
ಬೆಂಗಳೂರು: ನಟಿ ರನ್ಯಾ ರಾವ್ ಅವರ ಚಿನ್ನದ ಕಳ್ಳಸಾಗಣೆ ಪ್ರಕರಣದ ತನಿಖೆ ನಡೆಸುತ್ತಿರುವ ಗುಪ್ತಚರ ಇಲಾಖೆ(DRI) ಈ ಹಿಂದೆ ಸುಮಾರು 14.56 ಕೆಜಿ ಚಿನ್ನವನ್ನು ಕಳ್ಳಸಾಗಣೆ ಮಾಡಿರುವುದನ್ನು ಪತ್ತೆಹಚ್ಚಿದೆ. ದುಬೈಯಿಂದ ಕಳ್ಳಸಾಗಣೆ ಮಾಡಿದ ಚಿನ್ನವನ್ನು ಸಾಹಿಲ್ ಸಕಾರಿಯಾ ಜೈನ್ ರನ್ಯಾ ರಾವ್ ಭಾರತದಲ್ಲಿ ಮಾರಾಟ ಮಾಡಲು ಸಹಾಯ ಮಾಡುತ್ತಿದ್ದರು. ಇದರಿಂದಾಗಿ ಸರ್ಕಾರದ ಬೊಕ್ಕಸಕ್ಕೆ 4.45 ಕೋಟಿ ರೂಪಾಯಿ ಸುಂಕ ನಷ್ಟವಾಗಿದೆ ಎಂದು ಕೇಂದ್ರ ತನಿಖಾ ಸಂಸ್ಥೆ ಹೇಳಿಕೊಂಡಿದೆ.
ಈ ಪ್ರಕರಣದಲ್ಲಿ ಮೂರನೇ ಆರೋಪಿಯಾಗಿರುವ ಸಾಹಿಲ್ ಸಕಾರಿಯಾ ಜೈನ್ ಭಾರತದಲ್ಲಿ ಕಳ್ಳಸಾಗಣೆ ಮಾಡಿದ ಚಿನ್ನವನ್ನು ಮಾರಾಟ ಮಾಡುವಲ್ಲಿ ಮತ್ತು ಹವಾಲಾ ವಹಿವಾಟುಗಳನ್ನು ಸುಗಮಗೊಳಿಸುವಲ್ಲಿ ಭಾಗಿಯಾಗಿದ್ದರು ಎಂದು ಮೂಲವೊಂದು ತಿಳಿಸಿದೆ.
ಮಾರ್ಚ್ 3 ರಂದು ರನ್ಯಾ ರಾವ್ ರಿಂದ ವಶಪಡಿಸಿಕೊಂಡ ಚಿನ್ನವನ್ನು ವಿಲೇವಾರಿ ಮಾಡುವ ಯೋಜನೆಯಲ್ಲಿದ್ದರು. ರನ್ಯಾ ಅವರು ದುಬೈ ಫೋನ್ ಸಂಖ್ಯೆಯ ಮೂಲಕ ಸಾಹಿಲ್ ಜೈನ್ ನನ್ನು ಸಂಪರ್ಕಿಸಿ ಚಿನ್ನವನ್ನು ವಿಲೇವಾರಿ ಮಾಡುವ ಬಗ್ಗೆ ಮಾತುಕತೆ ನಡೆಸಿದ್ದರು.
ಈ ವರ್ಷದ ಆರಂಭದಲ್ಲಿ ಜನವರಿ 11 ರಂದು ರನ್ಯಾ ಭಾರತಕ್ಕೆ ಚಿನ್ನವನ್ನು ಕಳ್ಳಸಾಗಣೆ ಮಾಡಿದ್ದರು. ಜನವರಿ 11 ರಂದು ಅವರು ಸುಮಾರು 14.56 ಕೆಜಿ ತೂಕದ, 11.55 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಚಿನ್ನವನ್ನು ಕಳ್ಳಸಾಗಣೆ ಮಾಡಿದ್ದರು. ಸಾಹಿಲ್ ಜೈನ್ ಅವರು ಅದನ್ನು ಮಾರಾಟ ಮಾಡಲು ಸಹಾಯ ಮಾಡಿದ್ದರು. ಇದರಿಂದಾಗಿ 4.46 ಕೋಟಿ ರೂಪಾಯಿ ಸರ್ಕಾರಕ್ಕೆ ಕಸ್ಟಮ್ಸ್ ಸುಂಕ ನಷ್ಟವಾಗಿತ್ತು ಎಂದು ಮೂಲಗಳು ಹೇಳುತ್ತವೆ.
ದುಬೈನಿಂದ 14.8 ಕಿಲೋಗ್ರಾಂಗಳಷ್ಟು ಚಿನ್ನವನ್ನು ಕಳ್ಳಸಾಗಣೆ ಮಾಡಿದ ಆರೋಪದ ಮೇಲೆ ರನ್ಯಾ ರಾವ್ ಅವರನ್ನು ಮಾರ್ಚ್ 3 ರಂದು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (KIAD) ಡಿಆರ್‌ಐ ಅಧಿಕಾರಿಗಳು ಬಂಧಿಸಿದ್ದರು.
ಭಾರತಕ್ಕೆ ಚಿನ್ನದ ಕಳ್ಳಸಾಗಣೆಯಲ್ಲಿ ರನ್ಯಾ ಭಾಗಿಯಾಗಿದ್ದಾರೆ ಎಂಬ ಸುಳಿವು ದೊರೆತು ಬಂಧನವಾಯಿತು. ಡಿಆರ್‌ಐ ಅಧಿಕಾರಿಗಳು ವಿಮಾನ ನಿಲ್ದಾಣಕ್ಕೆ ಬಂದ ಕೂಡಲೇ ರನ್ಯಾ ರಾವ್ ಅವರನ್ನು ತಡೆಯಲು ತಂಡವನ್ನು ನಿಯೋಜಿಸಿದ್ದರು ಮತ್ತು ಇಳಿದ ತಕ್ಷಣ ಅವರನ್ನು ವಶಕ್ಕೆ ಪಡೆಯಲಾಯಿತು.
Advertisement