TB ಮುಕ್ತ ಕರ್ನಾಟಕ ಗುರಿ: BCG ಲಸಿಕೆ ಕಾರ್ಯಕ್ರಮಕ್ಕೆ ಸರ್ಕಾರ ಚಾಲನೆ

ರಾಜ್ಯದಲ್ಲಿ 16 ಜಿಲ್ಲೆಗಳಲ್ಲಿ ಬಿಸಿಜಿ ಲಸಿಕೆ ಹಾಕುವ ಕಾರ್ಯಕ್ರಮ ಕೈಗೆತ್ತಿಕೊಳ್ಳಲಾಗಿದ್ದು, ಕ್ಷಯ ರೋಗ ಬರದಂತೆ ತಡೆಯುವಲ್ಲಿ ಈ ಕಾರ್ಯಕ್ರಮ ಮಹತ್ವದ ಪಾತ್ರ ವಹಿಸಲಿದೆ ಎಂದರು.
BCG ಲಸಿಕೆ ಕಾರ್ಯಕ್ರಮಕ್ಕೆ ಸರ್ಕಾರ ಚಾಲನೆ
BCG ಲಸಿಕೆ ಕಾರ್ಯಕ್ರಮಕ್ಕೆ ಸರ್ಕಾರ ಚಾಲನೆ
Updated on

ಬೆಂಗಳೂರು: ಕರ್ನಾಟಕವನ್ನು ಕ್ಷಯ ರೋಗ ಮುಕ್ತ ರಾಜ್ಯವನ್ನಾಗಿ ರೂಪಿಸುವತ್ತ ಹಲವು ಕಾರ್ಯಕ್ರಮಗಳನ್ನ ಹಾಕಿಕೊಂಡಿರುವ ಆರೋಗ್ಯ ಇಲಾಖೆ, ಮಂಗಳವಾರ BCG ಲಸಿಕೆ ಹಾಕುವ ಬೃಹತ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದೆ. ವಿಶ್ವ ಕ್ಷಯರೋಗ ದಿನವಾದ ಇಂದು ಬಿಸಿಜಿ ಲಸಿಕಾ ಕಾರ್ಯಕ್ರಮಕ್ಕೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಚಾಲನೆ ನೀಡಿದರು.‌

ಬಳಿಕ ಮಾತನಾಡಿದ ಆರೋಗ್ಯ ಸಚಿವರು, ರಾಜ್ಯದಲ್ಲಿ 16 ಜಿಲ್ಲೆಗಳಲ್ಲಿ ಬಿಸಿಜಿ ಲಸಿಕೆ ಹಾಕುವ ಕಾರ್ಯಕ್ರಮ ಕೈಗೆತ್ತಿಕೊಳ್ಳಲಾಗಿದ್ದು, ಕ್ಷಯ ರೋಗ ಬರದಂತೆ ತಡೆಯುವಲ್ಲಿ ಈ ಕಾರ್ಯಕ್ರಮ ಮಹತ್ವದ ಪಾತ್ರ ವಹಿಸಲಿದೆ ಎಂದರು.

ಈಗಾಗಲೇ ರಾಜ್ಯದಲ್ಲಿ 1060 ಗ್ರಾಮ ಪಂಚಾಯತಿಗಳನ್ನು ಕ್ಷಯ ರೋಗ ಮುಕ್ತ ಪಂಚಾಯತಿಗಳನ್ನಾಗಿ ರೂಪಿಸಲಾಗಿದೆ. ಅಲ್ಲದೇ ಕ್ಷಯ ನಿರ್ಮೂಲನಾ ಕಾರ್ಯಕ್ರಮದ ಅಡಿಯಲ್ಲಿ ಕ್ಷಯ ರೋಗಿಗಳಿಗೆ 98721 ಪೌಷ್ಠಿಕ ಆಹಾರದ ಕಿಟ್ ಗಳನ್ನ ವಿತರಿಸಲಾಗಿದೆ. ಸಾರ್ವಜನಿಕರು ಕ್ಷಯ ರೋಗ ಬರದಂತೆ ಮುನ್ನೆಚ್ಚರಿಕೆ ವಹಿಸುವ ನಿಟ್ಟಿನಲ್ಲಿ ಬಿಸಿಜಿ ಲಸಿಕಾ ಕಾರ್ಯಕ್ರಮದ ಲಾಭ ಪಡೆಯಬೇಕು ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ಬಿಸಿಜಿ ಲಸಿಕೆ ಸುರಕ್ಷಿತ ಲಸಿಕೆಯಾಗಿದ್ದು, ಸಾರ್ವಜನಿಕರು ಅಪನಂಬಿಕೆ ಪಡುವ ಅಗತ್ಯವಿಲ್ಲ ಎಂಬ ಸಂದೇಶ ರವಾನಿಸುವ ನಿಟ್ಟಿನಲ್ಲಿ ಸ್ವತಃ ಆರೋಗ್ಯ ಇಲಾಖೆ ನಿರ್ದೇಶಕಿ ತ್ರಿವೇಣಿ ಅವರು ಸೇರಿದಂತೆ ಕ್ಷಯ ರೋಗಿಗಳಿಗೆ ಚಿಕಿತ್ಸೆ ನೀಡುವ ವೈದ್ಯರು ಕಾರ್ಯಕ್ರಮದಲ್ಲಿ ಬಿಸಿಜಿ ಲಸಿಕೆ ಪಡೆದರು.

