News headlines 09-05-2025| ಭಾರತ-ಪಾಕ್ ಉದ್ವಿಗ್ನತೆ: ವಿಮಾನ ನಿಲ್ದಾಣಕ್ಕೆ 3 ಗಂಟೆ ಮುಂಚಿತವಾಗಿ ತಲುಪಲು ಪ್ರಯಾಣಿಕರಿಗೆ ಸೂಚನೆ, ಟ್ಯಾಂಕರ್ ನೀರು ಸರಬರಾಜು ಮಾಫಿಯಾಗೆ ಕಡಿವಾಣ: ಸಂಚಾರಿ ಕಾವೇರಿ ಯೋಜನೆ ಜಾರಿ, ಸೇನಾಪಡೆಗಳಿಗೆ ಬೆಂಬಲ: ಕಾಂಗ್ರೆಸ್ ನಿಂದ ತಿರಂಗ ಯಾತ್ರೆ

News headlines 09-05-2025| ಭಾರತ-ಪಾಕ್ ಉದ್ವಿಗ್ನತೆ: ವಿಮಾನ ನಿಲ್ದಾಣಕ್ಕೆ 3 ಗಂಟೆ ಮುಂಚಿತವಾಗಿ ತಲುಪಲು ಪ್ರಯಾಣಿಕರಿಗೆ ಸೂಚನೆ, ಟ್ಯಾಂಕರ್ ನೀರು ಸರಬರಾಜು ಮಾಫಿಯಾಗೆ ಕಡಿವಾಣ: ಸಂಚಾರಿ ಕಾವೇರಿ ಯೋಜನೆ ಜಾರಿ, ಸೇನಾಪಡೆಗಳಿಗೆ ಬೆಂಬಲ: ಕಾಂಗ್ರೆಸ್ ನಿಂದ ತಿರಂಗ ಯಾತ್ರೆ

1. ಭಾರತ-ಪಾಕ್ ಉದ್ವಿಗ್ನತೆ: ವಿಮಾನ ನಿಲ್ದಾಣಕ್ಕೆ 3 ಗಂಟೆ ಮುಂಚಿತವಾಗಿ ತಲುಪಲು ಪ್ರಯಾಣಿಕರಿಗೆ ಸೂಚನೆ

ಗಡಿ ಪ್ರದೇಶದಲ್ಲಿ ಭಾರತ-ಪಾಕ್ ನಡುವಿನ ಉದ್ವಿಗ್ನತೆ ಮುಂದುವರೆದಿದೆ. ನೆನ್ನೆ ರಾತ್ರಿ ರಾಜಸ್ಥಾನ, ಪಂಜಾಬ್, ಜಮ್ಮು ಪ್ರದೇಶಗಳಲ್ಲಿ ಪಾಕ್ ಡ್ರೋನ್ ದಾಳಿ ನಡೆಸಿದ್ದು, ಭಾರತೀಯ ಸೇನೆ ಪಾಕ್ ಡ್ರೋನ್ ಗಳನ್ನು ಹೊಡೆದುರುಳಿಸಿದೆ. ಭಾರತ- ಪಾಕ್ ನಡುವಿನ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲೂ ಕಟ್ಟೆಚ್ಚರ ವಹಿಸಲಾಗಿದ್ದು, ವಿಮಾನ ಹೊರಡುವ ಸಮಯಕ್ಕಿಂತ ಮೂರು ಗಂಟೆ ಮುಂಚಿತವಾಗಿ ವಿಮಾನ ನಿಲ್ದಾಣ ತಲುಪುವಂತೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಯಾಣಿಕರಿಗೆ ಮನವಿ ಮಾಡಿದೆ. ಭದ್ರತೆಯ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಇನ್ನು ಭಾರತ-ಪಾಕಿಸ್ತಾನದ ಗಡಿಯಲ್ಲಿ ಯುದ್ಧದ ವಾತಾವರಣ ಉಂಟಾಗಿರುವುದರಿಂದ ಸಾರ್ವಜನಿಕರು ಆತಂಕಕ್ಕೊಳಗಾಗದಂತೆ ತಿಳಿವಳಿಕೆ ನೀಡುವಂತೆ ಹಾಗೂ ಸುಳ್ಳು ಸುದ್ದಿಗಳು ಹರಡದಂತೆ ಕ್ರಮ ಕೈಗೊಳ್ಳಲು ಪೊಲೀಸ್ ಸಿಬ್ಬಂದಿಗಳಿಗೆ ಸೂಚಿಸಲಾಗಿದೆ" ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ತಿಳಿಸಿದ್ದಾರೆ.

