ಸುಹಾಸ್ ಶೆಟ್ಟಿಗೆ ಬೆದರಿಕೆ ಇತ್ತು, ಹಂತಕರ ಮುಖಗಳ ಗುರುತು ಪತ್ತೆ: ಮಂಗಳೂರು ನಗರ ಪೊಲೀಸ್ ಆಯುಕ್ತ

ಸಾರ್ವಜನಿಕ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಇಂದು ಬೆಳಗ್ಗೆ 6 ಗಂಟೆಯಿಂದ ಮೇ 6ರ ಬೆಳಗ್ಗೆ 6 ಗಂಟೆಯ ವರೆಗೆ ನಗರ ಕಮೀಷನರೇಟ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ.
Suhas Shetty
ಸುಹಾಸ್ ಶೆಟ್ಟಿ
Updated on

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರ ಹೊರವಲಯದ ಬಜಪೆಯ ಕಿನ್ನಿಪದವಿನಲ್ಲಿ ನಿನ್ನೆ ಗುರುವಾರ ರಾತ್ರಿ ನಡೆದ ಹಿಂದೂ ಕಾರ್ಯಕರ್ತ ಹಾಗೂ ರೌಡಿಶೀಟರ್ ಸುಹಾಸ್ ಶೆಟ್ಟಿ ಭೀಕರ ಹತ್ಯೆ ಹಿನ್ನೆಲೆಯಲ್ಲಿ ವಿಶ್ವ ಹಿಂದೂ ಪರಿಷತ್ ದಕ್ಷಿಣ ಕನ್ನಡ ಜಿಲ್ಲಾದ್ಯಂತ ಇಂದು ಬಂದ್ ಗೆ ಕರೆ ನೀಡಿದ್ದು, ಜಿಲ್ಲೆಯ ಹಲವು ತಾಲ್ಲೂಕುಗಳಲ್ಲಿ ರಸ್ತೆತಡೆ, ಬಸ್ ಗಳಿಗೆ ಕಲ್ಲು ತೂರಾಟ ನಡೆಯುತ್ತಿದೆ.

ಸುಹಾಸ್ ಶೆಟ್ಟಿ ಹತ್ಯೆ ನಂತರ ಮಂಗಳೂರು ಹಾಗೂ ಸುತ್ತಮುತ್ತ ಬಿಗುವಿನ ವಾತಾವರಣ ನಿರ್ಮಾಣಗೊಂಡಿರುವ ಹಿನ್ನೆಲೆಯಲ್ಲಿ ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್​ ಅಗರ್ವಾಲ್​, ಸಾರ್ವಜನಿಕ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಇಂದು ಬೆಳಗ್ಗೆ 6 ಗಂಟೆಯಿಂದ ಮೇ 6ರ ಬೆಳಗ್ಗೆ 6 ಗಂಟೆಯ ವರೆಗೆ ನಗರ ಕಮೀಷನರೇಟ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ.

ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈಗಾಗಲೇ ಸಿಸಿಟಿವಿ ಫೂಟೇಜ್ ವಶಪಡಿಸಿಕೊಂಡಿದ್ದೇವೆ. ಕೆಲ ಆರೋಪಿಗಳ ಮುಖಗಳನ್ನು ಕೂಡ ಪತ್ತೆ ಮಾಡಿದ್ದೇವೆ ಎಂದರು.

ಟಾರ್ಗೆಟ್ ಮಾಡಿ ಕೊಲೆ ಮಾಡಿದ್ದಾರೆ ಎನ್ನುವ ವಿಚಾರದ ಬಗ್ಗೆ ನಾನು ಈಗಲೇ ಏನನ್ನೂ ಹೇಳಲು ಆಗಲ್ಲ. ಪೊಲೀಸ್ ಇಲಾಖೆ ಈಗಾಗಲೇ ತನಿಖೆ ನಡೆಸುತ್ತಿದೆ. ಆರೋಪಿಗಳು ಯಾರೇ ಇದ್ದರೂ ಬಂಧಿಸುತ್ತೇವೆ. ಜನರು ಶಾಂತಿ ಕಾಪಾಡುವಂತೆ ಮನವಿ ಮಾಡುತ್ತೇನೆ ಎಂದರು.

