ರಾಜ್ಯ ರಾಜಕಾರಣ ಮಾತ್ರವಲ್ಲದೆ ರಾಷ್ಟ್ರ ಮಟ್ಟದಲ್ಲೂ ಭಾರಿ ಸದ್ದು ಮಾಡುತ್ತಿರುವ ಹನಿಟ್ರ್ಯಾಪ್ ಪ್ರಕರಣದ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸುವಂತೆ ಸಹಕಾರ ಸಚಿವ ಕೆಎನ್ ರಾಜಣ್ಣ ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರನ್ನು ಭೇಟಿ ಮಾಡಿ ಲಿಖಿತ ಮನವಿ ಸಲ್ಲಿಸಿದ್ದಾರೆ. ಬಳಿಕ ರಾಜಣ್ಣ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಪರಮೇಶ್ವರ ಈ ವಿಚಾರದಲ್ಲಿ ನಾನು ದೂರು ಸ್ವೀಕರಿಸಲು ಸಾಧ್ಯವಿಲ್ಲ. ಪೊಲೀಸ್ ಠಾಣೆಯಲ್ಲೇ ದೂರು ಸಲ್ಲಿಸಬೇಕು. ನಾನು ಮನವಿ ಮಾತ್ರ ಸ್ವೀಕರಿಸಿದ್ದೇನೆ. ಈ ಮನವಿ ಆಧಾರದ ಮೇಲೆ ಕಾನೂನು ತಜ್ಞರ ಜೊತೆ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿ ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ. ಬಳಿಕ ಮಾತನಾಡಿದ ರಾಜಣ್ಣ ಅವರು, ಹನಿಟ್ರ್ಯಾಪ್ ಸಂಬಂಧ ಸದನದಲ್ಲಿ ನನ್ನ ಹೆಸರನ್ನು ಪ್ರಸ್ತಾಪಿಸಲಾಗಿತ್ತು. ಆ ಕಾರಣದಿಂದ ನಾನು ದೂರು ಸಲ್ಲಿಸಿದ್ದೇನೆ. ಈ ರೀತಿಯ ಕೆಟ್ಟ ಚಾಳಿ ಸಾರ್ವಜನಿಕ ಜೀವನದಲ್ಲಿ ಮುಂದುವರೆಯಬಾರದು ಎಂದು ಹೇಳಿದ್ದಾರೆ. ನನಗೆ ಎರಡು ಬಾರಿ ಹನಿಟ್ರ್ಯಾಪ್ ಯತ್ನ ನಡೆದಿದ್ದು, 'ಎರಡು ಬಾರಿ ಬಂದಾಗ ಹುಡುಗಿಯರು ಬೇರೆ ಬೇರೆ ಆಗಿದ್ದರು. ಆದರೆ ಎರಡು ಬಾರಿಯೂ ಒಬ್ಬನೇ ಹುಡುಗ ಬಂದಿದ್ದ ಎಂದು ಹನಿಟ್ರ್ಯಾಪ್ ಕಥೆಯನ್ನು ಬಿಚ್ಚಿಟ್ಟಿದ್ದಾರೆ.
