 135ರಲ್ಲಿ ಬಹಳ ಸ್ಪಷ್ಟವಾಗಿ ವಿವರಿಸಲಾಗಿದೆ. ಇದು ಕಾಗ್ನಿಸಬಲ್ ಅಪರಾಧವಾಗಿದೆ ಹಾಗೂ ಜಾಮೀನು ರಹಿತವಾಗಿದೆ. ನಟಿ ರನ್ಯಾ ರಾವ್ ದುಬೈನಿಂದ ಚಿನ್ನದ ಜೊತೆ ಬಂದಿದ್ದಾರೆ. ಬೆಂಗಳೂರು ಏರ್‌ಪೋರ್ಟ್‌ಗೆ ಸಂಜೆ 6.30ಕ್ಕೆ ಲ್ಯಾಂಡ್ ಆಗಿದ್ದಾರೆ. ಈ ವೇಳೆ ಪ್ರೊಟೋಕಾಲ್ ಅಧಿಕಾರಿ ಹೋಗಿದ್ದಾರೆ. ಅಲ್ಲಿಗೆ ಪ್ರೊಟೋಕಾಲ್ ಅಧಿಕಾರಿ ಹೋಗಿದ್ದಾರೆ ಅಂದರೆ ರನ್ಯಾ ರಾನ್ ಗ್ರೀನ್ ಚಾನಲ್ ಮೂಲಕ ಬರ್ತಿದ್ದಾರೆಂದು ಅರ್ಥ ಎಂದು ಡಿಆರ್‌ಐ ಪರ ವಕೀಲ ಮಧು ರಾವ್ ವಾದ ಮಂಡಿಸಿದರು.
ಅಕ್ರಮ ವಹಿವಾಟಿನ ಆಳ ಮತ್ತು ವ್ಯಾಪಕ ಚಿನ್ನ ಕಳ್ಳಸಾಗಣೆ ಜಾಲಕ್ಕೆ ಮತ್ತಷ್ಟು ಸಂಪರ್ಕಗಳನ್ನು ಹೊಂದಿರುವುದನ್ನು ಬಹಿರಂಗಪಡಿಸುವುದು ತನಿಖೆಯ ಗುರಿಯಾಗಿದೆ ಎಂದರು.
ಮಾರ್ಚ್ 3ರ ರಾತ್ರಿ ದುಬೈನಿಂದ ಎಮಿರೇಟ್ಸ್ ಏರ್‌ಲೈನ್ಸ್ ವಿಮಾನದಲ್ಲಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ನಟಿಯನ್ನು ಅಧಿಕಾರಿಗಳು ತಪಾಸಣೆಗೆ ಒಳಪಡಿಸಿದ್ದು, ಈ ವೇಳೆ ನಟಿ ಬಳಿ 14.80 ಕೆಜಿ ಚಿನ್ನ ಪತ್ತೆಯಾಗಿತ್ತು. ತಕ್ಷಣ ನಟಿಯನ್ನು ಬಂಧಿಸಲಾಗಿತ್ತು.
Advertisement