
ನವದೆಹಲಿ: ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆ ವಿಷಯದಲ್ಲಿ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ತೋರುತ್ತಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.
ದೆಹಲಿಯ ಕರ್ನಾಟಕ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಮ್ಮ ಸಂಸದರು ರಾಜ್ಯದ ಸ್ವಾಭಿಮಾನ ಹಾಗೂ ಗೌರವ ಉಳಿಸಲು ಹೋರಾಟ ಮಾಡುತ್ತಿದ್ದಾರೆ. ರಾಯಚೂರಿನಲ್ಲಿ ಏಮ್ಸ್ ಆರಂಭಿಸಬೇಕು ಎಂದು ಪ್ರಸ್ತಾಪ ಮಾಡಲಾಗಿತ್ತು. ನಾನು ವೈದ್ಯಕೀಯ ಶಿಕ್ಷಣ ಸಚಿವನಾಗಿದ್ದಾಗಲೂ ಪ್ರಸ್ತಾವನೆ ಸಲ್ಲಿಸಲಾಗಿತ್ತು. ರಾಯಚೂರಿನಲ್ಲಿ ಜಾಗ ನೀಡುವುದು ಸೇರಿದಂತೆ ಎಲ್ಲ ರೀತಿಯ ಸಹಕಾರ ನೀಡಲು ರಾಜ್ಯ ಸರ್ಕಾರ ಒಪ್ಪಿತ್ತು. ಆದರೆ, ಕೇಂದ್ರ ಸರ್ಕಾರ ಸಹಕಾರ ನೀಡುತ್ತಿಲ್ಲಎಂದರು.
ಎಲ್ಲ ವಿಚಾರಗಳಲ್ಲೂ ಕೇಂದ್ರ ಸರ್ಕಾರವು ಕರ್ನಾಟಕದ ಬಗ್ಗೆ ಮಲತಾಯಿ ಧೋರಣೆ ತೋರುತ್ತಾ ಬಂದಿದೆ ಎಂಬುದಕ್ಕೆ ಇದೇ ಸಾಕ್ಷಿ. ಈ ಬಾರಿ ಬಜೆಟ್‌ನಲ್ಲಿ ಏಮ್ಸ್ ಘೋಷಣೆ ಮಾಡುತ್ತಾರೆ ಎಂದು ಭಾವಿಸಿದ್ದೆವು. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವಿದ್ದು, ನಮ್ಮ ರಾಜ್ಯಕ್ಕೆ ಏಮ್ಸ್ ನೀಡಲೇಬಾರದು ಎಂದು ಕೇಂದ್ರ ತೀರ್ಮಾನಿಸಿದಂತಿದೆ.
ಇದರ ವಿರುದ್ಧ ಸಂಸತ್ ಸದಸ್ಯರು ಹೋರಾಟಕ್ಕೆ ಮುಂದಾಗಿದ್ದಾರೆ. ಸಂಸದರಿಗೆ ಶಕ್ತಿ ತುಂಬಲು ಸರ್ಕಾರ ಕೂಡ ಹೋರಾಟ ಮಾಡಲಿದೆ. ರಾಯಚೂರಿಗೆ ಏಮ್ಸ್ ಘೋಷಣೆ ಮಾಡಬೇಕು ಎಂದು ನಾವು ಈಗಲೂ ಮನವಿ ಮಾಡುತ್ತೇವೆ ಎಂದು ಹೇಳಿದರು.