ಫೇಸ್‌ಬುಕ್ ಪೋಸ್ಟ್ಗೆ ಕಮೆಂಟ್ ಮಾಡಿದ್ದ ವ್ಯಕ್ತಿಗೆ ಸಚಿವ ಭೈರತಿ ಸುರೇಶ್ ಫೇಸ್ ಬುಕ್ ಖಾತೆಯಿಂದ ಕೊಳಕು ಭಾಷೆಯಲ್ಲಿ ನಿಂದಿಸಿರುವ ಸ್ಕ್ರೀನ್‌ಶಾಟ್‌ಗಳು ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ. ನೀರು ಉಚಿತ ಪೂರೈಸುವ ಟ್ಯಾಂಕರ್ಗಳಿಗೆ ಚಾಲನೆ ನೀಡಿರುವ ಬಗ್ಗೆ ಸಚಿವ ಬೈರತಿ ಸುರೇಶ್ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದರು. ಈ ಪೋಸ್ಟ್ಗೆ ವ್ಯಕ್ತಿಯೊಬ್ಬ, ಇದೆಲ್ಲಾ ನಾಟಕ, ಜನ ಮೂರ್ಖರೆಂದು ಕಮೆಂಟ್ ಮಾಡಿದ್ದರು. ನಿನ್ನ ಅಡ್ರೆಸ್ ಕೊಡು ಹೊಡೆದು ಹಾಕ್ತೀನಿ ಎಂದು ಸಚಿವರು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಇದರ ಬೆನ್ನಲ್ಲೇ ಕಮೆಂಟ್ಗಳನ್ನು ಡಿಲೀಟ್ ಮಾಡಲಾಗಿದೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಸಚಿವ ಭೈರತಿ ಸುರೇಶ್ ನನ್ನ ಫೇಸ್ಬುಕ್ ಖಾತೆ ಹ್ಯಾಕ್ ಆಗಿದೆ. ಈ ರೀತಿಯ ಮೆಸೇಜ್‌ಗಳಿಗೆ ಯಾರು ಕೂಡ ಅನ್ಯತಾ ಭಾವಿಸಬೇಡಿ ಎಂದು ಹೇಳಿದ್ದಾರೆ.
ಮಹತ್ವದ ಬೆಳವಣಿಗೆಯೊಂದರಲ್ಲಿ, ವಿಜಯಪುರ ನಗರ ಪಾಲಿಕೆಯ ಎಲ್ಲಾ 35 ಸದಸ್ಯರನ್ನು ಅನರ್ಹಗೊಳಿಸಿ ಬೆಳಗಾವಿ ಪ್ರಾದೇಶಿಕ ಆಯುಕ್ತ ಸಂಜಯ್ ಶೆಟ್ಟೆಣ್ಣವರ್ ಆದೇಶ ಹೊರಡಿಸಿದ್ದಾರೆ. ಬಿಜೆಪಿಯ 17, ಕಾಂಗ್ರೆಸ್‌ನ 10, ಜೆಡಿಎಸ್‌ನ ಒಬ್ಬರು, ಎಂಐಎಂನ ಇಬ್ಬರು ಮತ್ತು ಐದು ಸ್ವತಂತ್ರ ಸದಸ್ಯರು ಅನರ್ಹಗೊಂಡಿದ್ದಾರೆ. ಇವರೆಲ್ಲರೂ 2022 ರ ಪುರಸಭೆ ಚುನಾವಣೆಯಲ್ಲಿ ಆಯ್ಕೆಯಾಗಿದ್ದರು. ಚುನಾವಣೆಯಲ್ಲಿ ಆಸ್ತಿ ಘೋಷಣೆ ಸಂಬಂಧಿತ ಪ್ರಕರಣದಲ್ಲಿ ಮಾಜಿ ಸದಸ್ಯರ ಅರ್ಜಿಯನ್ನು ಪರಿಗಣಿಸಿದ ಬೀಳಗಿ ಕಲಬುರಗಿ ಪೀಠ, ಸರ್ಕಾರಕ್ಕೆ ಕ್ರಮ ಕೈಗೊಳ್ಳಲು ಸೂಚಿಸಿತ್ತು. ಈ ಹಿನ್ನೆಲೆ ಅನರ್ಹಗೊಳಿಸಲಾಗಿದೆ.
