
ಬೆಂಗಳೂರು: ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವ ಡಿಕೆ ಶಿವಕುಮಾರ್ ಅವರ ಕಲ್ಪನೆಯ ಕೂಸಾದ ಬ್ರಾಂಡ್ ಬೆಂಗಳೂರಿಗೆ ಬಿಬಿಎಂಪಿ ಬಜೆಟ್‌ನಲ್ಲಿ ಎರಡು ವರ್ಷಕ್ಕೆ 700 ಕೋಟಿ ಅಂದರೆ ಒಟ್ಟು 1,360 ಕೋಟಿ ರೂ. ಮೀಸಲಿಡಲಾಗಿದೆ.
2024-25ರಲ್ಲಿ ಇದಕ್ಕಾಗಿ ರೂ. 660 ಕೋಟಿ ರೂ.ಗಳನ್ನು ನಿಗದಿಪಡಿಸಿದ್ದ ಬಿಬಿಎಂಪಿ ಈ ವರ್ಷ 700 ಕೋಟಿ ರೂ. ಸೇರಿದಂತೆ ಒಟ್ಟಾರೇ ಬಜೆಟ್‌ನಲ್ಲಿ ಒಟ್ಟು 1,360 ಕೋಟಿ ರೂ. ಮೀಸಲಿಟ್ಟಿದೆ. ಕಳೆದ ಹಣಕಾಸು ವರ್ಷದಲ್ಲಿ ಬಿಬಿಎಂಪಿ ನಿಗದಿಪಡಿಸಿದ ಮೂರು ವರ್ಷಗಳ ಒಟ್ಟು ವೆಚ್ಚ ರೂ. 2,828 ಕೋಟಿ ಆಗಿತ್ತು.
ಬ್ರಾಂಡ್ ಬೆಂಗಳೂರಿನ ಹಣಕಾಸು ನಿರ್ವಹಣೆಗಾಗಿ ಎಸ್ಕ್ರೊ (escrow) ಖಾತೆಯನ್ನು ತೆರೆಯಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ. ಬ್ರ್ಯಾಂಡ್ ಬೆಂಗಳೂರಿಗೆ ವಿಶೇಷ ಹಂಚಿಕೆಯನ್ನು ಹೊರತುಪಡಿಸಿ, ಪಟ್ಟಿ ಮಾಡಲಾದ ಮತ್ತು ಕೈಗೆತ್ತಿಕೊಳ್ಳುತ್ತಿರುವ ಎಲ್ಲಾ ಕಾಮಗಾರಿಗಳು ನಗರದ ಇಮೇಜ್ ಮತ್ತು ಬ್ರ್ಯಾಂಡ್ ಅನ್ನು ಸುಧಾರಿಸಲು ನೆರವಾಗುತ್ತವೆ ಎಂದು ಅವರು ವಿವರಿಸಿದ್ದಾರೆ.
ಬ್ರಾಂಡ್ ಬೆಂಗಳೂರು ಪರಿಕಲ್ಪನೆಯನ್ನು ರೂಪಿಸಿದಾಗ, ತಜ್ಞರಿಂದ ಸೂಕ್ತ ಸಮಾಲೋಚನೆ ಮತ್ತು ಮಾಹಿತಿ ಪಡೆದ ನಂತರ ಎಂಟು ವಿಷಯಗಳನ್ನು ಆಯ್ಕೆ ಮಾಡಲಾಗಿತ್ತು. ಇದರಡಿ ಬಜೆಟ್ ದಾಖಲಾತಿಯಲ್ಲಿ ನಗರದಲ್ಲಿ ಆಗಬೇಕಾಗಿರುವ ಕಾಮಗಾರಿಗಳ ಪಟ್ಟಿ ಮಾಡಲಾಗಿದೆ. 2025-26ನೇ ಸಾಲಿನಲ್ಲಿ ಒಟ್ಟು 1,360 ಕೋಟಿ ರೂ. ವೆಚ್ಚ ಮಾಡಲಾಗುವುದು ಮತ್ತು ಉಳಿದ ಕಾಮಗಾರಿಗಳನ್ನು 2026-27ರಲ್ಲಿ 1,468 ಕೋಟಿ ರೂ.ಗಳೊಂದಿಗೆ ಪೂರ್ಣಗೊಳಿಸಲಾಗುವುದು ಎಂದು ಗಿರಿನಾಥ್ ಹೇಳಿದರು.
ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯೂ ಆಗಿರುವ ಬಿಬಿಎಂಪಿ ಆಡಳಿತಾಧಿಕಾರಿ ಎಸ್‌ಆರ್ ಉಮಾಶಂಕರ್ ಮಾತನಾಡಿ, ಕಳೆದ ಆರ್ಥಿಕ ವರ್ಷದಲ್ಲಿ ಪಟ್ಟಿ ಮಾಡಿರುವ ಎಲ್ಲ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು ಸಾಧ್ಯವಾಗಿಲ್ಲ. ಕಳೆದ ವರ್ಷ, ಸಾಕಷ್ಟು ಯೋಜನೆ ಮತ್ತು ಅನುಮೋದನೆಗಳನ್ನು ಪಡೆಯಲಾಗಿದ್ದು, ಈ ಆರ್ಥಿಕ ವರ್ಷದ ಅನುದಾನದಲ್ಲಿ ಅವುಗಳನ್ನು ಅನುಷ್ಟಾನಗೊಳಿಸಲಾಗುವುದು ಎಂದರು.
ರೂ. 1,360 ಕೋಟಿ ಹೆಚ್ಚುವರಿ ಮೊತ್ತವಾಗಿದ್ದು, ಈಗಾಗಲೇ ರಸ್ತೆ, ಚರಂಡಿ, ಆರೋಗ್ಯ, ಹಸಿರು, ಸ್ವಚ್ಛತೆ ಮತ್ತಿತರ ಕಾಮಗಾರಿಗಳಿಗೆ ಮಂಜೂರು ಮಾಡಿರುವ ಹಣದ ಜೊತೆಗೆ ಹೆಚ್ಚುವರಿಯಾಗಿ ನೀಡಲಾಗಿದೆ ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ.
Advertisement