2. ಸೇನಾಪಡೆಗಳಿಗೆ ಬೆಂಬಲ: ಕಾಂಗ್ರೆಸ್ ನಿಂದ ತಿರಂಗ ಯಾತ್ರೆ

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಆಪರೇಷನ್ ಸಿಂಧೂರ ನಡೆಸಿದ ಭಾರತೀಯ ಸಶಸ್ತ್ರ ಪಡೆಗಳಿಗೆ ಬೆಂಬಲ ಸೂಚಿಸಲು ಬೆಂಗಳೂರಿನಲ್ಲಿ ಕಾಂಗ್ರೆಸ್ "ತಿರಂಗಾ ಯಾತ್ರೆ'ಯನ್ನು ನಡೆಸಿತು. ಜೈ ಹಿಂದ್-ಜೈ ಭಾರತ್-ಜೈ ತಿರಂಗಾ', ಘೋಷಣೆಗಳ ನಡುವೆ ಭಾರತೀಯ ತ್ರಿವರ್ಣ ಧ್ವಜವನ್ನು ಹಾರಾಡಿಸಲಾಯಿತು. ಕೆಆರ್ ವೃತ್ತದಿಂದ ಪ್ರಾರಂಭವಾಗಿ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮುಕ್ತಾಯಗೊಂಡ ಮೆರವಣಿಗೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಹಲವಾರು ಹಿರಿಯ ಸಚಿವರು ಭಾಗವಹಿಸಿದ್ದರು.

3. IPL ಪಂದ್ಯಗಳು ತಾತ್ಕಾಲಿಕ ಸ್ಥಗಿತ

ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆ ಹೆಚ್ಚುತ್ತಿರುವ ಕಾರಣ ಇಂಡಿಯನ್ ಪ್ರೀಮಿಯರ್ ಲೀಗ್ ನ್ನು ತಕ್ಷಣದಿಂದ ಜಾರಿಗೆ ಬರುವಂತೆ ಒಂದು ವಾರದವರೆಗೆ ಸ್ಥಗಿತಗೊಳಿಸಲಾಗಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ದೃಢಪಡಿಸಿದೆ. ಪರಿಸ್ಥಿತಿಯನ್ನು ಅವಲೋಕಿಸಿದ ನಂತರ ಪಂದ್ಯಾವಳಿಯ ಹೊಸ ವೇಳಾಪಟ್ಟಿ ಮತ್ತು ಸ್ಥಳಗಳನ್ನು ಸೂಕ್ತ ಸಮಯದಲ್ಲಿ ಘೋಷಿಸಲಾಗುವುದು ಎಂದು ಮಂಡಳಿ ತಿಳಿಸಿದೆ. ಜಮ್ಮು ಮತ್ತು ಪಠಾಣ್‌ಕೋಟ್‌ಗಳಲ್ಲಿ ವಾಯುದಾಳಿ ಎಚ್ಚರಿಕೆಯ ನಂತರ ಧರ್ಮಶಾಲಾದಲ್ಲಿ ಗುರುವಾರ ನಡೆಯುತ್ತಿದ್ದ ಪಂಜಾಬ್ ಕಿಂಗ್ಸ್ ಮತ್ತು ದೆಹಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯವನ್ನು ಅರ್ಧದಲ್ಲಿಯೇ ರದ್ದುಗೊಳಿಸಲಾಯಿತು.

4. ನೀರು ಸರಬರಾಜು ಮಾಫಿಯಾಗೆ ಕಡಿವಾಣ; ಅಗ್ಗದ ದರದಲ್ಲಿ ಸಂಚಾರಿ ಕಾವೇರಿ ಯೋಜನೆ

ಬೆಂಗಳೂರಿನಲ್ಲಿ ಮತ್ತೆ ದೊಡ್ಡ ಮಾಫಿಯಾವಾಗಿ ಮಾರ್ಪಟ್ಟಿರುವ ಟ್ಯಾಂಕರ್ ನೀರು ಸರಬರಾಜನ್ನು ತಪ್ಪಿಸಲು, ಕಡಿಮೆ ಬೆಲೆಗೆ ಸಾರ್ವಜನಿಕರಿಗೆ ನೀರು ಪೂರೈಸಲು ಸಂಚಾರಿ ಕಾವೇರಿ ಯೋಜನೆಯನ್ನು ದೇಶದಲ್ಲೇ ಮೊದಲ ಬಾರಿಗೆ ಜಾರಿಗೆ ತರಲಾಗಿದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಘೋಷಿಸಿದರು. ಟ್ಯಾಂಕರ್ ನೀರು ಸರಬರಾಜುದಾರರು ಸುಮಾರು 3,000 ಬೋರ್‌ವೆಲ್‌ಗಳನ್ನು ಕೊರೆದಿದ್ದಾರೆ ಮತ್ತು ಟ್ಯಾಂಕರ್‌ಗಳನ್ನು ಇಟ್ಟುಕೊಳ್ಳುವ ಮೂಲಕ 3,000 ರೂ.ವರೆಗೆ ಶುಲ್ಕ ವಿಧಿಸುತ್ತಿದ್ದಾರೆ. ಸಂಚಾರಿ ಕಾವೇರಿ ಯೋಜನೆಯೊಂದಿಗೆ, ಬಿಡಬ್ಲ್ಯೂಎಸ್ಎಸ್ಬಿ 660 ರೂಪಾಯಿಗೆ 4,000 ಲೀಟರ್ ನೀರು ಮತ್ತು 740 ರೂಪಾಯಿಗೆ 6,000 ಲೀಟರ್ ನೀರು ಒದಗಿಸಲಿದೆ ಎಂದು ಡಿಸಿಎಂ ಹೇಳಿದರು.

