ಭಾರತ-ಪಾಕ್ ನಡುವೆ ಕದನ ವಿರಾಮ ಘೋಷಣೆಯಾದ ಬಳಿಕ ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಜೊತೆ ಪ್ರಧಾನಿ ನರೇಂದ್ರ ಮೋದಿ ದೂರವಾಣಿ ಮೂಲಕ ಮಾತನಾಡಿದ್ದು, ಆಪರೇಷನ್ ಸಿಂದೂರ್ ಮುಂದುವರೆಯಲಿದೆ, ಪಾಕ್ ಬಾಲ ಬಿಚ್ಚಿದರೆ ಮತ್ತೆ ದಾಳಿ ಮಾಡುತ್ತೇವೆ, ಪಾಕಿಸ್ತಾನ ತನ್ನ ಉಗ್ರರನ್ನು ಭಾರತಕ್ಕೆ ಕಳಿಸುವ ಷರತ್ತಿಗೆ ಒಪ್ಪಿದರೆ ಮಾತ್ರ ಮಾತುಕತೆಗೆ ಸಿದ್ಧ, ಪಿಒಕೆ ಮರಳಿ ಬರಬೇಕು ಇದರ ಹೊರತಾಗಿ ಯಾವ ಮಾತುಕತೆಯೂ ಇಲ್ಲ ಕಾಶ್ಮೀರದ ವಿಷಯದಲ್ಲಿ 3 ನೇಯವರ ಮಧ್ಯಸ್ಥಿಕೆ ಅಗತ್ಯವಿಲ್ಲ ಎಂದು ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ಇದಕ್ಕೂ ಮೊದಲು ಕಾಶ್ಮೀರ ವಿಷಯದಲ್ಲಿ ಭಾರತ- ಪಾಕ್ ನಡುವೆ ಮಧ್ಯಸ್ಥಿಕೆ ವಹಿಸಲು ಸಿದ್ಧ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದರು.
ಭಾರತ- ಪಾಕ್ ನಡುವೆ ಕದನ ವಿರಾಮ ಘೋಷಣೆಯಾಗಿರುವ ಬಗ್ಗೆ ವಿಧಾನಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಯಾರದ್ದೋ ಮಾತು ಕೇಳಿ ಪಾಕ್ ವಿರುದ್ಧ ಭಾರತ ಸಂಘರ್ಷ ನಿಲ್ಲಿಸಬಾರದಿತ್ತು ಎಂದು ಪ್ರಧಾನಿ ಮೋದಿ ವಿರುದ್ಧ ಸಭಾಪತಿ ಬಸವರಾಜ್ ಹೊರಟ್ಟಿ ಬೇಸರ ವ್ಯಕ್ತಪಡಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಹೊರಟ್ಟಿ, ಈ ಸಂಘರ್ಷದಲ್ಲಿ ಪಾಕಿಸ್ತಾನವನ್ನು ನಾಶ ಮಾಡಬೇಕಿತ್ತು. ಕದನ ವಿರಾಮದ ನಂತರ ಮತ್ತೆ ದಾಳಿ ಮಾಡಿದ್ದಾರೆ. ಬೇರೆಯವರ ಮಾತು ಕೇಳಿ ಪಾಕಿಸ್ತಾನದ ಜೊತೆ ನಡೆಸುತ್ತಿದ್ದ ಸಂಘರ್ಷ ಕೈ ಬಿಟ್ಟಿದ್ದು ತಪ್ಪು. ಪಾಕಿಸ್ತಾನದವರು ಸಾಯುವವರೆಗೂ ವೈರಿಗಳೇ ಎಂದು ಹೇಳಿದ್ದಾರೆ.
ಗಡಿ ಪ್ರದೇಶಗಳಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಸೇನಾ ಸಂಘರ್ಷ ನಡೆಯುತ್ತಿರುವಂತೆಯೇ ಇತ್ತ ಕರ್ನಾಟಕದ ವಿದ್ಯಾರ್ಥಿನಿಯೊಬ್ಬಳು ಪಾಕಿಸ್ತಾನ ಪರ ಪೋಸ್ಟ್ ಮಾಡಿ ಸಂಕಷ್ಟಕ್ಕೆ ಸಿಲುಕಿದ್ದಾಳೆ.
ವಿಜಯಪುರದ ಅಲ್ ಅಮೀನ್ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿನಿಯೊಬ್ಬಳ ವಿರುದ್ಧ ಪಾಕ್ ಪರ ಪೋಸ್ಟ್ ಮಾಡಿದ ಆರೋಪದಲ್ಲಿ ವಿಜಯಪುರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಈ ಬೆನ್ನಲ್ಲೇ ವಿದ್ಯಾರ್ಥಿನಿ ತನ್ನ ವಿವಾದಿತ ಪೋಸ್ಟ್ ನ್ನು ತೆಗೆದುಹಾಕಿದ್ದಾಳೆ. "ನನ್ನ ಪಾಕಿಸ್ತಾನಿ ಸ್ನೇಹಿತರಿಗೆ, ಐಒಜೆಕೆ (ಭಾರತೀಯ ಆಕ್ರಮಿತ ಜೆಕೆ) ಜನರು ಮಿಲಿಟರಿ, ಸರ್ಕಾರಿ ಸ್ಥಾಪನೆಗಳ ಬಳಿ ಹೋಗುವುದನ್ನು ತಪ್ಪಿಸಿ. ನೀವು ಗಡಿ ವ್ಯಾಪ್ತಿಯಲ್ಲಿ 200 ಕಿಮೀ ಹತ್ತಿರ ವಾಸಿಸುತ್ತಿದ್ದರೆ, ದಯವಿಟ್ಟು ಒಳನಾಡಿಗೆ ತೆರಳಿ. ಅಲ್ಲಾಹನು ಭಾರತದಿಂದ ನಮ್ಮೆಲ್ಲರನ್ನೂ ರಕ್ಷಿಸಲಿ ಎಂದು ವಿದ್ಯಾರ್ಥಿನಿ ತಶೌಧ್ ಫಾರೂಕಿ ಶೇಖ್ ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಹಾಕಿದ್ದಳು.
