News headlines 12-05-2025 | J&K Pak ಭಾಗವೆಂದು ತೋರಿಸುವ ನಕ್ಷೆ ಹಂಚಿಕೊಂಡ ಕಾಂಗ್ರೆಸ್; ಪಾಕ್ ವಿರುದ್ಧದ ಕಾರ್ಯಾಚರಣೆ ಕೀರ್ತಿ ಸೇನೆಯದ್ದು- ಸಿದ್ದರಾಮಯ್ಯ; ಬೋರ್ ವೆಲ್ ಕೊರೆಸಲು ಅನುಮತಿ ಕಡ್ಡಾಯ; ಮಹಿಳೆಗೆ ಗುಪ್ತಾಂಗ ತೋರಿಸಿದ ಬಿಜೆಪಿ ಪಂಚಾಯತ್ ಉಪಾಧ್ಯಕ್ಷ ಉಚ್ಚಾಟನೆ

News headlines 12-05-2025 | J&K Pak ಭಾಗವೆಂದು ತೋರಿಸುವ ನಕ್ಷೆ ಹಂಚಿಕೊಂಡ ಕಾಂಗ್ರೆಸ್; ಪಾಕ್ ವಿರುದ್ಧದ ಕಾರ್ಯಾಚರಣೆ ಕೀರ್ತಿ ಸೇನೆಯದ್ದು- ಸಿದ್ದರಾಮಯ್ಯ; ಬೋರ್ ವೆಲ್ ಕೊರೆಸಲು ಅನುಮತಿ ಕಡ್ಡಾಯ; ಮಹಿಳೆಗೆ ಗುಪ್ತಾಂಗ ತೋರಿಸಿದ ಬಿಜೆಪಿ ಪಂಚಾಯತ್ ಉಪಾಧ್ಯಕ್ಷ ಉಚ್ಚಾಟನೆ

1. J&K Pak ಭಾಗವೆಂದು ತೋರಿಸುವ ನಕ್ಷೆ ಹಂಚಿಕೊಂಡ ಕಾಂಗ್ರೆಸ್!

ಭಾರತ- ಪಾಕ್ ನಡುವೆ ಉದ್ವಿಗ್ನ ಪರಿಸ್ಥಿತಿ ಉಂಟಾಗಿರುವ ನಡುವೆಯೇ ಕರ್ನಾಟಕ ಕಾಂಗ್ರೆಸ್ ಭಾರಿ ಯಡವಟ್ಟು ಮಾಡಿಕೊಂಡಿದೆ. ಜಮ್ಮು ಮತ್ತು ಕಾಶ್ಮೀರವನ್ನು ಪಾಕಿಸ್ತಾನದ ಭಾಗವೆಂದು ತೋರಿಸುವ ನಕ್ಷೆಯನ್ನು ಕರ್ನಾಟಕ ಕಾಂಗ್ರೆಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿ, ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಪೋಸ್ಟ್ ಡಿಲೀಟ್ ಮಾಡಿದೆ. ಇದಕ್ಕೆ ವಿರೋಧ ಪಕ್ಷ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದ ಕಾಂಗ್ರೆಸ್ ಪಾಕಿಸ್ತಾನಕ್ಕೆ ಅಂತರರಾಷ್ಟ್ರೀಯ ಹಣಕಾಸು ನಿಧಿ (IMF) ಸಾಲ ನೀಡುವುದನ್ನು ತಡೆಯಲು ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ವಿಫಲವಾಗಿದೆ ಎಂದು ಬರೆದಿತ್ತು. ತಪ್ಪಾದ ನಕ್ಷೆ ಹಂಚಿಕೊಂಡ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಕೆಪಿಸಿಸಿ ಅಧ್ಯಕ್ಷ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, 'ಒಂದು ಸಣ್ಣ ತಪ್ಪು ಸಂಭವಿಸಿದೆ; ನಾವು ಎಲ್ಲವನ್ನೂ ತೆಗೆದುಹಾಕಿದ್ದೇವೆ. ಯಾರೋ ಕಿಡಿಗೇಡಿತನ ಮಾಡಿದ್ದಾರೆ, 'ಇಂತಹ ಪೋಸ್ಟ್‌ಗಳಿಗೆ ಕಾರಣರಾದವರನ್ನು ಕೆಲಸದಿಂದ ತೆಗೆದುಹಾಕಲಾಗಿದೆ' ಎಂದು ಹೇಳಿದ್ದಾರೆ. ಈ ಪೋಸ್‌್್ಗೆ ಪ್ರತಿಕ್ರಿಯಿಸಿದ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್ ಅಶೋಕ, ಕಾಶ್ಮೀರ ಪಾಕಿಸ್ತಾನಕ್ಕೆ ಸೇರಿದ್ದು ಎಂದು ತೋರಿಸುವ ನಕ್ಷೆಯನ್ನು ಪೋಸ್ಟ್ ಮಾಡುವ ಮೂಲಕ ಕರ್ನಾಟಕ ಕಾಂಗ್ರೆಸ್ ಮತ್ತೊಮ್ಮೆ "ಪಾಪಿ" ಪಾಕಿಸ್ತಾನದ ಬಗ್ಗೆ ತನ್ನ ಪ್ರೀತಿಯನ್ನು ಪ್ರದರ್ಶಿಸಿದೆ ಎಂದು ಟೀಕಿಸಿದ್ದಾರೆ.

