
ಬೆಂಗಳೂರು: ಮಚ್ಚು ಹಿಡಿದು ರೀಲ್ಸ್ ಮಾಡಿ ಜೈಲು ಪಾಲಾಗಿದ್ದ ಕನ್ನಡ ಬಿಗ್‌ಬಾಸ್‌ನ ಮಾಜಿ ಸ್ಪರ್ಧಿಗಳಾದ ರಜತ್ ಕಿಶನ್ ಹಾಗೂ ವಿನಯ್ ಗೌಡ ಅವರಿಗೆ ಕೋರ್ಟ್ ಶುಕ್ರವಾರ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ಜಾಮೀನು ಕೋರಿ ಬಂಧಿತ ಆರೋಪಿಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ 24ನೇ ಎಸಿಜೆಎಂ ಕೋರ್ಟ್, ತಲಾ 10 ಸಾವಿರ ರೂಪಾಯಿ ಶ್ಯೂರಿಟಿ ಮೇಲೆ ಜಾಮೀನು ನೀಡಿ ಆದೇಶಿಸಿದೆ.
ಸದ್ಯ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ರಜನ್ ಮತ್ತು ವಿನಯ್ ಗೌಡ ಪರ ವಕೀಲರು ಜಾಮೀನು ಪ್ರಕ್ರಿಯೆಯನ್ನು ಪೂರ್ಣಗೊಳಿಸಿದರೆ ಇಂದೇ ಜೈಲಿನಿಂದ ಬಿಡುಗಡೆಯಾಗುವ ಸಾಧ್ಯತೆ ಇದೆ.
ಮಾರ್ಚ್ 26 ರಂದು ಈ ಇಬ್ಬರು ಆರೋಪಿಗಳನ್ನು ಕೋರ್ಟ್ ಮೂರು ದಿನ ಪೊಲೀಸ್ ಕಸ್ಟಡಿಗೆ ನೀಡಿತ್ತು. ಅಲ್ಲದೆ ಕಸ್ಟಡಿ ಅವಧಿ ಮುಗಿದ ಬಳಿಕ ಅಂದರೆ, ಮಾರ್ಚ್ 28ರಂದು ಸಂಜೆ 4 ಗಂಟೆಗೆ ಇಬ್ಬರನ್ನು ಕೋರ್ಟ್ಗೆ ಹಾಜರುಪಡಿಸುವಂತೆ ಸೂಚಿಸಿತ್ತು. ಅದರಂತೆ ಪೊಲೀಸರು ಇಂದು ಆರೋಪಿಗಳನ್ನು ಕೋರ್ಟ್ ಗೆ ಹಾಜರುಪಡಿಸಿದ್ದರು.
ಕಳೆದ ಮಾರ್ಚ್ 20ರಂದು ನಾಗರಬಾವಿಯ ಅಕ್ಷಯ ಸ್ಟುಡಿಯೋ ಬಳಿ ಮಾರಕಾಸ್ತ್ರ ಹಿಡಿದು ಸುಮಾರು 18 ಸೆಕೆಂಡ್‌ಗಳ ರೀಲ್ಸ್ ವಿಡಿಯೋ ಮಾಡಿದ್ದು, ಇದನ್ನು ಬುಜ್ಜಿ ಹೆಸರಿನಲ್ಲಿ ಇನ್‌ಸ್ಟಾಗ್ರಾಂ ಖಾತೆಗೆ ರಜತ್ ಅಪ್‌ಲೋಡ್ ಮಾಡಿದ್ದರು. ವಿಡಿಯೋ ವೈರಲ್ ಆಗುತ್ತಿದ್ದಂತೆ ಬಸವೇಶ್ವನಗರ ಪೊಲೀಸರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ಸೋಮವಾರ ಇಬ್ಬರು ಆರೋಪಿಗಳನ್ನು ವಿಚಾರಣೆಗೊಳಪಡಿಸಿದ್ದರು.
ತಾವು ಮಾಡಿದ ವಿಡಿಯೋದಲ್ಲಿ ನಕಲಿ ಮಚ್ಚು ಉಪಯೋಗಿಸಲಾಗಿದೆ ಎಂದು ಹೇಳಿ ಫೈಬರ್ ನಿಂದ ತಯಾರಿಸಿದ ಮಚ್ಚನ್ನು ಆರೋಪಿಗಳು ಪೊಲೀಸರಿಗೆ ನೀಡಿದ್ದರು. ಆದರೆ ತನಿಖೆ ವೇಳೆ ವಿಡಿಯೋದಲ್ಲಿ ಬಳಕೆಯಾಗಿರುವ ಮಚ್ಚಿಗೂ ಆರೋಪಿಗಳು ನೀಡಿದ್ದ ಮಚ್ಚಿಗೂ ತಾಳೆಯಾಗದ ಹಿನ್ನೆಲೆ ಪೊಲೀಸರು, ಆರೋಪಿಗಳನ್ನು ಮಂಗಳವಾರ ಮತ್ತೆ ವಶಕ್ಕೆ ಪಡೆದು ರೀಲ್ಸ್ನಲ್ಲಿ ಬಳಕೆಯಾಗಿರುವ ಮಚ್ಚು ತೋರಿಸುವಂತೆ ಸ್ಥಳ ಮಹಜರು ಮಾಡಿದ್ದರು. ಅಲ್ಲದೆ ಬುಧವಾರ ಆರೋಪಿಗಳನ್ನು ಕೋರ್ಟ್ ಗೆ ಹಾಜರುಪಡಿಸಿದ್ದರು.
Advertisement