ಬಸ್, ರಿಕ್ಷಾ ಸಂಚಾರ ಬಂದ್: ವಿಹಿಂಪ ಕರೆ ನೀಡಿದ ಜಿಲ್ಲಾ ಬಂದ್ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡದಾದ್ಯಂತ ಅಂಗಡಿ, ಮುಂಗಟ್ಟುಗಳು ಬಂದ್ ಆಗಿವೆ. ಖಾಸಗಿ ಬಸ್ ಸಂಚಾರ, ರಿಕ್ಷಾ ಸಂಚಾರವೂ ಸ್ಥಗಿತಗೊಂಡಿದೆ. ಸರ್ಕಾರಿ ಬಸ್​ಗಳು ಮಾತ್ರ ಓಡಾಟ ನಡೆಸುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.

ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್, ಇನೋವಾ ಕಾರಿನಲ್ಲಿ ಸಹಚರರ ಜೊತೆ ತೆರಳುತ್ತಿದ್ದ ಸುಹಾಸ್​ ಕಾರು ಅಡ್ಡಗಟ್ಟಿ ತಲ್ವಾರ್​​​ಗಳಿಂದ ಹಲ್ಲೆ ಮಾಡಿದ್ದಾರೆ. ಗೂಡ್ಸ್​ ವಾಹನ, ಕಾರಿನಲ್ಲಿ ಬಂದು ಸುಹಾಸ್​ ಹತ್ಯೆಗೈದಿದ್ದಾರೆ. ಸುಹಾಸ್​ ಶೆಟ್ಟಿಯನ್ನೇ ಟಾರ್ಗೆಟ್​ ಮಾಡಿ ಕೊಲೆ ಮಾಡಿದ್ದಾರೆ. ಈ ಸಂಬಂಧ ಬಜ್ಪೆ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಶುರು ಮಾಡಲಾಗಿದ್ದು, ಆರೋಪಿಗಳ ಪತ್ತೆಯಾಗಿದ್ದು, ಬಂಧನಕ್ಕೆ ಬಲೆಬೀಸಿದ್ದೇವೆ. ಇನ್ನು ಪೊಲೀಸ್​ ಅಧಿಕಾರಿಗಳ ಜೊತೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ. ಮಂಗಳೂರು ನಗರದಲ್ಲಿ ಹೆಚ್ಚಿನ ಬಂದೋಬಸ್ತ್​ ಕಲ್ಪಿಸಲಾಗುತ್ತದೆ. ಇದು ಪ್ರತೀಕಾರದ ಹತ್ಯೆ ಎಂದು ಮೇಲ್ನೋಟಕ್ಕೆ ಕಾಣುತ್ತಿದೆ ಎಂದು ತಿಳಿಸಿದರು.

ಎನ್ ಐಎ ತನಿಖೆಯಾಗಲಿ

ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಮಂಗಳೂರು ಉತ್ತರ ತಾಲ್ಲೂಕು ಬಿಜೆಪಿ ಶಾಸಕ ವೈ ಭರತ್ ಶೆಟ್ಟಿ, "ಇದು ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆಯ ವೈಫಲ್ಯ. ಸರ್ಕಾರವು ರಾಜ್ಯದಲ್ಲಿ ರೌಡಿಗಳು, ಸಮಾಜ ವಿರೋಧಿ ಮತ್ತು ಜಿಹಾದಿ ಶಕ್ತಿಗಳನ್ನು ಪರೋಕ್ಷವಾಗಿ ಬೆಂಬಲಿಸಿದೆ, ಇದರಿಂದಾಗಿ ಅವರು ಏನು ಬೇಕಾದರೂ ಮಾಡುತ್ತಿದ್ದಾರೆ. ಪೊಲೀಸರು ಅವರ ವರ್ಗಾವಣೆ ಮತ್ತು ಈ ಎಲ್ಲಾ ಕೆಲಸಗಳಲ್ಲಿ ನಿರತರಾಗಿದ್ದಾರೆ. ಸರ್ಕಾರ ಅವರನ್ನು ವರ್ಗಾವಣೆ ಮಾಡುವ, ಅಮಾನತುಗೊಳಿಸುವ ಕಾರ್ಯದಲ್ಲಿ ನಿರತವಾಗಿದೆ. ಅವರು ಬಿಜೆಪಿ ಕಾರ್ಯಕರ್ತರನ್ನು ಜೈಲಿಗೆ ಹಾಕುವಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ ಎಂದು ಆರೋಪಿಸಿದ್ದಾರೆ.

