ಕೇಂದ್ರದಿಂದ ಸುಮಾರು ₹4,195 ಕೋಟಿ ಬಾಕಿ ಹಣ ಬಿಡುಗಡೆಯಾಗಿಲ್ಲ: ಸಿಎಂ ಸಿದ್ದರಾಮಯ್ಯ ವಾಗ್ದಾಳಿ

2024-25ರ ಸಾಲಿನಲ್ಲಿ ಕೇಂದ್ರ ಪುರಸ್ಕೃತ ಯೋಜನೆಗಳಡಿ ರಾಜ್ಯದ ಅನುದಾನ ₹24,960 ಕೋಟಿ ರೂಪಾಯಿಗಳು, ಕೇಂದ್ರದ ಅನುದಾನ ₹22,758 ಕೋಟಿಗಳಿದ್ದು ಕೇಂದ್ರದಿಂದ ₹18,561ಕೋಟಿ ಮಾತ್ರ ಬಿಡುಗಡೆ ಆಗಿದೆ. ₹4,195 ಕೋಟಿ ರೂಪಾಯಿಗಳು ಬಿಡುಗಡೆ ಆಗಿಲ್ಲ ಎಂದರು.
CM Siddaramaiah
ಸಿಎಂ ಸಿದ್ದರಾಮಯ್ಯ
Updated on

ಬೆಂಗಳೂರು: ಭದ್ರಾ ಮೇಲ್ದಂಡೆ ಯೋಜನೆ, ಮನ್ರೇಗಾ, ಹಿರಿಯ ನಾಗರಿಕರಿಗೆ ಪಿಂಚಣಿ ಸೇರಿದಂತೆ ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಬಾಕಿಯಿರುವ ಸುಮಾರು ₹4,195 ಕೋಟಿ ಹಣ ಬಿಡುಗಡೆಯಾಗಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ವಾಗ್ದಾಳಿ ನಡೆಸಿದ್ದಾರೆ.

ಕೇಂದ್ರ ಪುರಸ್ಕೃತ ಯೋಜನೆಗಳ ಪ್ರಗತಿ ಪರಿಶೀಲಿಸಲು ರಚಿಸಲಾದ ರಾಜ್ಯ ಮಟ್ಟದ ದಿಶಾ ಸಮಿತಿ ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ, ಸುಮಾರು 67 ಕೇಂದ್ರ ಪುರಸ್ಕೃತ ಯೋಜನೆಗಳಿದ್ದು, ಅವುಗಳ ಪ್ರಗತಿ ಪರಿಶೀಲನೆ ನಡೆಸಲಾಗಿದೆ. ಕೇಂದ್ರ ಪುರಸ್ಕೃತ ಯೋಜನೆಗಳಲ್ಲಿ ಕೇಂದ್ರ ಹಾಗೂ ರಾಜ್ಯದ ಪಾಲು 50:50, 60:40, 70:30 ರಷ್ಟಿರುತ್ತದೆ. ಕರ್ನಾಟಕದಲ್ಲಿ ಕೇಂದ್ರ ಪುರಸ್ಕೃತ ಯೋಜನೆಗಳಿಗೆ ₹46,859 ಕೋಟಿ ಖರ್ಚು ಮಾಡಲಾಗುತ್ತಿದೆ ಎಂದು ತಿಳಿಸಿದರು.

2024-25ರ ಸಾಲಿನಲ್ಲಿ ಕೇಂದ್ರ ಪುರಸ್ಕೃತ ಯೋಜನೆಗಳಡಿ ರಾಜ್ಯದ ಅನುದಾನ ₹24,960 ಕೋಟಿ ರೂಪಾಯಿಗಳು, ಕೇಂದ್ರದ ಅನುದಾನ ₹22,758 ಕೋಟಿಗಳಿದ್ದು ಕೇಂದ್ರದಿಂದ ₹18,561ಕೋಟಿ ಮಾತ್ರ ಬಿಡುಗಡೆ ಆಗಿದೆ. ₹4,195 ಕೋಟಿ ರೂಪಾಯಿಗಳು ಬಿಡುಗಡೆ ಆಗಿಲ್ಲ ಎಂದರು.

ರಾಜ್ಯದ ಪಾಲು ಹೆಚ್ಚಿರುವ ಕೇಂದ್ರ ಪುರಸ್ಕೃತ ಯೋಜನೆಗಳಡಿ ಶೇ. 83 ರಷ್ಟು ಅನುದಾನ ಖರ್ಚಾಗಿದ್ದು, ಕೇಂದ್ರದಿಂದ ತಡವಾಗಿ ಅನುದಾನ ಬಿಡುಗಡೆಯೂ ಸೇರಿದಂತೆ ಹಲವು ಸಮಸ್ಯೆಗಳನ್ನು ವಿಷಯಗಳನ್ನು ಅಧಿಕಾರಿಗಳು ವಿವರಿಸಿದ್ದಾರೆ. ಆದ್ದರಿಂದ 2025-26 ರ ಸಾಲಿನಿಂದ ಶೇ.100 ರಷ್ಟು ಅನುದಾನವನ್ನು ಖರ್ಚು ಮಾಡಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಕೇಂದ್ರ ಸರ್ಕಾರ ತನ್ನ ಪಾಲನ್ನು ನೀಡಲೇಬೇಕು. ಕೇಂದ್ರದ ಪಾಲು ನೀಡಲು ಪತ್ರ ಬರೆದಿರುವುದಾಗಿ ಹೇಳಿದರು.

