ಆಪರೇಷನ್ ಸಿಂಧೂರ ಮತ್ತು ಸಶಸ್ತ್ರ ಪಡೆಗಳಿಗೆ ಬೆಂಬಲ ಸೂಚಿಸಲು ಬಿಜೆಪಿಯಿಂದ ಬೆಂಗಳೂರಿನಲ್ಲಿ ತಿರಂಗ ಯಾತ್ರೆಯನ್ನು ಮೇ 15ರಂದು ನಡೆಸುತ್ತೇವೆ ಎಂದು ವಿಪಕ್ಷ ನಾಯಕ ಆರ್ ಅಶೋಕ ಹೇಳಿದ್ದಾರೆ. ಇದು ರಾಜಕೀಯೇತರ ಅಭಿಯಾನವಾಗಿದ್ದು, ಸಾರ್ವಜನಿಕರು ಭಾಗವಹಿಸುವಂತೆ ಒತ್ತಾಯಿಸಿದರು. 'ಆಪರೇಷನ್ ಸಿಂಧೂರ ಮತ್ತು ಸಶಸ್ತ್ರ ಪಡೆಗಳಿಗೆ ನಮ್ಮ ಬೆಂಬಲ ಸೂಚಿಸಲು, ನಾವು ಕರ್ನಾಟಕದಾದ್ಯಂತ ತಿರಂಗ ಯಾತ್ರೆಯನ್ನು ನಡೆಸುತ್ತೇವೆ. ಬೆಂಗಳೂರಿನಲ್ಲಿ, ನಾವು ಮೇ 15ರಂದು ಮತ್ತು ಅದರ ನಂತರ ಕರ್ನಾಟಕದ ಉಳಿದ ಸ್ಥಳಗಳಲ್ಲಿ ಮೇ 16ರಿಂದ 23ರವರೆಗೆ ತಿರಂಗ ಯಾತ್ರೆಯನ್ನು ನಡೆಸುತ್ತೇವೆ ಎಂದರು. ಮತ್ತೊಂದೆಡೆ ಆಪರೇಷನ್ ಸಿಂಧೂರ್ ಸೇನಾ ಕಾರ್ಯಾಚರಣೆಯಲ್ಲಿ ಭಾರತೀಯ ಸಶಸ್ತ್ರ ಪಡೆಗಳ ಪ್ರಯತ್ನ ಮತ್ತು ಶೌರ್ಯವನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ. ಇಂದು ಪಂಜಾಬ್‌ನ ಆದಂಪುರ ವಾಯುನೆಲೆಗೆ ಭೇಟಿ ನೀಡಿ, ಸೈನಿಕರನ್ನು ಉದ್ದೇಶಿಸಿ ಮಾತನಾಡಿದ ಮೋದಿ, ನಮ್ಮ ಹೆಣ್ಣುಮಕ್ಕಳ ಸಿಂಧೂರ ಅಳಿಸಿದವರಿಗೆ ಭಾರತ ತಕ್ಕ ಪಾಠ ಕಲಿಸಿದೆ. ಭಾರತೀಯ ವಾಯುಪಡೆ ದೇಶ ಹೆಮ್ಮೆಪಡುವಂತೆ ಮಾಡಿದೆ ಎಂದು ಹೇಳಿದರು.