ಇದು ಸುಹಾಸ್ ಶೆಟ್ಟಿಯವರ ಕುಟುಂಬ ಮತ್ತು ಹಿಂದೂ ಸಮಾಜಕ್ಕೆ ದೊಡ್ಡ ನಷ್ಟ. ಇಂದು ಬಂದ್‌ಗೆ ಕರೆ ನೀಡಲಾಗಿದೆ, ನಾವು ಅದನ್ನು ಬೆಂಬಲಿಸುತ್ತಿದ್ದೇವೆ. ಅವರು ಹಿಂದೂ ಕಾರ್ಯಕರ್ತರಾಗಿದ್ದರು. ರಾಜ್ಯ ಸರ್ಕಾರದ ಕಡೆಯಿಂದ ವೈಫಲ್ಯವಿದೆ. ಪಿಎಫ್‌ಐ ಸದಸ್ಯರು ಇದರಲ್ಲಿ ಭಾಗಿಯಾಗಿರಬಹುದು ಎಂಬ ಮಾಹಿತಿ ನಮಗೆ ಸಿಗುತ್ತಿರುವುದರಿಂದ ನಾವು ಎನ್‌ಐಎ ತನಿಖೆಗೆ ಒತ್ತಾಯಿಸಬೇಕಾಗಿದೆ. ರಾಜ್ಯದ ಈ ಭಾಗದಲ್ಲಿ ಬಹಳಷ್ಟು ಸ್ಲೀಪರ್ ಸೆಲ್‌ಗಳು ಸಹ ಸಕ್ರಿಯವಾಗಿವೆ, ಆದ್ದರಿಂದ ನಾವು ಬಹಳ ಜಾಗರೂಕರಾಗಿರಬೇಕು ಎಂದರು.

ಸೋಷಿಯಲ್ ಮೀಡಿಯಾದಲ್ಲಿ ಕೊಲೆ ಬಗ್ಗೆ ಮೊದಲೇ ಪೋಸ್ಟ್ ಮಾಡಿದ ಹಂತಕರ ವಿಚಾರಕ್ಕೆ ಮಾತಾಡಿದ ಕಮಿಷನರ್,  ನಾವು ಎಲ್ಲಾ ಪೋಸ್ಟ್ ಗಳನ್ನೂ ಕೂಡ ಗಮನಿಸಿದ್ದೇವೆ. ಈ ಬಗ್ಗೆಯೂ ಕೂಡ ತನಿಖೆ ನಡೆಯುತ್ತಿದೆ ಎಂದ್ರು.

'ಸುಹಾಸ್ ಶೆಟ್ಟಿಗೆ ಥ್ರೆಟ್ ಇತ್ತು'

ಸುಹಾಸ್ ಶೆಟ್ಟಿಗೆ ಥ್ರೆಟ್ ಇತ್ತು. ಈ ಬಗ್ಗೆ ಸುಹಾಸ್​ಗೂ ತಿಳಿಸಿ ಎಚ್ಚರಿಕೆಯಿಂದ ಇರುವಂತೆ ಕೂಡ ಹೇಳಿದ್ದೇವು ಎಂದು ಮಂಗಳೂರು ಕಮಿಷನರ್ ಹೇಳಿದ್ದಾರೆ. ಆರೋಪಿಗಳು ಕೃತ್ಯಕ್ಕೆ ಬಳಸಿದ ವಾಹನಗಳನ್ನು ಕೂಡ ವಶಪಡಿಸಿಕೊಂಡಿದ್ದೇವೆ. ಈ ಹಿಂದೆ ಕೊಲೆ ಯಾದವರ ಮೃತದೇಹ ಕೊಂಡು ಹೋದಾಗ ಗಲಭೆಗಳು ಆಗಿತ್ತು. ಹೀಗಾಗಿ ಈ ಬಾರಿ ಹೆಚ್ಚಿನ ಭದ್ರತೆ ನಿಯೋಜನೆ ಮಾಡಿದ್ದೇವೆ. ಸೋಶಿಯಲ್ ನಿಗಾ ಇಟ್ಟಿದ್ದೇವೆ ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com