ವಿಧಾನ ಪರಿಷತ್ ಸದಸ್ಯ ರಾಜೇಂದ್ರ ಅವರ ಕೊಲೆಗೆ ಸಂಚು ರೂಪಿಸಿದ್ದ ಪ್ರಕರಣದ ಸಂಬಂಧದ ಆಡಿಯೋ ಒಂದು ವೈರಲ್ ಆಗತೊಡಗಿದೆ. ಪುಷ್ಪಾ ಎಂಬಾಕೆ ಮಾತನಾಡಿದ್ದ ಆಡಿಯೋ ಲೀಕ್ ಆಗುತ್ತಿದ್ದಂತೆ, ಪೊಲೀಸರು ಪುಷ್ಪಾ ಸೇರಿದಂತೆ ಮೂವರನ್ನು ವಶಕ್ಕೆ ಪಡೆದಿದ್ದಾರೆ.
ಆಡಿಯೋದಲ್ಲಿ ಮಾತನಾಡಿದ ಪುಷ್ಪಾ ಟೀ ಅಂಗಡಿ ನಡೆಸುತಿದ್ದಳು. ರಾಜಕೀಯ ವ್ಯಕ್ತಿಯ ನಗ್ನ ವೀಡಿಯೋ ಇಟ್ಟುಕೊಂಡು ಬ್ಲಾಕ್ ಮೇಲ್ ಮಾಡಿದ್ದ ಪುಷ್ಪಾ ಜೈಲು ವಾಸ ಅನುಭವಿಸಿ ಹೊರಕ್ಕೆ ಬಂದಿದ್ದಾರೆ. ಜೊತೆಗೆ ರೌಡಿಗಳ ಸಂಪರ್ಕದಲ್ಲಿ ಇರುವ ಬಗ್ಗೆ ಈ ಆಡಿಯೋದಲ್ಲಿ ಬಹಿರಂಗ ಆಗಿತ್ತು. ಹೀಗಾಗಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಪ್ರಕರಣದಲ್ಲಿ ಒಟ್ಟು ಐವರ ವಿರುದ್ಧ ಎಫ್‌ಐ ಆರ್ ದಾಖಲಿಸಲಾಗಿದೆ. ಎ1 ಆರೋಪಿಯಾಗಿರುವ ಸೋಮ ಹಾಗೂ ಗುಂಡಾನನ್ನು ಪೊಲೀಸರು ನಿನ್ನೆ ರಾತ್ರಿ ನೆಲಮಂಗಲದ ಬಳಿ ಅರೆಸ್ಟ್ ಮಾಡಿದ್ದರು.
ರಾಜ್ಯದಲ್ಲಿ ನಾಳೆಯಿಂದ ಹಲವು ದೈನಂದಿನ ಬಳಕೆಯ ವಸ್ತು, ಸೇವೆಗಳ ಬೆಲೆ ದುಬಾರಿಯಾಗಲಿದೆ. ವಿದ್ಯುತ್, ಹಾಲು, ಬಸ್ ಪ್ರಯಾಣ ದರ ಹೆಚ್ಚಳ ಸೇರಿದಂತೆ ಬೆಲೆ ಏರಿಕೆಯನ್ನು ಎದುರಿಸಲು ಜನತೆ ಸಜ್ಜಾಗಬೇಕಿದೆ. ಈ ನಡುವೆ ಬೆಲೆ ಏರಿಕೆಯನ್ನು ವಿರೋಧಿಸಿ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಏ.2 ರಿಂದ ಬಿಜೆಪಿ ಅಹೋರಾತ್ರಿ ಧರಣಿ ನಡೆಸಲಿದೆ. ಈ ವಿಷಯವಾಗಿ ಸುದ್ದಿಗಾರರೊಂದಿಗೆ ಮಾತನಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಬಿಜೆಪಿಯ ಎಲ್ಲಾ ಶಾಸಕರು, ವಿಧಾನಪರಿಷತ್ ಸದಸ್ಯರು, ಮಾಜಿ ಶಾಸಕರು, ಪದಾಧಿಕಾರಿಗಳು ಧರಣಿಯಲ್ಲಿ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು. ಏ.4 ರಂದು ಜಿಲ್ಲಾ ಕೇಂದ್ರಗಳಲ್ಲಿ 5 ರಂದು ಎಲ್ಲಾ ಮಂಡಲಗಳ ಕೇಂದ್ರ ಸ್ಥಾನದಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಪ್ರತಿಭಟನೆ ನಡೆಸಲಿದ್ದಾರೆ ಎಂದು ತಿಳಿಸಿದ್ದಾರೆ.