2. ಬೋರ್ ವೆಲ್ ಕೊರೆಸಲು ಅನುಮತಿ ಕಡ್ಡಾಯ

ರಾಜ್ಯದಲ್ಲಿ ಅಂತರ್ಜಲ ಮೂಲಗಳ ಅತಿಯಾದ ಬಳಕೆಯಿಂದಾಗಿ ಅಂತರ್ಜಲ ಮಟ್ಟ ತೀವ್ರವಾಗಿ ಕುಸಿದಿದೆ. ಪರಿಶೀಲನೆ ಮತ್ತು ಸಮತೋಲನವನ್ನು ಜಾರಿಗೆ ತರಲು ಬೋರ್ ವೆಲ್ ಕೊರೆಸಲು ರಾಜ್ಯ ಅಂತರ್ಜಲ ಪ್ರಾಧಿಕಾರದ ಅನುಮತಿ ಕಡ್ಡಾಯ ಮಾಡಲಾಗಿದೆ. ನಿರ್ಮಾಣ ಚಟುವಟಿಕೆಗಳಿಗೆ ಅಂತರ್ಜಲವನ್ನು ಬಳಸಲು 'ಆಕ್ಷೇಪಣಾ ಪ್ರಮಾಣಪತ್ರ' ಅಥವಾ 'ಆಕ್ಯುಪೆನ್ಸಿ ಪ್ರಮಾಣಪತ್ರ'ಕ್ಕೆ ಪ್ರಾಧಿಕಾರದ ಅನುಮತಿ ಕಡ್ಡಾಯವಾಗಿದೆ ಎಂದು ಪ್ರಾಧಿಕಾರ ತಿಳಿಸಿದೆ. ಅಂತರ್ಜಲವನ್ನು ಬಳಸುವ ಕಟ್ಟಡಗಳು ಮತ್ತು ಇತರ ಸಂಸ್ಥೆಗಳ ಸಂಖ್ಯೆ ಹೆಚ್ಚುತ್ತಿರುವ ಬಗ್ಗೆ ಪ್ರಾಧಿಕಾರದ ಗಮನಕ್ಕೆ ಬಂದಿದ್ದು ಇದರಲ್ಲಿ ಅನೇಕರು ಅನುಮೋದನೆ ಪಡೆಯುತ್ತಿಲ್ಲ ಎಂಬ ಮಾಹಿತಿಯೂ ಬಹಿರಂಗವಾಗಿದೆ.

3. ಮಹಿಳೆಗೆ ಗುಪ್ತಾಂಗ ತೋರಿಸಿದ ಪಂಚಾಯತ್ ಉಪಾಧ್ಯಕ್ಷ: ಬಿಜೆಪಿಯಿಂದ ಉಚ್ಚಾಟನೆ

ಸಾರ್ವಜನಿಕವಾಗಿ ಮಹಿಳೆಗೆ ಗುಪ್ತಾಂಗ ತೋರಿಸಿದ ಘಟನೆ ಇಡ್ಕಿದು ಗ್ರಾಮ ಪಂಚಾಯತ್ ಉಪಾಧ್ಯಕ್ಷ ವಿಕೃತಿ ಮೆರೆದಿರುವ ಘಟನೆ ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಇಡ್ಕಿದು‌ ಗ್ರಾಮದಲ್ಲಿ ನಡೆದಿದೆ. ಈ ಘಟನೆ ಸಂಬಂಧ ಉಪಾಧ್ಯಕ್ಷ ಪದ್ಮನಾಭ ಸಫಲ್ಯನನ್ನು ಬಿಜೆಪಿ ಪಕ್ಷದಿಂದ ಉಚ್ಛಾಟಿಸಲಾಗಿದೆ. ರಸ್ತೆ ವಿವಾದಕ್ಕೆ ಸಂಬಂಧಿಸಿದಂತೆ ಈ ಘಟನೆ ನಡೆಸಿದೆ. ಮನೆ ದಾರಿಗೆ ಗೇಟು ಅಳವಡಿಸಿದ್ದನ್ನು ಪ್ರಶ್ನಿಸಿದ್ದ ಮಹಿಳೆಗೆ ಪದ್ಮನಾಭ ಸಫಲ್ಯ ತನ್ನ ಗುಪ್ತಾಂಗ ತೋರಿಸಿದ್ದಾನೆ. ಈ ಸಂಬಂಧ ಮಹಿಳೆ ಪದ್ಮನಾಭ ಸಫಲ್ಯ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮಹಿಳೆಯ ಗೌರವಕ್ಕೆ ಧಕ್ಕೆ ತಂದ ಹಿನ್ನೆಯಲ್ಲಿ ಪದ್ಮನಾಭ ಸಪಲ್ಯನನ್ನು ಬಿಜೆಪಿಯ ಪ್ರಾಥಮಿಕ ಸದಸ್ಯತ್ವವನ್ನು ರದ್ದುಗೊಳಿಸಿ, ಪಕ್ಷದಿಂದ ಉಚ್ಚಾಟಿಸಲಾಗಿದೆ ಎಂದು ಪುತ್ತೂರು ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜರೆಮಾರು ತಿಳಿಸಿದ್ದಾರೆ.