BCG ಲಸಿಕೆ ಕಾರ್ಯಕ್ರಮಕ್ಕೆ ಸರ್ಕಾರ ಚಾಲನೆ
ಕ್ಷಯ ರೋಗ ಪತ್ತೆಗಾಗಿ ಆರೋಗ್ಯ ಇಲಾಖೆಯಿಂದ ಮನೆ ಮನೆ ಸಮೀಕ್ಷೆ

ಕರ್ನಾಟಕ ಕ್ಷಯ ಮುಕ್ತ ಕಾರ್ಯತಂತ್ರದ ಭಾಗವಾಗಿ ಎಲ್ಲಾ ಕ್ಷಯರೋಗಿಗಳಿಗೆ ಸಾರ್ವತ್ರಿಕವಾಗಿ ಚಿಕಿತ್ಸೆ ದೊರಕಿಸುವುದು ಮತ್ತು ಶೂನ್ಯ ಕ್ಷಯ ಮರಣದ ಗುರಿ ಹಾಕಿಕೊಳ್ಳಲಾಗಿದೆ.

ಕರ್ನಾಟಕ ರಾಜ್ಯದಲ್ಲಿ 2024 ರ ಸಾಲಿನಲ್ಲಿ 20 ಲಕ್ಷಕ್ಕೂ ಹೆಚ್ಚು ಸಂಭಾವ್ಯ ಕ್ಷಯರೋಗಿಗಳ ಕಫ ಪರೀಕ್ಷೆಗಳನ್ನು ಮಾಡಲಾಗಿದೆ ಹಾಗೂ ಖಾಸಗಿ ವಲಯದಿಂದ 28122 ಮತ್ತು ಸಾರ್ವಜನಿಕ ವಲಯದಿಂದ 49865 ಒಟ್ಟು 77987 ಕ್ಷಯರೋಗಿಗಳನ್ನು ದೃಢಪಡಿಸಿ ಪತ್ತೆ ಹಚ್ಚಲಾಗಿದೆ. ಈ ಸಂಖ್ಯೆಯು ವರ್ಷದಿಂದ ವರ್ಷಕ್ಕೆ ಇಳಿಮುಖವಾಗಿರುತ್ತದೆ. ಇವರಲ್ಲಿ ಶೇ. 4.5 ರಷ್ಟು ಔಷಧ ನಿರೋಧಕ ಕ್ಷಯರೋಗಿಗಳಾಗಿರುತ್ತಾರೆ.

ದೃಢಪಟ್ಟ ಎಲ್ಲಾ ಕ್ಷಯರೋಗಿಗಳಿಗೆ ಕನಿಷ್ಠ 6 ತಿಂಗಳ ಅವಧಿಯ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಕ್ಷಯ ರೋಗದಿಂದ ಉಂಟಾಗುವ ಮರಣ ಧರವನ್ನು ಶೇ 8% ರಿಂದ 6% ಇಳಿಸಲಾಗಿದೆ. ಇದುವರೆಗೂ 4787 ನಿಕ್ಷಯ್ ಮಿತ್ರರಿಂದ 98721 ಪೌಷ್ಠಿಕ ಆಹಾರದ ಕಿಟ್ ಗಳನ್ನು ಕ್ಷಯರೋಗಿಗಳಿಗೆ ವಿತರಿಸಲಾಗಿದೆ.

ಆಡಳಿತಾತ್ಮಕ ಕಾರ್ಯಸಾಧ್ಯತೆಗಾಗಿ, ರಾಜ್ಯವನ್ನು 32 ಜಿಲ್ಲಾ ಟಿಬಿ ಕೇಂದ್ರಗಳಾಗಿ (ಡಿಟಿಸಿ) ವಿಂಗಡಿಸಲಾಗಿದೆ. 32 DTC ಗಳನ್ನು 275 TB ಘಟಕಗಳಾಗಿ (TU) ವಿಂಗಡಿಸಲಾಗಿದೆ. ಪ್ರತಿ 2.5 ಲಕ್ಷ ಜನಸಂಖ್ಯೆಗೆ ಒಂದು ಕ್ಷಯ ಘಟಕ ಸ್ಥಾಪಿಸಲಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ 1450 ಮೈಕ್ರೋಸ್ಕೋಪಿಕ್ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಇದರ ಜೊತೆಗೆ ರಾಜ್ಯದಲ್ಲಿ 298 TrueNAT ಕೇಂದ್ರಗಳು ಹಾಗೂ 125 CBNAAT ಕೇಂದ್ರಗಳು ವಿವಿಧ ಆರೋಗ್ಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿವೆ.

ಯಾರು ಬಿಸಿಜಿ ಲಸಿಕೆ ಪಡೆಯಬಹುದು:

  • ಕಳೆದ 05 ವರ್ಷಗಳಲ್ಲಿ ಕ್ಷಯರೋಗಕ್ಕೆ ಒಳಗಾಗಿ ಚಿಕಿತ್ಸೆ ಪಡೆದವರು.

  • ಸಕ್ರಿಯ ಕ್ಷಯರೋಗಿಗಳ ನಿಕಟ ಸಂಪರ್ಕಿತರು.

  • ದೇಹ ಗಾತ್ರದ ಸೂಚ್ಯಾಂಕ 18 ಕ್ಕಿಂತ ಕಡಿಮೆ ಇರುವವರು.

  • ಸ್ವಯಂ ವರದಿ ಮಾಡುವ ಮಧುಮೇಹಿಗಳು.

  • ಸ್ವಯಂ ವರದಿ ಮಾಡುವ ಧೂಮಪಾನಿಗಳು..

  • 60 ವರ್ಷಕ್ಕಿಂತ ಮೇಲ್ಪಟ್ಟವರು ಒಂದು ಬಾರಿ ಮಾತ್ರ ಬಿಸಿಜಿ ಲಸಿಕೆ ಪಡೆಯಬಹುದಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com