ದಾವಣಗೆರೆ ಜಿಲ್ಲೆಯ ನ್ಯಾಮತಿ ಎಸ್‍ಬಿಐ ಬ್ಯಾಂಕ್ ದರೋಡೆ ಪ್ರಕರಣವನ್ನು ಬೇಧಿಸುವಲ್ಲಿ ಪೊಲೀಸರು ಕೊನೆಗೂ ಯಶಸ್ವಿಯಾಗಿದ್ದಾರೆ. ಪ್ರಕರಣದ ಸಂಬಂಧ 6 ಜನರನ್ನು ಬಂಧಿಸಿದ್ದು, ರೂ. 13 ಕೋಟಿ ಮೌಲ್ಯದ 17 ಕೆಜಿ ಚಿನ್ನವನ್ನು ವಶಕ್ಕೆ ಪಡೆದಿದ್ದಾರೆ. ಅಕ್ಟೋಬರ್ 24 ರಂದು ಆರೋಪಿಗಳು ಬ್ಯಾಂಕ್ ದರೋಡೆ ಮಾಡಿದ್ದರು. ಇದಕ್ಕಾಗಿ ಆರು ತಂಡವೊಂದನ್ನು ರಚಿಸಲಾಗಿತ್ತು. ಈಗ ಉಮಾ ಪ್ರಶಾಂತ್ ನೇತೃತ್ವದಲ್ಲಿನ ಪೊಲೀಸರ ತಂಡ ಪ್ರಕರಣವನ್ನು ಬೇಧಿಸಿದೆ. ಐದು ತಂಡಗಳು ಗ್ಯಾಂಗ್ ಪತ್ತೆಗಾಗಿ ಉತ್ತರ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ನಡೆಸಿತ್ತು. ಕೊನೆಗೆ ಎಲ್ಲಾ ಆರು ಆರೋಪಿಗಳು ಸಿಕ್ಕಿ ಬಿದಿದ್ದಾರೆ.
ಕಲ್ಯಾಣ ಕರ್ನಾಟಕ ಭಾಗದ ರೈತಾಪಿ ಜನರಿಗೆ ಅನುಕೂಲವಾಗುವ ನಿರ್ಧಾರವನ್ನು ಸರ್ಕಾರ ಕೈಗೊಂಡಿದ್ದು, ಭದ್ರಾ ಜಲಾಶಯದಿಂದ ತುಂಗಾಭದ್ರಾ ಕಾಲುವೆಗೆ ಎರಡು ಟಿಎಂಸಿ ನೀರು ಹರಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಏಪ್ರಿಲ್ 1 ರಿಂದ 5ರ ಅವಧಿಯಲ್ಲಿ ಕಾಲುವೆಗೆ ನೀರು ಹರಿಸಲು ನಿರ್ಧರಿಸಲಾಗಿದ್ದು, ಇದು ಕೊಪ್ಪಳ, ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಬೆಳೆದು ನಿಂತಿರುವ ಬೆಳೆಗಳಿಗೆ ಮತ್ತು ಕುಡಿಯುವ ನೀರಿಗೆ ಸಹಾಯವಾಗಲಿದೆ. ಮಾರ್ಚ್ 30ರ ವರೆಗೆ ಭದ್ರಾ ಜಲಾಶಯದಲ್ಲಿ 28 ಟಿಎಂಸಿ ನೀರು ಸಂಗ್ರಹ ಲಭ್ಯವಿದೆ. ಇದರಲ್ಲಿ ಮೇ 8ರ ವರೆಗೆ ನೀರಾವರಿಗೆ 11 ಟಿಎಂಸಿ ಮತ್ತು ಕುಡಿಯುವ ನೀರಿಗಾಗಿ 14 ಟಿಎಂಸಿ ಅಗತ್ಯವಿದ್ದು, 3 ಟಿಎಂಸಿ ನೀರನ್ನು ಜಲಾಶಯದಲ್ಲಿ ಉಳಿಸಿಕೊಳ್ಳಬೇಕಾಗಿದೆ.
ವಕ್ಫ್ ತಿದ್ದುಪಡಿ ಮಸೂದೆ 2024ನ್ನು ವಿರೋಧಿಸಿ ಸೋಮವಾರ ರಂಜಾನ್ ಪ್ರಾರ್ಥನೆ ಸಲ್ಲಿಸುವಾಗ ಕರ್ನಾಟಕದ ಸಚಿವರು ತಮ್ಮ ಬೆಂಬಲಿಗರೊಂದಿಗೆ ಕಪ್ಪು ಪಟ್ಟಿ ಧರಿಸಿ ಕೇಂದ್ರದ Waqf ಮಸೂದೆಯನ್ನು ವಿರೋಧಿಸಿ ಪ್ರತಿಭಟಿಸಿದರು. ವಕ್ಫ್ ಮತ್ತು ಪ್ರವಾಸೋದ್ಯಮ ಸಚಿವ ಬಿ.ಝಡ್. ಜಮೀರ್ ಅಹ್ಮದ್ ಖಾನ್ ಮತ್ತು ಪುರಸಭೆ ಆಡಳಿತ ಮತ್ತು ಹಜ್ ಸಚಿವ ಕೆ. ರೆಹಮಾನ್ ಖಾನ್ ಮತ್ತು ಅವರ ನೂರಾರು ಬೆಂಬಲಿಗರು ಬೆಂಗಳೂರು ಮತ್ತು ಬೀದರ್‌ನಲ್ಲಿ ಕ್ರಮವಾಗಿ ಕಪ್ಪು ಪಟ್ಟಿ ಧರಿಸಿ ಬೆಳಗಿನ ಪ್ರಾರ್ಥನೆಯಲ್ಲಿ ಭಾಗವಹಿಸಿದ್ದರು. ಕೇಂದ್ರ ಸರ್ಕಾರದ ಪ್ರಸ್ತಾವಿತ ವಕ್ಫ್ ಮಸೂದೆಯ ವಿರುದ್ಧ ಶಾಂತಿಯುತ ಪ್ರತಿಭಟನೆಯಾಗಿ ದೇಶಾದ್ಯಂತ ಧಾರ್ಮಿಕ ಮುಖಂಡರು ಕಪ್ಪು ಪಟ್ಟಿಗಳನ್ನು ಧರಿಸಲು ಜನರಿಗೆ ಸೂಚನೆ ನೀಡಿದ್ದಾರೆ ಈ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಸಲಾಗಿದೆ ಎಂದು ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ.
Advertisement