4. ಪಾಕ್ ವಿರುದ್ಧದ ಕಾರ್ಯಾಚರಣೆ ಕೀರ್ತಿ ಯಾವ ಪಕ್ಷದ್ದೂ ಅಲ್ಲ, ಸೇನೆಯದ್ದು- ಸಿದ್ದರಾಮಯ್ಯ

ಪಾಕಿಸ್ತಾನದ ಮೇಲೆ ನಡೆಸಿದ ಕಾರ್ಯಾಚರಣೆಯ ಕ್ರೆಡಿಟ್ ಭಾರತಿಯ ಸೇನೆಗೆ ಮಾತ್ರ ಸಲ್ಲಬೇಕು. ಯಾವ ಪಕ್ಷವೂ ಅದನ್ನು ಘೋಷಿಸಿಕೊಳ್ಳಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 1971ರ ಯುದ್ಧಕ್ಕೂ- ಇವತ್ತಿನ ಸಂದರ್ಭಕ್ಕೂ ಹೋಲಿಕೆ ಮಾಡಿ ನಾನು ಮಾತನಾಡುವುದಿಲ್ಲ. ಆಗಿನ ಪರಿಸ್ಥಿತಿಗಳೇ ಬೇರೆ, ಇವತ್ತಿನ ಪರಿಸ್ಥಿತಿಗಳೇ ಬೇರೆ. ಟ್ರಂಪ್ ಟ್ವಿಟ್ ಬಗ್ಗೆಯಾಗಲಿ, ಪಾಕಿಸ್ತಾನದವರು ಮಾಡಿದ ಕದನ ವಿರಾಮ ಉಲ್ಲಂಘನೆಯ ಬಗ್ಗೆಯಾಗಲಿ ನಾನು ಮಾತನಾಡುವುದಿಲ್ಲ ಎಂದು ಹೇಳಿದ್ದಾರೆ. ಯುದ್ಧ ವಿರಾಮ ಘೋಷಣೆಗೂ ಮುನ್ನ ಸರ್ವ ಪಕ್ಷಗಳ ಸಭೆ ಕರೆಯಬೇಕಿತ್ತು. ವಿಶೇಷ ಅಧಿವೇಶನ ಕರೆಯಬೇಕಿತ್ತು. ಸರ್ವಪಕ್ಷ ಸಭೆಯಲ್ಲಿ ಚರ್ಚೆ ಮಾಡಿ ನಿರ್ಧಾರ ಪ್ರಕಟಿಸಬಹುದಿತ್ತು ಎಂದು ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ. ಸರ್ಕಾರದ ಎರಡು ವರ್ಷದ ಸಂಭ್ರಮಾಚರಣೆ ಮಾಡುತ್ತೇವೆ.

5. ರಸ್ತೆ ಅಪಘಾತ- ಮೂವರು ಸಾವು

ಲಾರಿ ಹಾಗೂ ಇನ್ನೋವಾ ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿ ಓರ್ವ ಮಹಿಳೆ ಸೇರಿ ಮೂವರು ಸಾವನ್ನಪ್ಪಿರುವ ಘಟನೆ ಚಿತ್ರದುರ್ಗದ ಹೊಳಲ್ಕೆರೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ನಸುಕಿನ ಜಾವ 3 ಗಂಟೆ ವೇಳೆಗೆ ಕಣಿವೆ ಆಂಜನೇಯ ದೇಗುಲ ಬಳಿ ಈ ಅಪಘಾತ ಸಂಭವಿಸಿದೆ. ಕಾರು ಆಂಧ್ರ ಪ್ರದೇಶ ಮೂಲದ್ದಾಗಿದ್ದು, ಚಿತ್ರದುರ್ಗದಿಂದ ಹೊಳಲ್ಕೆರೆ ಕಡೆಗೆ ತೆರಳುತ್ತಿತ್ತು. ಡಿಕ್ಕಿಯ ರಭಸಕ್ಕೆ ಇನೊವಾ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com