
ಬೆಂಗಳೂರು: ಅಗತ್ಯ ವಸ್ತುಗಳ ಬೆಲೆ ಏರಿಕೆ ನಡುವೆ ನಾಡಿನೆಲ್ಲೆಡೆ ಶ್ರೀ ವಿಶ್ವಾವಸು ನಾಮ ಸಂವತ್ಸರದ ಯುಗಾದಿ ಹಬ್ಬವನ್ನು ಸಡಗ- ಸಂಭ್ರಮದಿಂದ ಜನತೆ ಆಚರಿಸುತ್ತಿದ್ದಾರೆ. ಹಾಲು, ಹೂವು, ಹಣ್ಣು, ತರಕಾರಿ ಸೇರಿದಂತೆ ಮತ್ತಿತರ ದಿನೋಪಯೋಗಿ ವಸ್ತುಗಳ ಬೆಲೆ ಹೆಚ್ಚಾಗಿದ್ದರೂ ಹಬ್ಬದ ಸಡಗರಕ್ಕೆ ಕುಂದು ತಂದಿಲ್ಲ. ಎಲ್ಲೆಡೆ ಮನೆಗಳಿಗೆ ತಳಿರು ತೋರಣ ಕಟ್ಟಿ, ಹೂವುಗಳಿಂದ ಆಲಂಕರಿಸುವ ಮೂಲಕ ಯುಗಾದಿಯನ್ನು ಆಚರಿಸಲಾಗುತ್ತಿದೆ.
ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಕೇಂದ್ರ ಸಚಿವ ಎಚ್. ಡಿ. ಕುಮಾರಸ್ವಾಮಿ ಸೇರಿದಂತೆ ಹಲವು ಗಣ್ಯರು ಸಾಮಾಜಿಕ ಜಾಲತಾಣ ಎಕ್ಸ್ ಮೂಲಕ ನಾಡಿನ ಜನತೆಗೆ ಶುಭಾಶಯ ಕೋರಿದ್ದಾರೆ.
ಇದು ಭರವಸೆ ಮತ್ತು ಜೀವನೋತ್ಸಾಹದೊಂದಿಗೆ ಸಂಬಂಧ ಹೊಂದಿರುವ ವಿಶೇಷ ಹಬ್ಬವಾಗಿದೆ. ಸಂತೋಷ ಮತ್ತು ಸಾಮರಸ್ಯದ ಮನೋಭಾವ ಬೆಳೆಯಲಿ ಮತ್ತು ಅರಳಲಿ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
ನೋವು - ನಲಿವು, ಸೋಲು - ಗೆಲುವು, ಕಷ್ಟ - ಸುಖಗಳ ಜೀವನ ಸಂದೇಶ ಸಾರುವ ಹಬ್ಬ ಯುಗಾದಿ. ದುಃಖದ ಕಹಿಬೇವು, ಸಂತಸದ ಸಿಹಿಬೆಲ್ಲ ಎರಡನ್ನೂ ಸಮಚಿತ್ತದಿಂದ ಸ್ವೀಕರಿಸಿ, ಭರವಸೆಯೊಂದಿಗೆ ಮುನ್ನಡೆಯೋಣ, ಬೇವಿನಂತ ಕಹಿ ಅನುಭವಗಳಿಂದ ಕಲಿತ ಪಾಠವು ಬೆಲ್ಲದಂತ ಸಿಹಿ ಬದುಕಿಗೆ ಮುನ್ನುಡಿಯಾಗಲಿ. ಯುಗದ ಆದಿಯು ನಾಡಿನಲ್ಲಿ ಸುಖ, ಶಾಂತಿ ಸಮೃದ್ಧಿಯನ್ನು ತರಲಿ ಎಂದು ಹಾರೈಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬರೆದುಕೊಂಡಿದ್ದಾರೆ.
ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿಡಿಯೋ ಮೂಲಕ ಸಂದೇಶ ನೀಡಿದ್ದಾರೆ.
ವಿಶ್ವಾವಸುನಾಮ ಸಂವತ್ಸರವು ನಿಮಗೆ ಸುಖ-ಸಂತೋಷ, ನೆಮ್ಮದಿ-ಸಮೃದ್ಧಿ ಹಾಗೂ ಆಯುರಾರೋಗ್ಯ ನೀಡಲಿ ಎಂದು ಕುಮಾರಸ್ವಾಮಿ ವಿಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ.
Advertisement