ಕರ್ನಾಟಕ ರಾಜ್ಯವನ್ನು ಕ್ಷಯ ರೋಗ ಮುಕ್ತ ರಾಜ್ಯವನ್ನಾಗಿ ರೂಪಿಸುವತ್ತ ಆರೋಗ್ಯ ಇಲಾಖೆ, ಇದೀಗ BCG ಲಸಿಕೆ ಹಾಕುವ ಬೃಹತ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದೆ. ವಿಶ್ವ ಕ್ಷಯರೋಗ ದಿನವಾದ ಇಂದು ಬಸಿಜಿ ಲಸಿಕಾ ಕಾರ್ಯಕ್ರಮಕ್ಕೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಚಾಲನೆ ನೀಡಿದರು. ಬಳಿಕ ಮಾತನಾಡಿದ ಸಚಿವರು, ರಾಜ್ಯದಲ್ಲಿ 16 ಜಿಲ್ಲೆಗಳಲ್ಲಿ ಬಸಿಜಿ ಲಸಿಕೆ ಹಾಕುವ ಕಾರ್ಯಕ್ರಮ ಕೈಗೆತ್ತಿಕೊಳ್ಳಲಾಗಿದ್ದು, ಕ್ಷಯ ರೋಗ ಬರದಂತೆ ತಡೆಯುವಲ್ಲಿ ಈ ಕಾರ್ಯಕ್ರಮ ಮಹತ್ವದ ಪಾತ್ರ ವಹಿಸಲಿದೆ ಎಂದರು. ಈಗಾಗಲೇ ರಾಜ್ಯದಲ್ಲಿ 1060 ಗ್ರಾಮ ಪಂಚಾಯತಿಗಳನ್ನ ಕ್ಷಯ ರೋಗ ಮುಕ್ತ ಪಂಚಾಯತಿಗಳನ್ನಾಗಿ ರೂಪಿಸಲಾಗಿದೆ. ಅಲ್ಲದೇ ಕ್ಷಯ ನಿರ್ಮೂಲನಾ ಕಾರ್ಯಕ್ರಮದ ಅಡಿಯಲ್ಲಿ ಕ್ಷಯ ರೋಗಿಗಳಿಗೆ 98721 ಪೌಷ್ಠಿಕ ಆಹಾರದ ಕಿಟ್ ಗಳನ್ನ ವಿತರಿಸಲಾಗಿದೆ ಎಂದರು.
ಲಾಂಗ್ ಹಿಡಿದು ರೀಲ್ಸ್ ಮಾಡಿದ್ದ ಬಿಗ್ ಬಾಸ್ ಕನ್ನಡದ 10 ನೇ ಆವೃತ್ತಿಯ ಸ್ಪರ್ಧಿಗಳಾದ ವಿನಯ್ ಗೌಡ, ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪೊಲೀಸ್ ಠಾಣೆಗೆ ಹಾಜರಾದ ಆರೋಪಿ ವಿನಯ್, ರಜತ್ ಇಬ್ಬರನ್ನು ಪೊಲೀಸರು ಮಂಗಳವಾರ ಮತ್ತೆ ವಶಕ್ಕೆ ಪಡೆದಿದ್ದಾರೆ. ಠಾಣೆಯಲ್ಲಿ ಕೆಲ ಹೊತ್ತು ವಿಚಾರಣೆ ನಡೆಸಿದ ಪೊಲೀಸರು ನಾಗರಬಾವಿಯ ಅಕ್ಷಯ್ ಸ್ಟುಡಿಯೋದಲ್ಲಿ ಪೊಲೀಸರು ಸ್ಥಳ ಮಹಜರು ಮಾಡಿದ್ದಾರೆ. ಮಹಜರು ನಂತರ ಪೊಲೀಸರಿಗೆ ಆರೋಪಿಗಳು ನೀಡಿದ ಹೇಳಿಕೆ ಹಾಗೂ ಜಪ್ತಿ ಮಾಡಿರುವ ಆಯುಧದ ಮೇಲೆ ಅನುಮಾನ ಬಂದಲ್ಲಿ ಈ ಪ್ರಕರಣದಲ್ಲಿ ಸಾಕ್ಷ್ಯನಾಶ ಸೆಕ್ಷನ್ ಹಾಕುವ ಸಾಧ್ಯತೆ ಇದೆ.
Advertisement