ಸಚಿವ ಸತೀಶ್ ಜಾರಕಿಹೊಳಿ ಅವರು ದೆಹಲಿಯಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿರುವ ಬಗ್ಗೆ ಕೇಳಿದಾಗ, “ನನಗೆ ಈ ವಿಚಾರವಾಗಿ ಏನೂ ಗೊತ್ತಿಲ್ಲ, ಅವರ ಬಳಿಯೇ ಕೇಳಿ. ಅವರು ಮಾತುಕತೆ ನಡೆಸಿರುವ ಬಗ್ಗೆ ನನ್ನನ್ನು ಕೇಳಿದರೆ ನಾನು ಏನು ಹೇಳಲಿ? ಅವರ ಭೇಟಿ ವಿಚಾರವಾಗಿ ನನಗಾಗಲಿ, ಸಿಎಂ ಅವರಿಗಾಗಲಿ ಮಾಹಿತಿ ನೀಡಿಲ್ಲ. ಇಲ್ಲಿ ಪಕ್ಷದ ವಿಚಾರ ಏನೂ ಇರುವುದಿಲ್ಲ. ರಾಷ್ಟ್ರೀಯ ಯೋಜನೆಗಳ ಬಗ್ಗೆ ಚರ್ಚೆ ಮಾಡಿರಬಹುದು. ಅವರಿಗೆ ಗೌರವ ಸಲ್ಲಿಸಲು ಹೋಗಿರಬಹುದು” ಎಂದು ತಿಳಿಸಿದರು. ಈ ಭೇಟಿ ಬಗ್ಗೆ ಅನೇಕ ರೀತಿಯಲ್ಲಿ ವ್ಯಾಖ್ಯಾನ ಮಾಡಲಾಗುತ್ತಿದೆ ಎಂದು ಕೇಳಿದಾಗ, “ಈ ಬಗ್ಗೆ ನೀವು (ಮಾಧ್ಯಮಗಳು) ವ್ಯಾಖ್ಯಾನ ಮಾಡುತ್ತಿದ್ದೀರಿ. ಬೇರೆ ಇನ್ಯಾವುದೇ ವ್ಯಾಖ್ಯಾನಗಳಿಲ್ಲ” ಎಂದು ತಿಳಿಸಿದರು.
ತಮ್ಮ ಮುತ್ತು ರತ್ನಗಳನ್ನು ಅವರು ಎಲ್ಲಾದರೂ ಇಟ್ಟುಕೊಳ್ಳಲಿ
ಬಿಜೆಪಿ ಪಕ್ಷದಿಂದ ಯತ್ನಾಳ್ ಅವರನ್ನು ಉಚ್ಛಾಟನೆ ಮಾಡಿರುವ ಬಗ್ಗೆ ಕೇಳಿದಾಗ, “ಅದು ಅವರ ಪಕ್ಷದ ಆಂತರಿಕ ವಿಚಾರ, ಅವರು ಏನಾದರೂ ಮಾಡಿಕೊಳ್ಳಲಿ. ನಾವು ಅದರಲ್ಲಿ ಯಾಕೆ ಹಸ್ತಕ್ಷೇಪ ಮಾಡಬೇಕು. ಅವರು ತಮ್ಮ ಮುತ್ತು ರತ್ನಗಳನ್ನು ಎಲ್ಲೆಲ್ಲಿ ಇಟ್ಟುಕೊಳ್ಳಬೇಕೋ ಅಲ್ಲಿ ಇಟ್ಟುಕೊಳ್ಳಲಿ” ಎಂದರು. ಸಚಿವ ಸಂಪುಟ ಸಭೆಯಲ್ಲಿ ಹನಿಟ್ರ್ಯಾಪ್ ವಿಚಾರ ಪ್ರಸ್ತಾಪವಾಗಲಿದೆ ಎಂದು ಕೇಳಿದಾಗ, “ನನಗೆ ಗೊತ್ತಿಲ್ಲ. ನಾನು ಸಿಎಂ ಅವರಿಗೆ ಕರೆ ಮಾಡಿ ಪಕ್ಷದ ಸಭೆ ಇದೆ ಎಂದು ಹೇಳಿ ದೆಹಲಿಗೆ ಬಂದಿದ್ದೇನೆ” ಎಂದು ತಿಳಿಸಿದರು.
Advertisement