
ಬೆಂಗಳೂರು: ರಾಜ್ಯ ರಾಜಕಾರಣ ಮಾತ್ರವಲ್ಲದೆ ರಾಷ್ಟ್ರ ಮಟ್ಟದಲ್ಲೂ ಭಾರಿ ಸದ್ದು ಮಾಡಿದ ಹನಿಟ್ರ್ಯಾಪ್ ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಂಡಿದ್ದು, ನನ್ನ ಮೇಲೆ ಹನಿಟ್ರ್ಯಾಪ್ ಯತ್ನ ನಡೆದಿಲ್ಲ. ಬದಲಾಗಿ, ಕೊಲೆ ಮಾಡಲು ಸುಪಾರಿ ನೀಡಲಾಗಿದೆ ಎಂದು ಸಚಿವ ಕೆ ಎನ್ ರಾಜಣ್ಣ ಅವರ ಪುತ್ರ, ವಿಧಾನಪರಿಷತ್ ಸದಸ್ಯ ರಾಜೇಂದ್ರ ಅವರು ಗುರುವಾರ ಗಂಭೀರ ಆರೋಪ ಮಾಡಿದ್ದಾರೆ.
ಇಂದು ಬೆಂಗಳೂರಿನಲ್ಲಿ ಪೊಲೀಸ್ ಮಹಾ ನಿರ್ದೇಶಕರ ಕಚೇರಿಗೆ ತೆರಳಿ ದೂರು ನೀಡಿದ ರಾಜೇಂದ್ರ ಅವರು, ನಾನು ಹನಿಟ್ರ್ಯಾಪ್ ಯತ್ನದ ಬಗ್ಗೆ ದೂರು ಕೊಡಲು ಬಂದಿಲ್ಲ. ನನ್ನ ಕೊಲೆಗೆ ಸುಪಾರಿ ಕೊಟ್ಟಿದ್ದಾರೆ. ಆ ಬಗ್ಗೆ ದೂರು ನೀಡಿದ್ದೇನೆ ಎಂದರು.
ಕಳೆದ ಒಂದು ವಾರ ಅಥವಾ ಹತ್ತು ದಿನದಿಂದ ಕೊಲೆ ಪ್ರಯತ್ನ ನಡೆಯುತ್ತಿದೆ. ಹೀಗಾಗಿ ನಾನು ಡಿಜಿಪಿ ಅವರನ್ನು ಭೇಟಿ ಮಾಡಿದ್ದೇನೆ. ಇದರ ಹಿಂದೆ ಯಾರೆಲ್ಲ ಇದ್ದಾರೆ ಎಂಬುದರ ಬಗ್ಗೆ ತನಿಖೆ ಆಗಬೇಕು ಅಂತ ಗೃಹ ಸಚಿವರಿಗೆ ಮನವಿ ಮಾಡಿದ್ದೆ. ಈಗ ಡಿಜಿಪಿ ಅವರನ್ನು ಭೇಟಿ ಮಾಡಿ ದೂರು ನೀಡಿದ್ದೇನೆ ಎಂದರು.
ನನ್ನ ಮೇಲೆ ಯಾವುದೇ ಹನಿಟ್ರ್ಯಾಪ್ ಯತ್ನ ನಡೆದಿಲ್ಲ. ಆದರೆ ಫೋನ್ ಕಾಲ್ ಗಳು ಬರ್ತಾ ಇದ್ದವು. ಕಳೆದ ನವೆಂಬರ್ 16 ರಂದು ಮಗಳ ಹುಟ್ಟುಹಬ್ಬ ಇತ್ತು. ಅವತ್ತು ಮನೆಗೆ ಶಾಮೀಯಾನ ಹಾಕಲು ಬಂದವರು ನನ್ನ ಮೇಲೆ ದಾಳಿ ಮಾಡುವ ಉದ್ದೇಶದಿಂದ ಬಂದಿದ್ದರು ಎಂದು ಆರೋಪಿಸಿದರು.
ಅಂದು ಅವರು ಕೊಲೆ ಮಾಡಬೇಕು ಅಂತ ನಮ್ಮ ಮನೆಗೆ ಬಂದಿದ್ದರು. ಈ ವಿಚಾರ ನನಗೆ ಜನವರಿಯಲ್ಲಿ ಗೊತ್ತಾಗಿದೆ. ಒಂದು ವಾಯ್ಸ್ ರೆಕಾರ್ಡ್ ಬಂದಿತ್ತು. ನನ್ನ ಸೋರ್ಸ್ ಮೂಲಕ ಕೊಲೆಗೆ ಸುಪಾರಿ ಕೊಟ್ಟ ವಿಚಾರ ಬಯಲಾಯ್ತು. ಆ ವಾಯ್ಸ್ ನಲ್ಲಿ 5 ಲಕ್ಷ ಹಣ ನೀಡಿರುವ ಬಗ್ಗೆ ಮಾತಾಡಿದ್ದಾರೆ. ನನ್ನ ಕೊಲೆಗೆ ಸುಫಾರಿ ಕೊಟ್ಟಿದ್ದಾರೆ ಎಂದು ರಾಜೇಂದ್ರ ಆರೋಪಿಸಿದರು.
ಈ ಎಲ್ಲಾ ವಿಚಾರವನ್ನು ನಾನು ಡಿಜಿಪಿ ಅವರಿಗೆ ಹೇಳಿದ್ದೇನೆ, ಅವರು ಬಹುಶಃ ತುಮಕೂರು ಎಸ್ಪಿಗೆ ಹೇಳ್ತಾರೆ. ಅಲ್ಲಿಯೇ ತನಿಖೆ ಮಾಡ್ತಾರೆ. ನಾನು ಹನಿಟ್ರ್ಯಾಪ್ ಬಗ್ಗೆ ಯಾವುದೇ ದೂರನ್ನ ನೀಡಿಲ್ಲ. ನನ್ನ ಕೊಲೆಗೆ ಸುಫಾರಿ ಪಡೆದಿದ್ದಾರೆ ಅಂತ ದೂರು ನೀಡಿದ್ದೇನೆ. ನಾಳೆ ತುಮಕೂರು ಎಸ್ ಪಿ ಕಚೇರಿಗೂ ಭೇಟಿ ನೀಡಿ ದೂರು ಕೊಡತ್ತೇನೆ ಎಂದು ರಾಜೇಂದ್ರ ಅವರು ತಿಳಿಸಿದ್ದಾರೆ.
Advertisement