
ಬೆಂಗಳೂರು: ಕೌಶಲ್ಯ ಅಭಿವೃದ್ಧಿ ಇಲಾಖೆಯಲ್ಲಿನ ಎಲ್ಲಾ ಸಾಮಾನ್ಯ ವರ್ಗಾವಣೆಗಳನ್ನು ಇನ್ನು ಮುಂದೆ ಕೌನ್ಸಿಲಿಂಗ್ ಪ್ರಕ್ರಿಯೆಯ ಮೂಲಕ ನಡೆಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿ ಸಚಿವ ಶರಣ್ ಪ್ರಕಾಶ್ ಪಾಟೀಲ್ ಅವರು ಶುಕ್ರವಾರ ಘೋಷಿಸಿದ್ದಾರೆ.
ಇಂದು ಇಲಾಖಾ ಪರಿಶೀಲನಾ ಸಭೆಯಲ್ಲಿ, ಕೌಶಲ್ಯ ಅಭಿವೃದ್ಧಿ ಕಾರ್ಯದರ್ಶಿ ಏಕರೂಪ್ ಕೌರ್ ಅವರಿಗೆ ಹೊಸ ವ್ಯವಸ್ಥೆಗೆ ಸಮಗ್ರ ಮಾರ್ಗಸೂಚಿಗಳನ್ನು ರಚಿಸುವಂತೆ ಪಾಟೀಲ್ ಸೂಚಿಸಿದರು.
ನಿರ್ದಿಷ್ಟವಾಗಿ ಸಚಿವಾಲಯದ ಅಡಿಯಲ್ಲಿ ಉದ್ಯೋಗ ಮತ್ತು ತರಬೇತಿ ಇಲಾಖೆ (ಡಿಇಟಿ) ಅತಿ ಹೆಚ್ಚು ಉದ್ಯೋಗಸ್ಥರನ್ನು ಹೊಂದಿದೆ. ಪ್ರಭಾವ ಮತ್ತು ಶಿಫಾರಸುಗಳ ಮೂಲಕ ಆಗುತ್ತಿದ್ದ ವರ್ಗಾವಣೆ ಪ್ರಕ್ರಿಯೆಗಳಿಗೆ ಅಂತ್ಯ ಹಾಡಬೇಕಾಗಿದೆ. ಎಲ್ಲಾ ವರ್ಗಾವಣೆಗಳನ್ನು ಕೌನ್ಸಿಲಿಂಗ್ ಮೂಲಕ ಮಾಡಬೇಕು. ಇದು ಸಿಬ್ಬಂದಿಗೆ ಆದ್ಯತೆಯ ಸ್ಥಳಗಳಲ್ಲಿ ಹುದ್ದೆಗಳನ್ನು ಪಡೆಯಲು ಅನುವು ಮಾಡಿಕೊಡುತ್ತದೆ ಎಂದು ಶರಣ್ ಪ್ರಕಾಶ್ ಪಾಟೀಲ್ ತಿಳಿಸಿದರು.
ಸರ್ಕಾರಿ ನೌಕರರು ಮತ್ತು ಅಧಿಕಾರಿಗಳ ಸಾಮಾನ್ಯ ವರ್ಗಾವಣೆಗೆ ರಾಜ್ಯ ಸರ್ಕಾರ ಈಗಾಗಲೇ ಜೂನ್ 16ರ ಅಂತಿಮ ಗಡುವು ವಿಧಿಸಿದೆ ಎಂದು ಪಾಟೀಲ್ ನೆನಪಿಸಿದರು.
ಸರ್ಕಾರಿ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಲ್ಲಿ ವಿಫಲರಾಗಿರುವ ಹಿರಿಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸಚಿವರು, ಶೋಕಾಸ್ ನೋಟಿಸ್‌ಗಳನ್ನು ಹೊರಡಿಸಲು ಮತ್ತು ಸಂಬಂಧಪಟ್ಟ ಅಧಿಕಾರಿಗಳನ್ನು ವಿಳಂಬವಿಲ್ಲದೆ ವರ್ಗಾಯಿಸಲು ಇದೇ ಸಂದರ್ಭದಲ್ಲಿ ಇಲಾಖಾ ಕಾರ್ಯದರ್ಶಿಗಳಿಗೆ ನಿರ್ದೇಶನ ನೀಡಿದರು.
ಯುವಜನರ ಉದ್ಯೋಗ ಸಾಮರ್ಥ್ಯವನ್ನು ಹೆಚ್ಚಿಸುವ ಗುರಿ ಸಾಧಿಸಲು ಸರ್ಕಾರಿ ಉಪಕರಣ ಮತ್ತು ತರಬೇತಿ ಕೇಂದ್ರ (GTTC), ಕರ್ನಾಟಕ ಜರ್ಮನ್ ತಾಂತ್ರಿಕ ತರಬೇತಿ ಸಂಸ್ಥೆ (KGTTI) ಮತ್ತು ರಾಷ್ಟ್ರೀಯ ಜೀವನೋಪಾಯ ಮಿಷನ್ (NLM) ನಂತಹ ಸಂಸ್ಥೆಗಳಿಗೆ ಯುವನಿಧಿ ಯೋಜನೆ ಮತ್ತು ಉದ್ಯೋಗ ಮೇಳಗಳಿಗೆ ಅರ್ಜಿಗಳನ್ನು ಸಲ್ಲಿಸಲು ಅಲ್ಪಾವಧಿಯ ಮತ್ತು ದೀರ್ಘಾವಧಿಯ ಕೌಶಲ್ಯ ಅಭಿವೃದ್ಧಿ ತರಬೇತಿ ಕಾರ್ಯಕ್ರಮಗಳನ್ನು ಅಳವಡಿಸಲು ಸಚಿವರು ಸೂಚಿಸಿದರು.
Advertisement