ಸರ್ಕಾರದಿಂದಲೇ ಇನ್ನು ಮುಂದೆ 108 ಆಂಬ್ಯುಲೆನ್ಸ್ ಸೇವೆ: ಸಚಿವ ದಿನೇಶ್ ಗುಂಡೂರಾವ್
ಬೆಂಗಳೂರು: 108 ಅಂಬ್ಯುಲೆನ್ಸ್ ಗಳ ನಿರ್ವಹಣೆಯನ್ನ ಖಾಸಗಿ ಏಜನ್ಸಿಗಳ ಹಿಡಿತದಿಂದ ತಪ್ಪಿಸಿ ರಾಜ್ಯ ಸರ್ಕಾರ ತನ್ನ ಹಿಡಿತಕ್ಕೆ ತೆಗೆದುಕೊಳ್ಳಲಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಸಚಿವರು 108 ಅಂಬ್ಯುಲೆನ್ಸ್ ಗಳನ್ನು ಇಲ್ಲಿಯ ವರೆಗೆ ಖಾಸಗಿ ಏಜನ್ಸಿಗಳು ನಿರ್ವಹಿಸುತ್ತಿದ್ದವು. ಈ ವ್ಯವಸ್ಥೆಯಲ್ಲಿ ಸಾಕಷ್ಟು ಸಮಸ್ಯೆಗಳಿದ್ದವು. ಹೀಗಾಗಿ ಇನ್ಮುಂದೆ ರಾಜ್ಯ ಸರ್ಕಾರವೇ 108 ಅಂಬ್ಯುಲೆನ್ಸ್ ಗಳ ನಿರ್ವಹಣೆಗೆ ಸಕಲ ಸಿದ್ಧತೆಗಳನ್ನ ಮಾಡಿಕೊಂಡಿದ್ದು, ಈಗಾಗಲೇ ಚಾಮರಾಜ ನಗರ ಜಿಲ್ಲೆಯಲ್ಲಿ ಪ್ರಾಯೋಗಿಕ ಕಾರ್ಯಾಚರಣೆ ಯಶಸ್ವಿಯಾಗಿ ನಡೆಸಲಾಗಿದೆ ಎಂದರು.
108 ಅಂಬ್ಯುಲೆನ್ಸ್ ಗಳ ಸೇವೆ ಸಾರ್ವಜನಿಕರ ಆರೋಗ್ಯ ರಕ್ಷಣೆಯಲ್ಲಿ ಬಹು ಮುಖ್ಯವಾದದ್ದು. ಖಾಸಗಿ ಏಜನ್ಸಿಯಿಂದ ಇದರ ನಿರ್ವಹಣೆ ಸಮರ್ಪಕವಾಗಿ ನಡೆಯುತ್ತಿರಲಿಲ್ಲ.. ಸರ್ಕಾರದಿಂದ ಏಜನ್ಸಿಗೆ ಹಣ ಪಾವತಿಯಾದರೂ, ಅಂಬ್ಯುಲೆನ್ಸ್ ಸಿಬ್ಬಂದಿಗಳಿಗೆ ಸರಿಯಾದ ಸಮಯಕ್ಕೆ ವೇತನ ಪಾವತಿಯಾಗುತ್ತಿರಲಿಲ್ಲ. ಸರ್ಕಾರ ಹಲವು ಬಾರಿ ಮದ್ಯಪ್ರವೇಶಿಸಿ ಅಂಬ್ಯುಲೆನ್ಸ್ ಡ್ರೈವರ್ ಗಳ ಸಮಸ್ಯೆಯನ್ನ ಬಗೆಹರಿಸಬೇಕಾಗಿತ್ತು. ಸರ್ಕಾರವೇ ನಿರ್ವಹಣೆ ಮಾಡುವುದರಿಂದ ಇನ್ಮುಂದೆ ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
108 ಅಂಬ್ಯುಲೆನ್ಸ್ ಗಳ ಮಾಲಿಕತ್ವ ಸರ್ಕಾರದ ಬಳಿ ಇದೆ. ಅಂಬ್ಯುಲೆನ್ಸ್ ಗಳಿಗೆ ಡಿಸೇಲ್, ಪೆಟ್ರೋಲ್ ನಿಂದ ಹಿಡಿದು ವಾಹನ ಚಾಲಕರ ವೇತನವನ್ನು ಕೂಡಾ ಸರ್ಕಾರವೇ ನೀಡುತ್ತಿತ್ತು. ಕೇವಲ ಒಂದು ಕಮಾಂಡ್ ಸೆಂಟರ್ ಮೂಲಕ ಖಾಸಗಿ ಏಜನ್ಸಿಯವರು ನಿರ್ವಹಣೆ ಮಾಡುತ್ತಿದ್ದರು. ಏಜನ್ಸಿಯ ಬದಲು ಆರೋಗ್ಯ ಇಲಾಖೆಯೇ ನಡೆಸಿದರೆ ಸರ್ಕಾರದ ಬೊಕ್ಕಸಕ್ಕೂ ನೂರಾರು ಕೋಟಿ ಹಣ ಉಳಿತಾಯವಾಗಲಿದೆ. ಅಲ್ಲದೇ ವ್ಯವಸ್ಥೆಯಲ್ಲೂ ಸುಧಾರಣೆ ತರಬಹುದು ಎಂಬ ಕಾರಣಕ್ಕೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಈಗಾಗಲೇ ಚಾಮರಾಜನಗರ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ 108 ಅಂಬ್ಯುಲೆನ್ಸ್ ನಿರ್ವಹಣೆಯನ್ನ ಆರೋಗ್ಯ ಇಲಾಖೆ ಯಶಸ್ವಿಯಾಗಿ ನಡೆಸಿದೆ. ಮುಂದಿನ ತಿಂಗಳಲ್ಲಿ ರಾಜ್ಯದ ಎಲ್ಲ ಸ್ಟೇಟ್ ಅಂಬ್ಯುಲೆನ್ಸ್ ಗಳನ್ನ ಇಲಾಖೆ ತನ್ನ ನಿರ್ವಹಣೆಯ ವ್ಯಾಪ್ತಿಗೆ ತೆಗೆದುಕೊಳ್ಳಲಿದೆ. ಇದಾದ ಬಳಿಕ ಮೂರು ತಿಂಗಳ ಒಳಗಾಗಿ 108 ಅಂಬ್ಯುಲೆನ್ಸ್ ಗಳನ್ನು ಆರೋಗ್ಯ ಇಲಾಖೆ ತನ್ನ ಕಮಾಂಡ್ ಕಂಟ್ರೋಲ್ ಸೆಂಟರ್ ವ್ಯಾಪ್ತಿಗೆ ತೆಗೆದುಕೊಂಡು ನಿರ್ವಹಣೆ ಕಾರ್ಯ ಕೈಗೆತ್ತಿಕೊಳ್ಳಲಿದೆ ಎಂದರು.
ಬೆಂಗಳೂರಿನಲ್ಲಿ ಒಂದು ಕಮಾಂಡ್ ಸೆಂಟರ್ ಹಾಗೂ ಪ್ರತಿ ಜಿಲ್ಲೆಗಳಲ್ಲೂ ಪ್ರತ್ಯೇಕ ಕಮಾಂಡ್ ಸೆಂಟರ್ ಗಳನ್ನ ರಚಿಸಲಾಗುವುದು ಎಂದು ಸಚಿವ ದಿನೇಶ್ ಗುಂಡೂರಾವ್ ಇದೇ ವೇಳೆ ತಿಳಿಸಿದರು.
ನಾವು ಯಾವುದೇ ವೇತನ ತಡೆ ಹಿಡಿದಿಲ್ಲ
30 ಸಾವಿರ ಸಿಬ್ಬಂದಿ ವೇತನವಾಗದ ವಿಚಾರವಾಗಿ ಪ್ರತಿಕ್ರಿಯಿಸಿದ್ದು, 2023-24 ರಲ್ಲಿ ಓಪನಿಂಗ್ ಬ್ಯಾಲೆನ್ಸ್ ಹೆಚ್ಚಿತ್ತು. ಆದರೆ ಕಳೆದ ಸರ್ಕಾರದಿಂದ ಓಪನಿಂಗ್ ಬ್ಯಾಲೆನ್ಸ್ ಕಡಿಮೆಯಾಗಿದೆ. ಹೀಗಾಗಿ ನಾವು ರಾಜ್ಯ ಸರ್ಕಾರದಿಂದ ಕೊಡಲು ಆಗುತ್ತಿಲ್ಲ. ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡಿಲ್ಲ. ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡದ ಹಿನ್ನೆಲೆ ತಡವಾಗಿದೆ. ಇನ್ನೆರಡು ಮೂರು ದಿನಗಳಲ್ಲಿ ವೇತನ ಆಗಬಹುದು. ನಾವು ಯಾವುದೇ ವೇತನ ತಡೆ ಹಿಡಿದಿಲ್ಲ ಎಂದರು.
ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮದಡಿ ಕರ್ತವ್ಯ ನಿರ್ವಹಿಸುತ್ತಿರುವ ಎಂಬಿಬಿಎಸ್ ವೈದ್ಯರು, ತಜ್ಞ ವೈದ್ಯರು ಹಾಗೂ ಎಸ್ಎನ್ಸಿಯು ಮತ್ತು ಐಸಿಯುದಲ್ಲಿ ಕಾರ್ಯನಿರ್ವಹಿಸುವ ಸ್ಟಾಫ್ ನರ್ಸ್ಗಳ ವೇತನ ಪರಿಷ್ಕರಿಸಿ ಗಣನೀಯವಾಗಿ ಹೆಚ್ಚಳ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ನಾನು ಯಾರಿಗೂ ಶಿಫಾರಸು ಮಾಡಿಲ್ಲ
ಕುಕ್ಕೆ ಸುಬ್ರಹ್ಮಣ್ಯ ವ್ಯವಸ್ಥಾಪನಾ ಆಡಳಿತ ಮಂಡಳಿ ಅಧ್ಯಕ್ಷರಾಗಿ ಹರೀಶ್ ಆಯ್ಕೆ ವಿಚಾರವಾಗಿ, ನಾನು ಯಾರಿಗೂ ಶಿಫಾರಸು ಮಾಡಿಲ್ಲ. ಚುನಾವಣೆ ಮೂಲಕವೇ ಹರೀಶ್ ಇಂಜಾಡಿ ಆಯ್ಕೆ ಮಾಡಿರುವುದು. ಇದು ಒಳ್ಳೆ ಬೆಳವಣಿಗೆ ಅಲ್ಲ. ಇದರ ಬಗ್ಗೆ ಮುಜರಾಯಿ ಇಲಾಖೆ ಸಚಿವರ ಜತೆ ಮಾತನಾಡುತ್ತೇನೆ. ರೂಲ್ಸ್ ಪ್ರಕಾರ ಹರೀಶ್ನನ್ನು ಬದಲಾವಣೆ ಮಾಡಲು ಆಗುವುದಿಲ್ಲ. 3 ವರ್ಷ ಅಧಿಕಾರಾವಧಿ ಇರುತ್ತದೆ ಈ ಬಗ್ಗೆ ಮಾಹಿತಿ ಪಡೆಯುತ್ತೇನೆ ಎಂದರು.
ನಾಳೆಯಿಂದ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಅಸ್ತಿತ್ವ ವಿಚಾರವಾಗಿ ಮಾತನಾಡಿದ ಅವರು, ಸರ್ಕಾರ ಬಂದ ಮೇಲೆ ಹೊಸ ಕಾಯಕಲ್ಪ ಕೊಟ್ಟಿದೆ. ಅಧಿವೇಶನದಲ್ಲಿ ಕೂಡ ಚರ್ಚೆ ಆಗಿ ಶಾಸಕರ ಸಮಿತಿ ವರದಿ ಕೊಟ್ಟು, ಸಾರ್ವಜನಿಕರ ಜೊತೆ ಚರ್ಚೆ ಆಗಿ ರಾಜ್ಯ ಲರು ಅನುಮೋದನೆ ಕೊಟ್ಟು ಮಾನ್ಯತೆ ಸಿಕ್ಕಿದೆ. ಬೆಂಗಳೂರು ವಿಶ್ವ ದರ್ಜೆ ನಗರ. ಆಡಳಿತ ವ್ಯವಸ್ಥೆ ಸುಧಾರಣೆ ಮಾಡುವ ಅವಶ್ಯಕತೆ ಇದೆ ಎಂದರು.