ನೆಲಮಂಗಲ ಬಳಿಯ ಅಡಕಮಾರನಹಳ್ಳಿಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ತೈಲ ಗೋದಾಮು ಬೆಂಕಿಗಾಹುತಿಯಾಗಿ ದಟ್ಟವಾಗಿ ಹೊಗೆ ಆವರಿಸಿದ್ದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಶೆಲ್ ಕಂಪನಿಗೆ ಸೇರಿದ ಆಯಿಲ್ ಗೋದಾಮು ಹೊತ್ತಿ ಉರಿದಿದೆ. ಇಂದು ಬೆಳಗಿನ ಜಾವ ಮೂರು ಗಂಟೆಯಲ್ಲಿ ಈ ಅವಘಡ ಸಂಭವಿಸಿತ್ತು. ನೆಸರಿಸುಮಾರು 30 ಕೋಟಿ ರೂಪಾಯಿ ಮೌಲ್ಯದ ಆಯಿಲ್ ಬೆಂಕಿಗಾಹುತಿ ಆಗಿರಬಹುದು ಎಂದು ಅಂದಾಜಿಸಲಾಗಿದೆ. ಶೆಲ್ ಕಂಪನಿಯು ಕರ್ನಾಟಕದ ತುಮಕೂರು ಹೆದ್ದಾರಿಯಲ್ಲಿರುವ ತನ್ನ ಥರ್ಡ್ ಪಾರ್ಟಿ ಗೋದಾಮಿನಲ್ಲಿ ಬೆಂಕಿ ಅನಾಹುತ ಸಂಭವಿಸಿರುವುದನ್ನು ದೃಢಪಡಿಸಿದೆ. ಈ ಗೋದಾಮನ್ನು ಟೋಲ್ ಲಾಜಿಸ್ಟಿಕ್ಸ್ ಎಂಬ ಸಂಸ್ಥೆ ನಿರ್ವಹಿಸುತ್ತಿದೆ. ಮತ್ತು ಈ ಗೋದಾಮಿನಲ್ಲಿ ಲೂಬ್ರಿಕೆಂಟ್ ಉತ್ಪನ್ನಗಳ ಸಂಗ್ರಹಣೆ ಮಾಡಲಾಗುತ್ತಿತ್ತು ಎಂದು ಕಂಪನಿಯು ಸ್ಪಷ್ಟಪಡಿಸಿದೆ.
ಬೆಳಗಾವಿಯ ಮಸೀದಿಯೊಂದರಲ್ಲಿ ಕುರಾನ್ ಪುಸ್ತಕ ಸುಟ್ಟು ಹಾಕಿರುವ ಘಟನೆ ಬೆಳಕಿಗೆ ಬಂದಿದ್ದು, ಘಟನೆ ಬೆನ್ನಲ್ಲೇ ಪ್ರತಿಭಟನೆ, ಆಕ್ರೋಶ ಭುಗಿಲೆದ್ದಿದೆ. ಬೆಳಗಾವಿಯ ಸಂತಿಬಸ್ತವಾಡ ಎಂಬ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಈ ಮಸೀದಿಯಲ್ಲಿ ಎಂದಿನಂತೆ ಪ್ರಾರ್ಥನೆ ಮಾಡಲು ಮುಸಲ್ಮಾನರು ಆಗಮಿಸಿದ ವೇಳೆ ಕುರಾನ್, ಹದೀಸ್ ನಾಪತ್ತೆಯಾಗಿರುವುದನ್ನು ಗಮನಿಸಿದ್ದಾರೆ. ಹೀಗಾಗಿ ಪ್ರಾರ್ಥನೆ ಮುಗಿದ ಬಳಿಕ ಸುತ್ತಮುತ್ತ ಹುಡುಕಾಟ ನಡೆಸಿದಾಗ ಕುರಾನ್ ಮತ್ತು ಹದೀಸ್ ಸುಟ್ಟು ಹಾಕಿರುವುದು ಬೆಳಕಿಗೆ ಬಂದಿದೆ. ಘಟನೆ ಬೆನ್ನಲ್ಲೇ ಬೆಳಗಾವಿ ನಗರದಲ್ಲಿ ಸಾವಿರಾರು ಮುಸ್ಲಿಂ ಮುಖಂಡರು, ಯುವಕರು ಬೃಹತ್ ಪ್ರತಿಭಟನೆ ನಡೆಸಿದರು. ಮತ್ತೊಂದೆಡೆ ತಮ್ಮ ಮನೆ ವಿಳಾಸ ಮತ್ತು ಮೊಬೈಲ್ ಸಂಖ್ಯೆ ಸೋರಿಕೆಯಾಗಿದ್ದು, ಇದಾದ ಬಳಿಕ ಜೀವ ಬೆದರಿಕೆ ಕರೆಗಳು ಬರುತ್ತಿವೆ ಎಂದು ಫ್ಯಾಕ್ಟ್ ಚೆಕ್ಕಿಂಗ್ ವೆಬ್‌ಸೈಟ್ ಆಲ್ಟ್ ನ್ಯೂಸ್ ಸಹ-ಸಂಸ್ಥಾಪಕ ಮೊಹಮ್ಮದ್ ಜುಬೈರ್ ಬೆಂಗಳೂರು ಪೊಲೀಸರಿಗೆ ದೂರು ನೀಡಿದ್ದಾರೆ. ತಮ್ಮ ಮನೆ ವಿಳಾಸಕ್ಕೆ ಹಂದಿ ಮಾಂಸ ಕಳುಹಿಸುವುದಾಗಿ ಬೆದರಿಕೆ ಹಾಕಿರುವುದಾಗಿ ಅವರು ಆರೋಪಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಮನೆ ಮೇಲೆ ಬಾಂಬ್ ದಾಳಿ ಮಾಡಬೇಕು ಎಂದಿದ್ದ ಯುವಕನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಈ ಆಕ್ಷೇಪಾರ್ಹ ಹೇಳಿಕೆ ನೀಡಿರುವ ವಿಡಿಯೋವನ್ನು 'ಪಬ್ಲಿಕ್ ಸರ್ವೆಂಟ್' ಎಂಬ ತನ್ನ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಆರೋಪಿ ನವಾಜ್ ಅಪ್‌ಲೋಡ್ ಮಾಡಿದ್ದನು. ಇಂದು ಭಾರತ ಮತ್ತು ಪಾಕಿಸ್ತಾನ ಯುದ್ಧದಲ್ಲಿ ತೊಡಗಿವೆ. ಹೀಗಿದ್ದರೂ, ಪ್ರಧಾನಿ ನರೇಂದ್ರ ಮೋದಿ ಮನೆ ಮೇಲೆ ಇನ್ನೂ ಏಕೆ ಬಾಂಬ್ ದಾಳಿ ಮಾಡಿಲ್ಲ? ಜನರು ಶಾಂತಿಯುತವಾಗಿ ಬದುಕುತ್ತಿದ್ದಾಗ, ಈ ಯುದ್ಧದಂತಹ ಪರಿಸ್ಥಿತಿಯನ್ನು ಪ್ರಧಾನಿ ಮೋದಿಯವರೇ ಸೃಷ್ಟಿಸಿದರು. ಮೊದಲು ಅವರ ನಿವಾಸದ ಮೇಲೆ ಬಾಂಬ್ ದಾಳಿ ಮಾಡಬೇಕು' ಎಂದು ಹೇಳಿದ್ದನು.
ಕಾಮಿಡಿ ಕಿಲಾಡಿಗಳು ಸೀಸನ್ 3ರ ಖ್ಯಾತಿಯ ರಾಕೇಶ್ ಪೂಜಾರಿ ಭಾನುವಾರ ರಾತ್ರಿ ಕಾರ್ಯಕ್ರಮವೊಂದರಲ್ಲಿ ನೃತ್ಯ ಮಾಡುತ್ತಿದ್ದಾಗ ಹೃದಯಾಘಾತವಾಗಿ ಮೃತಪಟ್ಟಿದ್ದರು. ನಿನ್ನೆ ಉಡುಪಿಯ ಹೂಡೆ ಬೀಚ್ ಪಕ್ಕದಲ್ಲಿ ರಾಕೇಶ್ ಅವರ ಸಾರ್ವಜನಿಕ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ನಿರ್ದೇಶಕ ಯೋಗರಾಜ್ ಭಟ್, ಅನುಶ್ರೀ, ರಕ್ಷಿತಾ ಪ್ರೇಮ್, ಮಲೈಕಾ, ನಯನ, ಸೂರಜ್ ಸೇರಿ ಅನೇಕ ಕಲಾವಿದರು ರಾಕೇಶ್ ಅಂತಿಮ ದರ್ಶನ ಪಡೆದರು. ಆ ಬಳಿಕ ರಾಕೇಶ್ ಪಡುತೋನ್ಸೆಯ ಬಿಲ್ಲವ ಸಮಾಜ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿತು.
Advertisement