ಖ್ಯಾತ ಕೃಷಿ ವಿಜ್ಞಾನಿ ಸುಬ್ಬಣ್ಣ ಅಯ್ಯಪ್ಪನ್ ಅವರ ಶವ ಶ್ರೀರಂಗಪಟ್ಟಣದ ಕಾವೇರಿ ನದಿಯಲ್ಲಿ ಪತ್ತೆಯಾಗಿದೆ. ಮೈಸೂರಿನ ವಿಶ್ವೇಶ್ವರಯ್ಯ ನಗರದ ಅಪಾರ್ಟ್‌ಮೆಂಟ್‌ನಲ್ಲಿ ಸುಬ್ಬಣ್ಣ ತಮ್ಮ ಪತ್ನಿಯೊಂದಿಗೆ ವಾಸಿಸುತ್ತಿದ್ದರು. ಅವರು ಮೇ 7 ರಿಂದ ಅವರು ನಾಪತ್ತೆಯಾಗಿದ್ದರು. ಈ ಸಂಬಂಧ ಕುಟುಂಬ ಸದಸ್ಯರು ವಿದ್ಯಾರಣ್ಯಪುರಂ ಪೊಲೀಸ್ ಠಾಣೆಗೆ ನಾಪತ್ತೆ ದೂರು ದಾಖಲಿಸಿತ್ತು. ಪ್ರಾಥಮಿಕ ತನಿಖೆಯಲ್ಲಿ, ಅವರು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಆದಾಗ್ಯೂ, ಸಾವಿಗೆ ನಿಜವಾದ ಕಾರಣವನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಚಾಮರಾಜನಗರ ಜಿಲ್ಲೆಯ ಯಳಂದೂರಿನಲ್ಲಿ ಡಿಸೆಂಬರ್ 10, 1955 ರಂದು ಜನಿಸಿದ್ದ ಸುಬ್ಬಣ್ಣ ದೇಶಾದ್ಯಂತ ವಿವಿಧ ವಿಭಾಗಗಳಲ್ಲಿ ಸೇವೆ ಸಲ್ಲಿಸಿದ ಸುಬ್ಬಣ್ಣ ನೀಲಿ ಕ್ರಾಂತಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 2022 ರಲ್ಲಿ ಅವರಿಗೆ ಪದ್ಮಶ್ರೀ ಪ್ರಶಸ್ತಿಯನ್ನು ನೀಡಲಾಗಿತ್ತು.
ಬೆಂಗಳೂರು ವಿಶ್ವವಿದ್ಯಾಲಯದ ಹೆಸರಲ್ಲಿ ಮತ್ತೊಂದು ವಂಚನೆ ಪ್ರಕರಣ ದಾಖಲಾಗಿದ್ದು, ವಿವಿಯ ರಿಜಿಸ್ಟ್ರಾರ್ ಹುದ್ದೆ ಕೊಡಿಸುವುದಾಗಿ ಪ್ರೊಫೆಸರ್ ಒಬ್ಬರಿಗೆ 35 ಲಕ್ಷ ರೂ. ಪಡೆದು ವಂಚಿಸಿರುವ ಕುರಿತು ದೂರು ದಾಖಲಾಗಿದೆ. ನಿವೃತ್ತ ಪ್ರಾಧ್ಯಾಪಕ ಆರ್.ಕೆ.ಸೋಮಶೇಖರ್ ಎಂಬುವವರಿಗೆ ವಂಚನೆ ಮಾಡಲಾಗಿದ್ದು, ಈ ಸಂಬಂಧ ಅವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನ ಮೇರೆಗೆ ಹೊರಮಾವು ನಂದನಂ ಲೇಔಟ್ ನಿವಾಸಿ ಬಿ.ಜಿ.ರವಿಕುಮಾರ್‌ಎಂಬುವವರ ವಿರುದ್ಧ ಗೋವಿಂದರಾಜನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ದೂರುದಾರ ಆರ್.ಕೆ.ಸೋಮಶೇಖರ್ 1983ರಿಂದ ಬೆಂಗಳೂರು ವಿಶ್ವ ವಿದ್ಯಾಲಯದ ಜ್ಞಾನಭಾರತಿ ಕ್ಯಾಂಪಸ್‌ನ ಪರಿಸರ ವಿಜ್ಞಾನ ವಿಭಾಗದಲ್ಲಿ ಪ್ರೊಫೆಸರ್ ಆಗಿ ಕೆಲಸ ಮಾಡುತ್ತಿದ್ದು, 2019ರಲ್ಲಿ ನಿವೃತ್ತರಾಗಿದ್ದರು. 2010ರಲ್ಲಿ ಪರಿಚಯವಾಗಿದ್ದ ಬಿ.ಜಿ.ರವಿಕುಮಾರ್ ತನಗೆ ಪ್ರಭಾವಿ ರಾಜಕಾರಣಿಗಳ ಪರಿಚಯವಿದೆ.ನಿಮಗೆ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ರಿಜಿಸ್ಟ್ರಾರ್ ಹುದ್ದೆ ಕೊಡಿಸುತ್ತೇನೆ ಎಂದು ಹೇಳಿ ವಂಚಿಸಿದ್ದಾನೆ.
Advertisement