
ಬೆಂಗಳೂರು: ಕರಾವಳಿ ಜಿಲ್ಲೆಗಳಲ್ಲಿ ಕೋಮುಗಲಭೆ ಮತ್ತು ಅಪರಾಧ ತಡೆಯುವ ಉದ್ದೇಶದಿಂದ ರಚಿಸಲಾಗುತ್ತಿರುವ ಕೋಮು ವಿರೋಧಿ ಕಾರ್ಯಪಡೆಯನ್ನು ರಾಜ್ಯದ ಇತರ ಜಿಲ್ಲೆಗಳಿಗೂ ವಿಸ್ತರಿಸುವ ಸಾಧ್ಯತೆಯಿದೆ ಎಂದು ಗೃಹ ಸಚಿವ ಜಿ ಪರಮೇಶ್ವರ ಅವರು ಬುಧವಾರ ಹೇಳಿದ್ದಾರೆ.
ನೈತಿಕ ಪೊಲೀಸ್‌ಗಿರಿಯ ಘಟನೆಗಳನ್ನು ಸಹ ಕೋಮು ವಿರೋಧಿ ಕಾರ್ಯಪಡೆಗೆ ವಹಿಸಲಾಗುವುದು ಎಂದು ಅವರು ಹೇಳಿದರು.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಕೋಮುಗಲಭೆಗಳನ್ನು ನಿವಾರಿಸಲು ಮತ್ತು ತಗ್ಗಿಸಲು ನಕ್ಸಲ್ ವಿರೋಧಿ ಪಡೆ (ಎಎನ್‌ಎಫ್) ಮಾದರಿಯಲ್ಲಿ ಕೋಮು ವಿರೋಧಿ ಕಾರ್ಯಪಡೆ ರಚಿಸಲಾಗುವುದು ಎಂದು ಪರಮೇಶ್ವರ್ ಈ ತಿಂಗಳ ಆರಂಭದಲ್ಲಿ ಘೋಷಿಸಿದ್ದರು.
ಈ ಕುರಿತು ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಪರಮೇಶ್ವರ್, ಈ ಬಗ್ಗೆ ಪ್ರಸ್ತಾವನೆ ಕಳುಹಿಸಲು ಪೊಲೀಸ್ ಮಹಾನಿರ್ದೇಶಕರಿಗೆ ಸೂಚಿಸಲಾಗಿತ್ತು. ಅವರು ಪ್ರಸ್ತಾವನೆ ಕಳುಹಿಸಿರುವುದಾಗಿ ನನಗೆ ತಿಳಿಸಿದ್ದಾರೆ. ಅದನ್ನು ನಾವು ಪರಿಶೀಲಿಸಿ ಸರ್ಕಾರದ ಮಟ್ಟದಲ್ಲಿ ಅನುಮೋದಿಸುತ್ತೇವೆ. ಆರಂಭದಲ್ಲಿ ಇದನ್ನು ಎರಡು ಜಿಲ್ಲೆಗಳಿಗೆ ಘೋಷಿಸಿದ್ದೇನೆ, ಈಗ ನಾವು ಅದನ್ನು ಕೋಮು ಸಮಸ್ಯೆಗಳಿರುವ ಎಲ್ಲಾ ಜಿಲ್ಲೆಗಳಿಗೂ ವಿಸ್ತರಿಸುವ ಸಾಧ್ಯತೆಯಿರುವುದಾಗಿ ತಿಳಿಸಿದರು.
ನೈತಿಕ ಪೊಲೀಸ್ ಗಿರಿ ಪ್ರಕರಣಗಳನ್ನು ಕಾರ್ಯಪಡೆಗೆ ವಹಿಸಲಾಗುವುದೇ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ನೈತಿಕ ಪೊಲೀಸ್ ಗಿರಿ ಪ್ರಕರಣಗಳು ಕೇವಲ ಸಾಮಾಜಿಕ ಸಮಸ್ಯೆಗಳಾದರೆ ಪೊಲೀಸರು ಅವುಗಳನ್ನು ನೋಡಿಕೊಳ್ಳುತ್ತಾರೆ. ಒಂದು ವೇಳೆ ಅವುಗಳು ಕೋಮು ಸ್ವರೂಪದಲ್ಲಿದ್ದರೆ ಅಂತಹವುಗಳನ್ನು ಕೋಮು ವಿರೋಧಿ ಕಾರ್ಯಪಡೆಗೆ ವಹಿಸಲಾಗುವುದು ಎಂದು ತಿಳಿಸಿದರು.
Advertisement