
ನವದೆಹಲಿ: ಕರ್ನಾಟಕದಲ್ಲಿ ಸಚಿವರು, ಶಾಸಕರು, ಸಾರ್ವಜನಿಕ ಸೇವಕರು ಮತ್ತು ನ್ಯಾಯಾಧೀಶರನ್ನು ಹನಿಟ್ರ್ಯಾಪ್ ಮಾಡಲಾಗಿದೆ ಎಂಬ ಆರೋಪದ ಬಗ್ಗೆ ಸಿಬಿಐ ಅಥವಾ ಎಸ್‌ಐಟಿಯಿಂದ ಸ್ವತಂತ್ರ ತನಿಖೆ ನಡೆಸಬೇಕೆಂದು ಕೋರಿ ಸಲ್ಲಿಸಲಾಗಿದ್ದ ಪಿಐಎಲ್ ಅನ್ನು ಸುಪ್ರೀಂ ಕೋರ್ಟ್ ಬುಧವಾರ ವಜಾಗೊಳಿಸಿದೆ.
ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್, ಸಂಜಯ್ ಕರೋಲ್ ಮತ್ತು ಸಂದೀಪ್ ಮೆಹ್ತಾ ಅವರ ಪೀಠ, ಇದನ್ನು "ರಾಜಕೀಯ ಅಸಂಬದ್ಧ" ಎಂದು ಹೇಳಿ ಅರ್ಜಿಯನ್ನು ತಿರಸ್ಕರಿಸಿದೆ.
"ನೀವು ಜಾರ್ಖಂಡ್ ನಿವಾಸಿ. ಆ ರಾಜ್ಯದಲ್ಲಿ ಏನು ನಡೆಯುತ್ತಿದೆ ಎಂಬುದರ ಬಗ್ಗೆ ನೀವು ಏಕೆ ತಲೆಕೆಡಿಸಿಕೊಳ್ಳುತ್ತಿದ್ದೀರಿ? ಅವರು ಇದನ್ನು ನೋಡಿಕೊಳ್ಳುವಷ್ಟು ಸಮರ್ಥರು" ಎಂದು ನ್ಯಾಯಮೂರ್ತಿ ನಾಥ್ ಅವರು, ಅರ್ಜಿದಾರರ ಪರ ವಕೀಲ ಬರುಣ್ ಸಿನ್ಹಾಗೆ ಹೇಳಿದರು.
ಹನಿಟ್ರ್ಯಾಪ್ ಪ್ರಕರಣದ ಸುತ್ತಲಿನ ಆರೋಪಗಳು ಗಂಭೀರವಾಗಿವೆ ಮತ್ತು ನ್ಯಾಯಾಂಗ ತನಿಖೆಯ ಅಗತ್ಯವಿದೆ ಎಂದು ವಕೀಲರು ಹೇಳಿದಾಗ, "ನೀವು ಹನಿಟ್ರ್ಯಾಪ್‌ನಲ್ಲಿ ಏಕೆ ಬೀಳಬೇಕು. ನೀವು ಹನಿಟ್ರ್ಯಾಪ್‌ನಲ್ಲಿ ಬಿದ್ದರೆ, ಅವರು ನಿಮಗೆ ತೊಂದರೆ ಕೊಡುತ್ತಾರೆ" ಎಂದು ಪೀಠ ಹೇಳಿದೆ.
ನ್ಯಾಯಾಧೀಶರು ಸಹ ಹನಿಟ್ರ್ಯಾಪ್‌ನಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪಗಳಿವೆ ಎಂದು ವಕೀಲರು ಹೇಳಿದಾಗ, "ನ್ಯಾಯಾಧೀಶರ ಬಗ್ಗೆ ಮರೆತುಬಿಡಿ, ಅವರು ತಮ್ಮನ್ನು ತಾವು ನೋಡಿಕೊಳ್ಳುತ್ತಾರೆ" ಎಂದು ನ್ಯಾಯಮೂರ್ತಿ ನಾಥ್ ಉತ್ತರಿಸಿದರು.
ಕೇಂದ್ರ ತನಿಖಾ ಸಂಸ್ಥೆ(ಸಿಬಿಐ) ಅಥವಾ ಕರ್ನಾಟಕ ಸರ್ಕಾರದ ನಿಯಂತ್ರಣಕ್ಕೆ, ಪ್ರಭಾವಕ್ಕೆ ಒಳಪಡದ ಪೊಲೀಸ್ ಅಧಿಕಾರಿಗಳನ್ನು ಒಳಗೊಂಡ ವಿಶೇಷ ತನಿಖಾ ತಂಡ(ಎಸ್‌ಐಟಿ)ದಿಂದ ಸ್ವತಂತ್ರ ತನಿಖೆ ನಡೆಸಬೇಕೆಂದು ಕೋರಿ ಜಾರ್ಖಂಡ್ ನಿವಾಸಿ ಬಿನಯ್ ಕುಮಾರ್ ಸಿಂಗ್ ಪಿಐಎಲ್ ಸಲ್ಲಿಸಿದ್ದರು.
ಕಳೆದ ವಾರ, ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರು, ರಾಜ್ಯದಲ್ಲಿ 48 ಜನರಿಗೆ "ಹನಿ ಟ್ರ್ಯಾಪ್" ಮಾಡಲಾಗಿದೆ ಮತ್ತು ತಮ್ಮನ್ನು ಸಹ ಹನಿ ಟ್ರ್ಯಾಪ್ ಮಾಡಲು ಯತ್ನಿಸಲಾಗಿದೆ ಎಂದು ಹೇಳಿದ್ದರು. ಇದು ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿತ್ತು.
Advertisement