CM Siddaramaiah
ಪಾಕಿಸ್ತಾನ ವಿರುದ್ಧ ನಡೆಸಿದ ಕಾರ್ಯಾಚರಣೆ ಕ್ರೆಡಿಟ್ ಭಾರತೀಯ ಸೇನೆಗೆ ಮಾತ್ರ ಸಲ್ಲಬೇಕು: ಸಿದ್ದರಾಮಯ್ಯ

ಕೇಂದ್ರ ಸರ್ಕಾರದಿಂದ ಬರಬೇಕಾದ ಪಿಂಚಣಿ ಎರಡು ವರ್ಷದಿಂದ ರಾಜ್ಯಕ್ಕೆ ಕೊಟ್ಟಿಲ್ಲ. ರಾಜ್ಯ ಸರ್ಕಾರ ನಿರಂತರವಾಗಿ ಒಟ್ಟು ರೂ. 5,665 ಕೋಟಿ ಪಿಂಚಣಿ ಕೊಡುತ್ತಲೇ ಬರುತ್ತಿದೆ. ಇದರಲ್ಲಿ 559 ಕೋಟಿ ಮಾತ್ರ ಕೇಂದ್ರ ಸರ್ಕಾರ ಕೊಡುತ್ತದೆ. ಈ ಸಣ್ಣ ಮೊತ್ತವನ್ನು ಕೇಂದ್ರ ಸರ್ಕಾರ ಎರಡು ವರ್ಷಗಳಿಂದ ಬಾಕಿ ಉಳಿಸಿಕೊಂಡಿದೆ ಯಾಕೆ ಎಂದು ಪ್ರಶ್ನಿಸಿದರು.

15ನೇ ಹಣಕಾಸು ಆಯೋಗದಲ್ಲಿ ರೂ.5,495 ಕೋಟಿ ಅನುದಾನ ಬಾಕಿ: 15ನೇ ಹಣಕಾಸು ಆಯೋಗದಲ್ಲಿ 5,495 ಕೋಟಿ ರೂ. ವಿಶೇಷ ಅನುದಾನ ಕೊಡಬೇಕು. ಕೆರೆ ಮತ್ತು ಫೆರಿಫೆರಲ್ ರಿಂಗ್ ರಸ್ತೆಗೆ ಕೊಡಬೇಕಾದ ಹಣ ಸೇರಿ ಒಟ್ಟು 11,495 ಕೋಟಿ ರೂ. ಕೇಂದ್ರದಿಂದ ಬರಬೇಕಿತ್ತು. ಏನನ್ನೂ ಕೊಡುತ್ತಿಲ್ಲ ಎಂದರು.

ರಾಜ್ಯದಿಂದ 4.5 ಲಕ್ಷ ಕೋಟಿ ತೆರಿಗೆ: ರಾಜ್ಯದಿಂದ 4.5 ಲಕ್ಷ ತೆರಿಗೆ ಕೊಟ್ಟರೂ ರಾಜ್ಯಕ್ಕೆ ಸಣ್ಣ ನೆರವೂ ಕೇಂದ್ರದಿಂದ ಬರುತ್ತಿಲ್ಲ. ಭದ್ರ ಮೇಲ್ದಂಡೆ ಯೋಜನೆಗೆ 2023-24 ರ ಕೇಂದ್ರ ಬಜೆಟ್ ನಲ್ಲಿ ರೂ. 5,360 ಕೋಟಿ ಅನುದಾನ ಘೋಷಣೆ ಆಗಿದ್ದರೂ ಒಂದು ರೂಪಾಯಿ ಕೂಡಾ ಈವರೆಗೆ ಬಿಡುಗಡೆ ಆಗಿಲ್ಲ. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಎರಡೂ ಬಾರಿ ನಿಯೋಗದೊಂದಿಗೆ ಭೇಟಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದರು.

ಅಭಿವೃದ್ದಿ ಯೋಜನೆಗಳಿಗೆ ಕೇಂದ್ರ ಸಕಾಲದಲ್ಲಿ ಹಣ ಬಿಡುಗಡೆ ಮಾಡದಿದ್ದರೆ ಅಭಿವೃದ್ಧಿ ಕಾರ್ಯಗಳು ಕೈಗೊಳ್ಳುವುದು ಹೇಗೆ ಎಂದು ಮುಖ್ಯಮಂತ್ರಿ ಪ್ರಶ್ನಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com