ಸರ್ಕಾರವೇ ಇನ್ನು ಮುಂದೆ 108 ಆ್ಯಂಬುಲೆನ್ಸ್ ಸೇವೆ ಒದಗಿಸುತ್ತದೆ. ಯಾವುದೇ ಏಜೆನ್ಸಿ ಮೂಲಕ ಕಾರ್ಯನಿರ್ವಹಿಸುವುದಿಲ್ಲ. ಈಗಾಗಲೇ ಚಾಮರಾಜನಗರ ಜಿಲ್ಲೆಯಲ್ಲಿ ಪ್ರಾಯೋಗಿಕ ಕಾರ್ಯಾಚರಣೆ ಯಶಸ್ವಿಯಾಗಿ ನಡೆಸಲಾಗಿದೆ. ಸಂಪೂರ್ಣ ಸೇವೆ ಹಾಗೂ ನಿರ್ವಹಣೆ ಸರ್ಕಾರವೇ ನಡೆಸಲು ಮುಂದಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂದಿನ ತಿಂಗಳಲ್ಲಿ ರಾಜ್ಯದ ಎಲ್ಲ ಸ್ಟೇಟ್ ಅಂಬ್ಯುಲೆನ್ಸ್ ಗಳನ್ನ ಇಲಾಖೆ ತನ್ನ ನಿರ್ವಹಣೆಯ ವ್ಯಾಪ್ತಿಗೆ ತೆಗೆದುಕೊಳ್ಳಲಿದೆ. ಇದಾದ ಬಳಿಕ ಮೂರು ತಿಂಗಳ ಒಳಗಾಗಿ 108 ಅಂಬ್ಯುಲೆನ್ಸ್ ಗಳನ್ನು ಆರೋಗ್ಯ ಇಲಾಖೆ ತನ್ನ ಕಮಾಂಡ್ ಕಂಟ್ರೋಲ್ ಸೆಂಟರ್ ವ್ಯಾಪ್ತಿಗೆ ತೆಗೆದುಕೊಂಡು ನಿರ್ವಹಣೆ ಕಾರ್ಯ ಕೈಗೆತ್ತಿಕೊಳ್ಳಲಿದೆ ಎಂದರು. 108 ಆ್ಯಂಬುಲೆನ್ಸ್ ಸಿಬ್ಬಂದಿ ಮೂರು ಶಿಫ್ಟ್ ಗಳಲ್ಲಿ ಕೆಲಸ ಮಾಡುವ ವಿಚಾರ ಏಜೆನ್ಸಿ ಮೂಲಕ ನಡೆಯುತ್ತದೆ ಎಂದು ಸಚಿವರು ತಿಳಿಸಿದ್ದಾರೆ.
ಭಾರತದಾದ್ಯಂತ ಈ ಬಾರಿಯ ನೈಋತ್ಯ ಮುಂಗಾರಿನಲ್ಲಿ ಸಾಮಾನ್ಯಕ್ಕಿಂತ ಶೇ.5 ರಷ್ಟು ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದ್ದಾರೆ. ಕರ್ನಾಟಕಕ್ಕೆ, ವಿಶೇಷವಾಗಿ ಬೆಂಗಳೂರಿನಂತಹ ನಗರ ಪ್ರದೇಶಗಳಲ್ಲಿ ಹೆಚ್ಚಿನ ಮಳೆಯಾಗುವ ಬಗ್ಗೆ ಕರ್ನಾಟಕದ ಹವಾಮಾನ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಮೇ 27 ರಂದು ಕೇರಳ ಕರಾವಳಿಯನ್ನು ಮುಂಗಾರು ತಲುಪುವ ಸಾಧ್ಯತೆಯಿದೆ. ಜಾಗತಿಕ ಹವಾಮಾನ ಅಂಶಗಳ ಆಧಾರದ ಮೇಲೆ ಇಡೀ ದೇಶಕ್ಕೆ ಹೆಚ್ಚಿನ ಮಳೆಯ ಮುನ್ಸೂಚನೆ ನೀಡಲಾಗಿದೆ. ದಕ್ಷಿಣ ಒಳನಾಡಿನಲ್ಲಿ ಹೆಚ್ಚುವರಿ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ ಎಂದು ಐಎಂಡಿ-ಬೆಂಗಳೂರಿನ ನಿರ್ದೇಶಕ ಎನ್.ಪುವಿಯರಸನ್ ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇಗುಲದ ವ್ಯವಸ್ಥಾಪನಾ ಆಡಳಿತ ಮಂಡಳಿ ಅಧ್ಯಕ್ಷನಾಗಿ ಮಾಜಿ ರೌಡಿಶೀಟರ್ ಹರೀಶ್ ಇಂಜಾಡಿ ನೇಮಕವಾಗಿರುವುದಕ್ಕೆ ಸ್ಥಳೀಯರಿಂದ ಆಕ್ಷೇಪ ವ್ಯಕ್ತವಾಗಿದೆ. ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರ ಆಯ್ಕೆ ದೇವಳದ ಆಡಳಿತ ಕಛೇರಿ ಸಭಾಂಗಣದಲ್ಲಿ ನಡೆದಿದೆ. ಹರೀಶ್ ಇಂಜಾಡಿ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಅಧ್ಯಕ್ಷ ಸ್ಥಾನಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಮತ್ತು MLC ಮಂಜುನಾಥ ಭಂಡಾರಿ ಕಾಂಗ್ರೆಸ್ ಮುಖಂಡ ಹಾಗೂ ಗ್ರಾಮ ಪಂಚಾಯಿತಿ ಸದಸ್ಯ ಹರೀಶ್ ಇಂಜಾಡಿ ಹೆಸರನ್ನು ಶಿಫಾರಸ್ಸು ಮಾಡಿದ್ದರು. ಆದರೆ ಹರೀಶ್ಗೆ ಅಧ್ಯಕ್ಷ ಸ್ಥಾನ ನೀಡಲು ಸುಬ್ರಹ್ಮಣ್ಯ ಗ್ರಾಮಸ್ಥರು ವಿರೋಧಿಸಿದ್ದರು. ಮರಳು ಮಾಫಿಯಾ ಮತ್ತು ಮರ ಕಳ್ಳ ಸಾಗಾಣೆ ಆರೋಪಿಸಿ ದಾಖಲೆ ಸಮೇತ ಧಾರ್ಮಿಕ ದತ್ತಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿಗೆ ಸುಬ್ರಹ್ಮಣ್ಯ ಗ್ರಾಮಸ್ಥರು ಪತ್ರ ಬರೆದಿದ್ದರು. ಆದರೆ ಗ್ರಾಮಸ್ಥರ ಮನವಿಯನ್ನು ಪರಿಗಣಿಸದೇ ಹರೀಶ್ ಇಂಜಾಡಿ ನೇಮಕ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಭಾರತ ಮತ್ತು ಪಾಕಿಸ್ತಾನ ಮಧ್ಯೆ ಸದ್ಯ ಕದನವಿರಾಮ ಘೋಷಿಸಲಾಗಿದ್ದರೂ ಉದ್ವಿಗ್ನ ಪರಿಸ್ಥಿತಿಗಳು ಮುಂದುವರೆದಿದ್ದು, ಕೆಲವು ಕಿಡಿಗೇಡಿಗಳು ಸುಳ್ಳು ಸುದ್ದಿಗಳನ್ನು ಹರಡುತ್ತಿದ್ದಾರೆ. ಬೆಳಗಾವಿ ಮೂಲದ ಕರ್ನಲ್ ಸೋಫಿಯಾ ಖುರೇಷಿ ಕುರಿತು ಸುಳ್ಳು ಸುದ್ದಿಯೊಂದು ವೈರಲ್ ಆಗಿದೆ. ಬೆಳಗಾವಿಯ ಸೋಫಿಯಾ ಪತಿ ಮನೆ ಮೇಲೆ ಆರ್ಎಸ್ಎಸ್ ಅಟ್ಯಾಕ್ ಮಾಡಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲಾಗಿದೆ. ಆದರೆ ಇದು ಸಂಪೂರ್ಣ ಸುಳ್ಳು ಸುದ್ದಿ ಎಂದು ಎಸ್ಪಿ ಭೀಮಾಶಂಕರ್ ಗುಳೇದ್ ಸ್ಪಷ್ಟನೆ ನೀಡಿದ್ದಾರೆ. ಅನಿಸ್ ಉದ್ದೀನ್ ಎಂಬಾತ ಟ್ವೀಟರ್ನಲ್ಲಿ ಮನೆ ಧ್ವಂಸದ ಯಾವುದೋ ಹಳೇ ಫೋಟೋವನ್ನು ಪೋಸ್ಟ್ ಮಾಡಿದ್ದಾನೆ. ಪೊಲೀಸರ ಗಮನಕ್ಕೆ ಬರುತ್ತಿದ್ದಂತೆ ಅನೀಸ್ ಉದ್ದೀನ್ ಸುಳ್ಳು ಸುದ್ದಿ ಪೋಸ್ಟ್ ಡಿಲಿಟ್ ಮಾಡಿದ್ದಾನೆ. ಗೋಕಾಕ್ ಪೊಲೀಸರು ಕರ್ನಲ್ ಸೋಫಿಯಾ ಖುರೇಷಿ ಅವರ ಮಾವನ ಮನೆಗೆ ಭೇಟಿ ನೀಡಿ, ಕುಟುಂಬಸ್ಥರಿಗೆ ಭದ್ರತೆ ಒದಗಿಸಿದ್ದಾರೆ.
ರೈಲ್ವೆ ಹಳಿ ಪಕ್ಕದಲ್ಲಿ, ಸಾಮೂಹಿಕವಾಗಿ ಅತ್ಯಾಚಾರವೆಸಗಿ ಕೊಲೆಗೈದ ಸ್ಥಿತಿಯಲ್ಲಿ ಬಾಲಕಿಯ ಮೃತದೇಹವೊಂದು ಅರೆ ನಗ್ನಾವಸ್ಥೆಯಲ್ಲಿ ಪತ್ತೆಯಾಗಿರುವ ಪ್ರಕರಣ ರಾಮನಗರ ಜಿಲ್ಲೆಯ ಬಿಡದಿಯಲ್ಲಿ ವರದಿಯಾಗಿದೆ. ಬಾಲಕಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿ 48 ಗಂಟೆಗಳು ಕಳೆದರೂ ಪರೀಕ್ಷೆ ವರದಿ ಬಂದಿಲ್ಲ. “ಮಗಳ ಮೇಲೆ ಅತ್ಯಾಚಾರವಾಗಿದೆ ಎಂದು ಹೇಳಿದರೂ ಪೊಲೀಸರು ನಂಬುತ್ತಿಲ್ಲ. ನ್ಯಾಯ ಸಿಗುವವರೆಗೂ ಶವಸಂಸ್ಕಾರ ಮಾಡುವುದಿಲ್ಲ”, ಎಂದು ಮನೆ ಮುಂದೆ ಮೃತದೇಹ ಇಟ್ಟುಕೊಂಡು ಪೋಷಕರು ಪಟ್ಟು ಹಿಡಿದಿದ್ದಾರೆ.
Advertisement