5. ಶಾಸಕ ಸ್ಥಾನದಿಂದ ಜನಾರ್ದನ ರೆಡ್ಡಿ ಅನರ್ಹ

ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜನಾರ್ದನ ರೆಡ್ಡಿ ಅವರನ್ನು ಸಿಬಿಐ ವಿಶೇಷ ನ್ಯಾಯಾಲಯ ಅಪರಾಧಿ ಎಂದು ತೀರ್ಪು ನೀಡಿದ ಕಾರಣ ಜನಾರ್ದನ ರೆಡ್ಡಿ ಶಾಸಕ ಸ್ಥಾನದಿಂದ ಅನರ್ಹಗೊಂಡಿದ್ದಾರೆ. ನ್ಯಾಯಾಲಯದ ತೀರ್ಪು ಮೇ 6 ರಿಂದ ಜಾರಿಗೆ ಬರುವಂತೆ, ವಿಧಾನಸಭೆ ಸಚಿವಾಲಯವು ಬಿಜೆಪಿ ಶಾಸಕ ಜನಾರ್ದನ ರೆಡ್ಡಿ ಅವರನ್ನು ಅನರ್ಹಗೊಳಿಸಿ ಅಧಿಸೂಚನೆ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ವಿಧಾನಸಭೆಯಲ್ಲಿ ಒಂದು ಸ್ಥಾನ ತೆರವಾಗಿದೆ. ಕೊಪ್ಪಳ ಜಿಲ್ಲೆಯ ಗಂಗಾವತಿ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾಗಿದ್ದರು. ಮೇಲಿನ ಹಂತದ ಕೋರ್ಟ್‌ ತಡೆಯಾಜ್ಞೆ ನೀಡದ ಹೊರತು ಮುಂದಿನ 6 ವರ್ಷಗಳ ಅವಧಿಗೆ ಅನರ್ಹತೆ ಜಾರಿಯಲ್ಲಿರಲಿದೆ.

6. ಮೇ11 ರಂದು ಸುಹಾಸ್ ಶೆಟ್ಟಿ ನಿವಾಸಕ್ಕೆ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ ಭೇಟಿ

ಇತ್ತೀಚಿಗೆ ಹತ್ಯೆಗೀಡಾದ ಬಜರಂಗದಳ ಕಾರ್ಯಕರ್ತ ಹಾಗೂ ರೌಡಿ ಶೀಟರ್ ಸುಹಾಸ್ ಶೆಟ್ಟಿ ನಿವಾಸಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಹಾಗೂ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಜೆ.ಪಿ. ನಡ್ಡಾ ಮೇ 11 ರಂದು ಭೇಟಿ ನೀಡಲಿದ್ದು, ಕುಟುಂಬಸ್ಥರಿಗೆ ಸಾಂತ್ವನ ಹೇಳಲಿದ್ದಾರೆ. ಮೇ11 ಮತ್ತು 12 ರಂದು ಜೆಪಿ ನಡ್ಡಾ ದಕ್ಷಿಣ ಕನ್ನಡ ಜಿಲ್ಲೆ ಪ್ರವಾಸ ಕೈಗೊಳ್ಳಲಿದ್ದು, ಮೇ 11 ರಂದು ಧರ್ಮಸ್ಥಳದ ಮಂಜುನಾಥ ದೇವಾಲಯಕ್ಕೂ ಭೇಟಿ ನೀಡಲಿದ್ದಾರೆ. ಈ ಮಧ್ಯೆ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಪಕ್ಷ ನಾಯಕ ಆರ್. ಅಶೋಕ್ ಮತ್ತಿತರ ನಾಯಕರು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಭೇಟಿ ಮಾಡಿ, ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣವನ್ನು ಎನ್ ಐಎ ತನಿಖೆಗೆ ವಹಿಸುವಂತೆ ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com